ಕೊರೋನವೈರಸ್: ಸಿಲಿಕಾನ್ ಸಿಟಿಯಲ್ಲಿ ಜನಜೀವನ ತಲ್ಲಣ

Update: 2020-03-14 12:57 GMT

ಬೆಂಗಳೂರು, ಮಾ.14: ಕೊರೋನವೈರಸ್ ಭೀತಿಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಒಂದು ವಾರಗಳ ಕಾಲ ಅಘೋಷಿತ ತುರ್ತು ಪರಿಸ್ಥಿತಿ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಸಂಪೂರ್ಣ ಸ್ತಬ್ಧಗೊಂಡಿದೆ.

ರಾಜಧಾನಿಯಲ್ಲಿ ಸಾರ್ವಜನಿಕ ಸಾರಿಗೆ, ಮೆಟ್ರೋ, ರೈಲು ಸಂಚಾರ ಎಂದಿನಂತೆ ಚಾಲ್ತಿಯಲ್ಲಿದ್ದರೂ, ಜನರು ಸಂಚರಿಸಲು ಹಿಂಜರಿಯುತ್ತಿದ್ದಾರೆ. ಇಡೀ ನಗರದ ರಸ್ತೆಗಳು ಬಿಕೋ ಎನ್ನುತ್ತಿದ್ದು, 70 ಮತ್ತು 80 ಶಕವನ್ನು ನೆನಪಿಗೆ ತರುತ್ತಿವೆ.

ಸದಾ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಮಾರುಕಟ್ಟೆ ಪ್ರದೇಶ ಭಯಕ್ಕೆ ಬಿದ್ದು ಬಿಕೋ ಎನ್ನುತ್ತಿದೆ. ಜನರು ಗುಂಪುಗೂಡಲು ಹಿಂದೇಟು ಹಾಕುವ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಜನರಿಲ್ಲದೇ ಅಂಗಡಿ, ಮುಂಗಟ್ಟುಗಳು, ಮಾಲ್‌ಗಳು, ಸಿನಿಮಾ ಮಂದಿರಗಳು, ಮನರಂಜನಾ ಕೇಂದ್ರಗಳು, ಪಾರ್ಕ್‌ಗಳು ಬಣಗುಡುತ್ತಿವೆ. ಮಾಲ್‌ಗಳು, ಅಂಗಡಿಗಳು ಮುಚ್ಚಿರುವುದರಿಂದ ವ್ಯಾಪಾರ ವಹಿವಾಟಿನ ಮೇಲೆ ಗ್ರಹಣ ಬಡಿದಂತಾಗಿದೆ. ಹೊಟೇಲ್‌ಗಳಲ್ಲಿ ಗ್ರಾಹಕರಿಲ್ಲದೇ ಎದುರು ನೋಡುವ ಪರಿಸ್ಥಿತಿ ಉಂಟಾಗಿದೆ.

ಪಾರ್ಕ್‌ಗಳ ಬಾಗಿಲನ್ನು ಬೆಳಗ್ಗೆಯೇ ಮುಚ್ಚಿದ್ದರಿಂದ ವಾಯು ವಿಹಾರಿಗಳು ನಿರಾಸೆಯಿಂದ ಮನೆಯ ಕಡೆ ಹೆಜ್ಜೆ ಹಾಕುವಂತಾಯಿತು. ನಗರದ ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರಂ, ಯಶವಂತಪುರದ ಎಪಿಎಂಸಿ ಮಾರುಕಟ್ಟೆ ಸೇರಿದಂತೆ ನಿತ್ಯ ಜನ ಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಪ್ರಮುಖ ಮಾರುಕಟ್ಟೆಗಳಿಂದು ಖಾಲಿ ಹೊಡೆಯುತ್ತಿವೆ.

ಇಂದು ಎರಡನೆ ಶನಿವಾರ ಸರಕಾರಿ ರಜಾದಿನ ಆಗಿರುವುದರಿಂದ ನಗರದಲ್ಲಿ ಕೆಲಸ ಮಾಡುತ್ತಿದ್ದ ಅನೇಕರು ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ. ಅಲ್ಲದೆ, ಹಲವಾರು ಐಟಿ ಬಿಟಿ ಕಂಪೆನಿಗಳು ರಜೆ ಘೋಷಿಸಿ, ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿವೆ. ಇನ್ನು ಕೆಲವು ಕಾರ್ಖಾನೆಗಳೂ ಸಹ ರಜೆ ನೀಡಿದ್ದು, ಕಂಪೆನಿ, ಕಾರ್ಖಾನೆಗಳ ಕಡೆ ಕಾರ್ಮಿಕರು ಕಾಲಿಡದಂತಾಗಿದೆ.

ಅಲ್ಲದೆ, ನಗರದ ಪ್ರಮುಖ ವಾಣಿಜ್ಯ ಸಂಕೀರ್ಣಗಳು, ಐಶಾರಾಮಿ ಹೊಟೇಲ್‌ಗಳು ಹಾಗೂ ಸಣ್ಣಪುಟ್ಟ ಹೊಟೇಲ್‌ಗಳು ಜನರಿಲ್ಲದೆ ವ್ಯಾಪಾರ ಕುಸಿದಿದೆ. ಆಟೋ, ಟ್ಯಾಕ್ಸಿ ಸೇವೆಗಳು ಸ್ತಬ್ಧಗೊಂಡಿದ್ದು, ಮುಂದಿನ ಒಂದು ವಾರ ಕಾಲ ಹೇಗೆ ಜೀವನ ಸಾಗಿಸಬೇಕೆಂಬ ಚಿಂತೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಸಿಎಂ, ಸಚಿವರ ಪ್ರವಾಸ ರದ್ದು: ಕೊರೋನ ಸೋಂಕು ತಡೆಯಲು ರಾಜ್ಯ ಸರಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡು ಒಂದು ವಾರ ಯಾವುದೇ ಸಭೆ-ಸಮಾರಂಭ, ವಿಚಾರ ಸಂಕಿರಣ, ಹಬ್ಬ-ಜಾತ್ರೆಗಳನ್ನು ನಡೆಸಲು ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಎಲ್ಲ ಸಚಿವರು ತಮ್ಮ ಅಧಿಕೃತ ಪ್ರವಾಸಗಳನ್ನು ರದ್ದು ಮಾಡಿದ್ದಾರೆ.

ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಚಿವರು ಬಹುತೇಕ ಶನಿವಾರ ಮತ್ತು ರವಿವಾರ ಸ್ವಕ್ಷೇತ್ರಗಳಿಗೆ ತೆರಳಿ ಅಲ್ಲಿನ ಸಭೆ-ಸಮಾರಂಭ, ಮದುವೆ, ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಈಗ ಸರಕಾರವೇ ಎಲ್ಲವನ್ನು ರದ್ದು ಮಾಡಿರುವ ಹಿನ್ನೆಲೆಯಲ್ಲಿ ಎಲ್ಲ ಸಚಿವರು, ಶಾಸಕರು ತಮ್ಮೆಲ್ಲಾ ಕಾರ್ಯಕ್ರಮಗಳನ್ನು ಬದಿಗಿಟ್ಟಿದ್ದಾರೆ.

'ತಿಂಡಿ, ತಿನಿಸುಗಳ ಮಾರಾಟಕ್ಕಿರಲಿ ಎಚ್ಚರಿಕೆ'
ಕೊರೋನ ವೈರಸ್ ತಡೆಗೆ ಸರಕಾರ ಹಲವಾರು ಕ್ರಮ ಕೈಗೊಂಡಿದ್ದು, ಎಲ್ಲೆಂದರಲ್ಲಿ ಆಹಾರ ತಿನಿಸುಗಳನ್ನು ಮಾರಾಟ ಮಾಡದಂತೆ ಕಟ್ಟೆಚ್ಚರ ವಹಿಸಿ. ರಸ್ತೆ ಬದಿಯಲ್ಲಿ ಆಹಾರ ತಿನಿಸುಗಳ ಮಾರಾಟಕ್ಕೆ ಅವಕಾಶ ನೀಡಬೇಡಿ. ಫುಟ್‌ಪಾತ್‌ಗಳಲ್ಲಿ ಕೆಲವರು ಅನಧಿಕೃತವಾಗಿ ಆಟೋ, ಕಾರುಗಳಲ್ಲಿ ಆಹಾರಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು, ಅದಕ್ಕೆ ಅವಕಾಶ ನೀಡಬೇಡಿ. ಎಲ್ಲೆಡೆ ಸ್ವಚ್ಛತೆಗೆ ಗಮನ ನೀಡುವಂತೆ ಆಹಾರ ಸಚಿವ ಕೆ.ಗೋಪಾಲಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಾಸ್ಕ್‌ಗಳಿಗೆ ಬೇಡಿಕೆ...
ಕೊರೋನ ಸೋಂಕು ಭೀತಿ ಹಿನ್ನೆಲೆ ಸರಕಾರ ಜನದಟ್ಟಣೆ ಪ್ರದೇಶ ಪ್ರವೇಶಕ್ಕೆ ನಿರ್ಬಂಧ ಹೇರಿ, ಶಾಲಾ ಕಾಲೇಜುಗಳ ಬಂದ್‌ಗೆ ಆದೇಶಿಸಿದ ಒಂದೇ ದಿನದಲ್ಲೇ ಮುಂಜಾಗ್ರತಾ ಕ್ರಮವಾಗಿ ಧರಿಸುವ ಮುಖಗವಸುಗಳಿಗೆ (ಮಾಸ್ಕ್) ತೀವ್ರ ಬೇಡಿಕೆ ಸೃಷ್ಟಿಯಾಗಿದ್ದು, ಅದರ ಬೆಲೆಯೂ ಗಗನಕ್ಕೇರಿದೆ.

ಪಾರ್ಕ್‌ಗಳಿಗೆ ಬೀಗ
ರಾಜಧಾನಿಯಲ್ಲಿನ ಪ್ರಮುಖ ಪಾರ್ಕ್‌ಗಳಾದ ಕಬ್ಬನ್ ಪಾರ್ಕ್, ಲಾಲ್‌ಬಾಗ್, ಜೆಪಿ ಪಾರ್ಕ್ ಸೇರಿದಂತೆ ಎಲ್ಲ ಪಾರ್ಕ್‌ಗಳನ್ನು ಬಹುತೇಕ ಬಂದ್ ಮಾಡಲಾಗಿದೆ. ದಿನನಿತ್ಯ ಜನಜಂಗುಳಿಯಿಂದ ತುಂಬಿತುಳುಕುತ್ತಿದ್ದ ವಾಯುವಿಹಾರಿಗಳು ಬೆಳಗ್ಗೆ ಬಂದು ಮುಚ್ಚಿದ್ದನ್ನು ಕಂಡು ವಾಪಸ್ ಹೋಗುತ್ತಿದ್ದ ದೃಶ್ಯಗಳು ಕಂಡುಬಂದವು.

ಆರೆಸ್ಸೆಸ್ ಸಭೆ ರದ್ದು
ಮಾ.15ರಿಂದ ನಗರದ ಹೊರವಲಯ ಚೆನ್ನೇನಹಳ್ಳಿಯಲ್ಲಿ ನಡೆಯಬೇಕಿದ್ದ ಆರೆಸ್ಸೆಸ್‌ನ ಅಖಿಲ ಭಾರತೀಯ ಪ್ರತಿನಿಧಿ(ಎಬಿಪಿಎಸ್) ಸಭೆಯನ್ನು ರದ್ದು ಮಾಡಲಾಗಿದೆ. ಸರಕಾರ ಕೈಗೊಂಡಿರುವ ತೀರ್ಮಾನಕ್ಕೆ ಬೆಂಬಲ ವ್ಯಕ್ತಪಡಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರೆಸ್ಸೆಸ್ ಆಯೋಜಕರು ಹೇಳಿದ್ದಾರೆ.

ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ಆಚರಣೆ ಇಲ್ಲ
ಕೊರೋನ ಎಲ್ಲೆಡೆ ವ್ಯಾಪ್ತಿಸುತ್ತಿರುವ ಹಿನ್ನೆಲೆಯಲ್ಲಿ ನಟ ಪುನೀತ್ ರಾಜ್ ಕುಮಾರ್ ಮಾ.17 ರಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಂತೆ ನಿರ್ಧರಿಸಿದ್ದಾರೆ. ತಾವು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ. ಅಭಿಮಾನಿಗಳು ಯಾರೂ ಕೂಡ ಮನೆಯ ಬಳಿಗೆ ಬರಬೇಡಿ. ನಾನೂ ಮನೆಯಲ್ಲಿ ಇರುವುದಿಲ್ಲ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದು, ಸರಕಾರ ಕೈಗೊಂಡ ತೀರ್ಮಾನಕ್ಕೆ ಬದ್ಧರಾಗೋಣ. ಗುಂಪು ಸೇರುವುದು ಬೇಡ. ನಿಮ್ಮೆಲ್ಲರ ಪ್ರೀತಿ, ಅಭಿಮಾನಕ್ಕೆ ನಾನು ಚಿರಋಣಿ ಎಂದು ತಿಳಿಸಿದ್ದಾರೆ.

ಇನ್ಫೋಸಿಸ್ ಕಚೇರಿ ಸ್ಥಳಾಂತರ..
ಉದ್ಯೋಗಿ ಒಬ್ಬರಲ್ಲಿ ಕೊರೋನ ವೈರಾಣು ಸೋಂಕು ತಗಲಿರುವ ಶಂಕೆ ಹಿನ್ನೆಲೆಯಲ್ಲಿ ಇನ್ಫೋಸಿಸ್ ಸಂಸ್ಥೆ ಆ ಕಚೇರಿಯನ್ನೇ ಸ್ಥಳಾಂತರ ಮಾಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಐಐಪಿಎಂ ಕಟ್ಟಡದಲ್ಲಿರುವ ಕಚೇರಿಯನ್ನು ಸ್ಥಳಾಂತರ ಮಾಡಲಾಗಿದೆ ಎಂದು ಇನ್ಫೋಸಿಸ್‌ನ ಬೆಂಗಳೂರು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ಗುರುರಾಜ್ ದೇಶಪಾಂಡೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News