ಅಜ್ಜಿ ಹೇಳಿದ ಕತೆ

Update: 2020-03-15 04:38 GMT

ಒಂದು ಹಳ್ಳಿಯಲ್ಲಿ ಅಜ್ಜಿ ಮೊಮ್ಮಗ ಇಬ್ಬರು ವಾಸಿಸುತ್ತಿದ್ದರು. ಅಜ್ಜಿ ದಿನವೂ ರೊಟ್ಟಿ ಮಾಡಿ ಮೊಮ್ಮಗ ಬರುವ ತನಕ ಕಾಯುತ್ತಿದ್ದಳು. ಮೊಮ್ಮಗ ಗೆಳೆಯರ ಜೊತೆ ಆಟವಾಡಿಕೊಂಡು ಖುಷಿಯಿಂದ ಕಾಲ ಕಳೆಯುತ್ತಿದ್ದ. ಹೀಗಿರುವಾಗ ಒಂದು ದಿನ ಕಾಗೆಯೊಂದು ಅಜ್ಜಿಯ ಮನೆ ಎದುರು ಹಾರಿ ಬಂದು ಮರದ ಮೇಲೆ ಕುಳಿತಿತ್ತು. ರೊಟ್ಟಿಯ ಘಮ ಕಾಗೆಯನ್ನು ತಲುಪಿತು. ಅದು ಬಾಯಲ್ಲಿ ನೀರೂರಿ ‘‘ಅಜ್ಜಿ.. ಅಜ್ಜಿ... ನನಗೂ ರೊಟ್ಟಿ ಕೊಡು..’’ ಎಂದು ಕೇಳಿತು. ಆದರೆ ಅಜ್ಜಿ ‘‘ಇಲ್ಲ.. ಇಲ್ಲ... ನನ್ನ ಮೊಮ್ಮಗ ಈಗ ಬರುವವನಿದ್ದಾನೆ. ಅವನಿಗಾಗಿಯೇ ನಾನು ರೊಟ್ಟಿ ಮಾಡುವುದು. ಬೇರೆ ಯಾರಿಗೂ ಕೊಡುವುದಿಲ್ಲ’’ ಎಂದು ಹೇಳಿದಳು. ಕಾಗೆಗೆ ಬೇಸರವಾಗಿ ಅಲ್ಲಿಂದ ಹಾರಿಹೋಯಿತು.

ಆದರೆ ಅಲ್ಲೇ ಇದ್ದ ಇನ್ನೊಂದು ಮರದ ಕೊಂಬೆಯ ಮೇಲೆ ಕುಳಿತಿತ್ತು. ಹಸಿವು ತಡೆಯಲು ಸಾಧ್ಯವಾಗುತ್ತಿರಲಿಲ್ಲ. ಹಾಗೆಯೇ ರೊಟ್ಟಿಯ ಘಮ ಸುತ್ತಲೂ ಹರಡಿದ್ದ ಕಾರಣ ಅಲ್ಲಿಂದ ಕದಲಲೂ ಮನಸ್ಸಿರಲಿಲ್ಲ.

ಅದೇ ಸಮಯಕ್ಕೆ ಪುಟ್ಟ ಆಟವಾಡಿ ಮನೆ ಕಡೆಗೆ ಬಂದ. ಯಾವಾಗಲೂ ಏನಾದರೂ ಹಾಡು ಹಾಡುತ್ತ ತನ್ನದೇ ಲೋಕದಲ್ಲಿ ಮುಳುಗಿರುತ್ತಿದ್ದ. ಅಜ್ಜಿ ಅವನನ್ನು ಕರೆದು ‘‘ಪುಟ್ಟಾ... ಬೇಗ ಕೈಕಾಲು ತೊಳೆದು ಬಾ.. ನಿನಗೆ ಬಿಸಿಬಿಸಿ ರೊಟ್ಟಿ ಕೊಡುವೆನು ಹೊಟ್ಟೆ ತುಂಬಾ ತಿನ್ನುವಿಯಂತೆ..’’ ಎಂದಳು.

ಮೊಮ್ಮಗನೂ ಖುಷಿಯಿಂದ ಕೈಕಾಲು ತೊಳೆದು ರೊಟ್ಟಿ ತಿನ್ನಲು ಕುಳಿತ. ಅರ್ಧ ರೊಟ್ಟಿ ತಿನ್ನುವಾಗ ಅದೇನಾಯಿತೋ ಏನೋ? ಕೂಡಲೇ ಎದ್ದು ಮನೆಯ ಎದುರಿನ ಅಂಗಳಕ್ಕೆ ಹೋದ. ಮರದ ಮೇಲಿನ ಕಾಗೆಯ ನೋಡಿ ‘‘ಶ್...ಶ್..’’ ಎಂದು ಓಡಿಸಲು ಮುಂದಾದ. ಮತ್ತೆ ತನ್ನದೇ ಲೋಕದಲ್ಲಿ ಹಾಡು ಹೇಳುತ್ತ ಕುಣಿಯುತ್ತ ರೊಟ್ಟಿ ತಿನ್ನಲು ಶುರುಮಾಡಿದ. ಅವನ ಕುಣಿತಕ್ಕೆ ರೊಟ್ಟಿ ಕೈತಪ್ಪಿ ನೆಲಕ್ಕೆ ಬಿದ್ದಿತು. ಇದನ್ನೇ ಕಾಯುತ್ತಿದ್ದ ಕಾಗೆಯು ಪಕ್ಕನೆ ಬಂದು ರೊಟ್ಟಿಯನ್ನು ಕಚ್ಚಿಕೊಂಡು ಪುರ್ರನೆ... ಹಾರಿ ಹೋಯಿತು. ಮೊಮ್ಮಗನಿಗೆ ಗಲಿಬಿಲಿಯಾಯಿತು. ಕಾಗೆಗೆ ಹೊಡೆಯಲು ಕಲ್ಲನ್ನು ಎಸೆದ. ಆದರೂ ಅದು ತಪ್ಪಿಸಿಕೊಂಡು ಹಾರಿ ಹೋಯಿತು. ‘‘ಅಜ್ಜೀ..ನನ್ನ ರೊಟ್ಟಿ ಹೋಯಿತು....’’ ಎಂದು ಅಳುತ್ತಾ ಮನೆಯೊಳಗೆ ಓಡಿದ.

ಮಕ್ಕಳೇ ಪ್ರತಿಯೊಂದು ತುತ್ತಿನಲ್ಲೂ ಒಬ್ಬರ ಹೆಸರು ಬರೆದಿರುತ್ತದೆ. ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಆ ರೊಟ್ಟಿ ಕಾಗೆಗೆ ಸೇರಬೇಕಿತ್ತು. ಹಾಗಾಗಿ ಅಜ್ಜಿ ಕೊಡದೇ ಇದ್ದರೂ ಕೂಡ ಇನ್ನೊಂದು ರೂಪದಲ್ಲಿ ಕಾಗೆಗೆ ಸೇರಿತು. ಅಲ್ಲವೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News