ಕೊರೋನಾ ವೈರಸ್: ಅಮೆರಿಕದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

Update: 2020-03-14 03:42 GMT

ವಾಷಿಂಗ್ಟನ್: ಕೊರೋನಾ ವೈರಸ್ ವ್ಯಾಪಕವಾಗಿ ಹಬ್ಬಿರುವ ಹಿನ್ನೆಲೆಯಲ್ಲಿ ಈ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ಅಧಿಕ ಸಂಪನ್ಮೂಲ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಇದು ದೇಶದಲ್ಲಿ ಕೊರೋನಾ ವೈರಸ್ ಸೋಂಕಿನ ತೀವ್ರತೆಗೆ ಹಿಡಿದ ಕನ್ನಡಿಯಾಗಿದೆ.

ಈ ಸವಾಲನ್ನು ನಿಭಾಯಿಸುವ ನಿಟ್ಟಿನಲ್ಲಿ 50 ಶತಕೋಟಿ ಡಾಲರ್ ಹಣವನ್ನು ರಾಜ್ಯಗಳು ಹಾಗೂ ಪ್ರಾಂತ್ಯಗಳಿಗೆ ಮೀಸಲಿಡಲಾಗಿದೆ ಎಂದು ಟ್ರಂಪ್ ಪ್ರಕಟಿಸಿದ್ದಾರೆ.

ಈ ತುರ್ತು ಆರೋಗ್ಯ ಸ್ಥಿತಿಯಲ್ಲಿ ಉತ್ತಮ ಚಿಕಿತ್ಸೆ ನೀಡಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಆಸ್ಪತ್ರೆಗಳು ಹಾಗೂ ವೈದ್ಯರ ನಿಯಮಗಳನ್ನು ಸಡಿಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಅಮೆರಿಕದಲ್ಲಿ 1700ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು, 41 ಮಂದಿ ಇದುವರೆಗೆ ಮೃತಪಟ್ಟಿದ್ದಾರೆ.

ರಾಜ್ಯಗಳಿಗೆ ಮತ್ತು ಸ್ಥಳೀಯ ಆಡಳಿತಕ್ಕೆ ನೆರವು ನೀಡಲು ಅವಕಾಶ ನೀಡುವ 1988ರ ಕಾನೂನಿನಡಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ವಿಕೋಪ ಪರಿಹಾರ ನಿಧಿಯಿಂದ 42.6 ಶತಕೋಟಿ ಡಾಲರ್ ನೆರವು ತಕ್ಷಣಕ್ಕೆ ಲಭ್ಯವಿದೆ ಎಂದು ರಿಪಬ್ಲಿಕನ್ ಪಕ್ಷದ ಸೆನೆಟ್ ನಾಯಕ ಚಂಕ್ ಶುಮೆರ್ ಪ್ರಕಟಿಸಿದ್ದಾರೆ.

ಶುಮೆರ್ ಹಾಗೂ ಇತರ 35 ಮಂದಿ ಸೆನೆಟ್ ಸದಸ್ಯರು ತುರ್ತು ಪರಿಸ್ಥಿತಿ ಘೋಷಣೆಗೆ ಆಗ್ರಹಿಸಿ ಟ್ರಂಪ್‌ಗೆ ಬುಧವಾರ ಪತ್ರ ಬರೆದಿದ್ದರು. ಕೊರೋನಾ ನಿಭಾಯಿಸುವ ಅಮೆರಿಕ ಅಧ್ಯಕ್ಷರ ಕ್ರಮ ಈ ಮೊದಲು ವ್ಯಾಪಕ ಟೀಕೆಗೆ ಒಳಗಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News