ಭೂಮಿಯ ಮೇಲೆ ನೀರು ಇಲ್ಲದಿದ್ರೆ ಏನಾಗ್ತಿತ್ತು!

Update: 2020-03-22 09:28 GMT

ಇಂದು ವಿಶ್ವ ಜಲದಿನ. ನೀರಿನ ಮಹತ್ವ ಮತ್ತು ನೀರಿನ ಸಂರಕ್ಷಣೆ ಕುರಿತ ವಿಚಾರಗೋಷ್ಠಿಯ ಕಾರ್ಯಕ್ರಮಕ್ಕೆ ವಿವಿಧ ಶಾಲಾ ಮಕ್ಕಳು ಹಾಜರಾಗಿದ್ದರು. ಅದರಲ್ಲಿ ನಮ್ಮ ಪೆದ್ದು ಕೂಡಾ ಹಾಜರಾಗಿದ್ದ. ಸಮಾರಂಭದ ವೇದಿಕೆಯ ಮೇಲಿದ್ದ ಅತಿಥಿಗಳು ಜಲಸಂರಕ್ಷಣೆ ಬಗ್ಗೆ ಉಪನ್ಯಾಸ ನೀಡಿದರು. ಉಪನ್ಯಾಸದ ನಂತರ ಸಂವಾದ ಕಾರ್ಯಕ್ರಮವಿತ್ತು. ಭಾಗವಹಿಸಿದವರಿಗೆ ಪ್ರಶ್ನೆ ಕೇಳಲು ಅವಕಾಶ ನೀಡಲಾಯಿತು. ಮಕ್ಕಳು ವಿವಿಧ ಪ್ರಶ್ನೆಗಳನ್ನು ಕೇಳಿದರು. ಆದರೆ ಎಲ್ಲರಿಗಿಂತ ವಿಭಿನ್ನ ಪ್ರಶ್ನೆ ಕೇಳಿದವನು ನಮ್ಮ ಪೆದ್ದು. ಪೆದ್ದುನ ಪ್ರಶ್ನೆ ಹೀಗಿತ್ತು. ‘‘ಸರ್, ಭೂಮಿಯ ಮೇಲೆ ನೀರು ಇಲ್ಲದಿದ್ರೆ ಏನಾಗ್ತಿತ್ತು!?’’ ಎಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳೆಲ್ಲ ಗೊಳ್ಳೆಂದು ನಕ್ಕರು. ಆಯೋಜಕರಿಗೂ ನಗು ಬಂತು. ಆದರೆ ವೇದಿಕೆಯ ಮೇಲಿನ ಅತಿಥಿಗಳು ಪೆದ್ದುವಿನ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಿದರು. ಅದರಲ್ಲಿ ಒಬ್ಬ ಅತಿಥಿ ಎದ್ದು ನಿಂತುಕೊಂಡು ಪೆದ್ದುವನ್ನು ಅಭಿನಂದಿಸಿದರು. ಪೆದ್ದು ಕೇಳಿದ ಪ್ರಶ್ನೆ ಸೂಕ್ತವಾಗಿಯೇ ಇದೆ. ಪ್ರತಿಯೊಬ್ಬರೂ ಈ ಬಗ್ಗೆ ಯೋಚಿಸಲೇಬೇಕು ಮತ್ತು ಇದರ ಬಗ್ಗೆ ತಿಳಿದುಕೊಳ್ಳಲೇ ಬೇಕು ಎಂದು ಹೇಳಿ ಭೂಮಿಯ ಮೇಲೆ ನೀರು ಇಲ್ಲದಿದ್ರೆ ಏನಾಗ್ತಿತ್ತು ಎಂಬುದನ್ನು ತಿಳಿಸಿದರು.

ಭೂಮಿಯ ಮೇಲಿನ ಎಲ್ಲಾ ಜೀವಿಗಳಿಗೆ ನೀರು ಬೇಕೇ ಬೇಕು. ಪ್ರಾಣಿಗಳು ಹಾಗೂ ಸಸ್ಯಗಳಿಗೆ ನೀರು ಅತ್ಯಂತ ಪ್ರಮುಖವಾದ ನೈಸರ್ಗಿಕ ಸಂಪನ್ಮೂಲ. ಭೂಮಿಯ ಮೇಲೆ ಜೀವಿಗಳು ಹಾಗೂ ಮಾನವ ಇತಿಹಾಸವನ್ನು ಅಧ್ಯಯನ ಮಾಡಹೊರಟಾಗ ನಮಗೆ ಕಾಣುವ ಮೊದಲ ಉಪಯುಕ್ತ ಅಂಶವೆಂದರೆ ನೀರು. ಬಹುತೇಕ ಮಾನವ ನಾಗರಿಕತೆಗಳೆಲ್ಲ ನೀರಿನ ಮೂಲದ ಬಳಿಯೇ ಉಗಮವಾಗಿರುವುದನ್ನು ನಾವು ಇತಿಹಾಸದುದ್ದಕ್ಕೂ ಅಧ್ಯಯನ ಮಾಡುತ್ತೇವೆ. ಹಾಗಾಗಿ ಇಡೀ ಮಾನವ ಇತಿಹಾಸದಲ್ಲಿ ನೀರು ಪ್ರಮುಖವಾಗಿ ಬಳಕೆಯಾಗುವ ಉಪಯುಕ್ತ ಅಂಶವಾಗಿದೆ.

ಭೂಮಿಯ ಮೇಲೆ ನೀರು ಇಲ್ಲದಿದ್ರೆ ಬಹುತೇಕ ಜೀವಿಗಳ ಉಗಮವಾಗಲೀ, ಜೀವನವಾಗಲೀ ಸಾಗುತ್ತಲೇ ಇರಲಿಲ್ಲ. ಭೂಮಿಯ ಮೇಲಿನ ಬಹುತೇಕ ಜೀವಿಗಳ ಉಗಮಕ್ಕೆ ನೀರು ಪ್ರಮುಖ ವಸ್ತು. ನೀರು ಇಲ್ಲದ ಜಗತ್ತಿನಲ್ಲಿ ಬಹುತೇಕ ಜೀವಿಯೂ ಬದುಕಲಾರದು. ಸಸ್ಯಗಳು ಸೇರಿದಂತೆ, ಪ್ರಾಣಿ, ಪಕ್ಷಿ, ಕೀಟಗಳೆಲ್ಲವು ಬದುಕಲು ನೀರು ಅತ್ಯವಶ್ಯಕ. ಭೂಮಿಯ ಮೇಲೆ ನೀರು ಇಲ್ಲದಿದ್ರೆ ಬೇಸಿಗೆಯಲ್ಲಿ ತಂಪಾದ ಐಸ್ ಮತ್ತು ಜ್ಯೂಸ್ ತಯಾರಿಸಲು ಆಗುತ್ತಿರಲಿಲ್ಲ. ದೇಹವನ್ನು ಸ್ವಚ್ಛವಾಗಿಡಲು ಆಗುತ್ತಿರಲಿಲ್ಲ. ಊಟಕ್ಕೂ ಮೊದಲು ಮತ್ತು ನಂತರ ಕೈತೊಳೆಯುವ ಕಿರಿಕಿರಿ ಇರುತ್ತಿರಲಿಲ್ಲ ಅಲ್ಲವೇ? ಬೆಳಗ್ಗೆ ಎದ್ದ ತಕ್ಷಣ ಬ್ರಶ್ ಮಾಡುವ ಅಗತ್ಯವೇ ಇರುತ್ತಿರಲಿಲ್ಲ. ಪದೇ ಪದೇ ನೀರು ಕುಡಿಯಬೇಕಾದ ಅನಿವಾರ್ಯ ಇರುತ್ತಿರಲಿಲ್ಲ. ನೀರು ಕುಡಿಯದೇ ಇದ್ದರೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ದೇಹ ನಿರ್ಜಲೀಕರಣ (ಡಿಹೈಡ್ರೆಶನ್)ದಿಂದ ಬಳಲುತ್ತಿತ್ತು. ಪಾತ್ರೆ ಮತ್ತು ಬಟ್ಟೆಗಳನ್ನು ತೊಳೆದು ಸ್ವಚ್ಛ ಮಾಡುವ ಕೆಲಸ ಇರುತ್ತಿರಲಿಲ್ಲ. ವಾಹನಗಳನ್ನು ತೊಳೆಯುವ ತಾಪತ್ರಯ ಇರುತ್ತಿರಲಿಲ್ಲ.

ಭೂಮಿಯ ಮೇಲೆ ನೀರು ಇಲ್ಲದಿದ್ರೆ ಸಾಗರಗಳೆಲ್ಲ ಖಾಲಿಯಾಗಿರುತ್ತಿದ್ದವು. ಭೂಮಿಯ ವಾತಾವರಣ ಈಗಿನಂತೆ ಇರುತ್ತಿರಲಿಲ್ಲ. ಸಾಗರದಲ್ಲಿ ಬದುಕಿರುವ ಕೋಟ್ಯಂತರ ಜಲಚರಗಳು ಇರುತ್ತಿರಲಿಲ್ಲ. ಆಕಾಶ ನೀಲಿಯಾಗಿ ಕಾಣುತ್ತಿರಲಿಲ್ಲ, ಭೂಮಿಯಲ್ಲಿ ಹಸಿರು ಇರುತ್ತಿರಲಿಲ್ಲ. ಭೂಮಿಯ ಮೇಲೆ ನೀರು ಇರದಿದ್ದರೆ ಭೂಮಿ ಶುಕ್ರ ಗ್ರಹದ ಬರಡು ನೆಲದಂತೆ ಕಂಡುಬರುತ್ತಿತ್ತು. ಭೂಮಿಯ ಮೇಲೆ ನೀರು ಇರದಿದ್ದರೆ ಜಲಚಕ್ರವೇ ಇರುತ್ತಿರಲಿಲ್ಲ. ಮೋಡಗಳು ರಚನೆಯಾಗುತ್ತಿರಲಿಲ್ಲ. ಮೋಡಗಳಿಲ್ಲದೇ ಮಳೆಯೂ ಇಲ್ಲ, ಬೆಳೆಯೂ ಇಲ್ಲ, ಆಹಾರದ ಉತ್ಪಾದನೆಯೂ ಇಲ್ಲ. ಆಹಾರ ಇಲ್ಲದೇ ಜೀವಿಗಳ ಬದುಕೂ ಸಹ ಇರುತ್ತಿರಲಿಲ್ಲ. ಇಡೀ ಭೂ ಪ್ರದೇಶ ಮರುಭೂಮಿಯಂತೆ ಬಂಜರು ನೆಲವಾಗುತ್ತಿತ್ತು. ಭೂಮಿಯ ಮೇಲೆ ಗಿಡಮರಗಳು ಕಾಣುತ್ತಲೇ ಇರಲಿಲ್ಲ. ಜಲಚಕ್ರ ಪ್ರಕ್ರಿಯೆ ಇಲ್ಲದೇ ಕಾರ್ಬನ್ ಸಿಲಿಕೇಟ್ ಪ್ರಕ್ರಿಯೆ ಸ್ಥಗಿತಗೊಳ್ಳುತ್ತಿತ್ತು.

ಭೂಮಿಯ ಮೇಲೆ ನೀರು ಇಲ್ಲದಿದ್ರೆ ಭೂ ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗುತ್ತಿತ್ತು. ಭೂಮಿಯ ಒಳಗಿನ ಉಷ್ಣತೆಯೂ ಸಹ ಹೆಚ್ಚಾಗಿ ಎಲ್ಲೆಲ್ಲೂ ಜ್ವಾಲಾಮುಖಿಗಳ ರುದ್ರನರ್ತನ ಕಂಡುಬರುತ್ತಿತ್ತು. ಇಡೀ ಭೂಮೇಲ್ಮೈ ಶಿಲಾಪಾಕದಿಂದ ಆವೃತ್ತವಾಗಿರುತ್ತಿತ್ತು. ಭೂಮಿಯ ಮೇಲೆಲ್ಲಾ ಶಿಲಾಪಾಕದ ಗುಡ್ಡ ಬೆಟ್ಟಗಳು ನಿರ್ಮಾಣವಾಗುತ್ತಿದ್ದವು. ಆಂತರಿಕ ಭೂ ಉಷ್ಣತೆಯಿಂದ ಭೂ ಪಲಕಗಳು ಪರಸ್ಪರ ಢಿಕ್ಕಿ ಹೊಡೆದುಕೊಳ್ಳುತ್ತಿದ್ದವು. ಇದರಿಂದ ಭಾರೀ ಪ್ರಮಾಣದ ಭೂಕಂಪಗಳು ಸಂಭವಿಸುತ್ತಿದ್ದವು. ವಾತಾವರಣದಲ್ಲಿ ಆಕ್ಸಿಜನ್ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತಿತ್ತು. ಹಸಿರುಮನೆ ಅನಿಲಕ್ಕೆ ಕಾರಣವಾದ ಇಂಗಾಲದ ಡೈ ಆಕ್ಸೈಡ್ ಮತ್ತು ಇಂಗಾಲದ ಮೋನಾಕ್ಸೈಡ್‌ನ ಪ್ರಮಾಣ ಹೆಚ್ಚುತ್ತಿತ್ತು. ಭೂಮಿಯ ಮೇಲೆ ನೀರು ಇಲ್ಲದಿದ್ದರೆ ನೈಟ್ರಸ್ ಆಕ್ಸೈಡ್ ಮತ್ತು ಸಲ್ಫರ್ ಡೈ ಆಕ್ಸೈಡ್‌ಗಳು ಅಧಿಕ ಪ್ರಮಾಣದಲ್ಲಿ ಬಿಡುಗಡೆಯಾಗುತ್ತಿದ್ದವು. ಆಗ ಭೂ ವಾತಾವರಣದಲ್ಲಿ ನೀರಾವಿ ಇಲ್ಲದೇ ಕೇವಲ ಅನಿಲಗಳ ಮೋಡವೇ ಆವರಿಸುತ್ತಿತ್ತು. ಭೂಮಿಯ ಮೇಲೆ ನೀರು ಇಲ್ಲದಿದ್ರೆ ಭೂಮಿಯ ಮೇಲಿನ ಪ್ರತಿಯೊಂದು ವಸ್ತುವೂ ಸುಲಭವಾಗಿ ದಹನಕ್ರಿಯೆಗೆ ಒಳಪಡುತ್ತಿದ್ದವು. ಭೂಮಿಯ ಮೇಲಿನ ಹವಾಮಾನ ಮತ್ತು ವಾಯುಗುಣಗಳು ಸಂಪೂರ್ಣವಾಗಿ ಬದಲಾಗಿರುತ್ತಿತ್ತು. ಭೂಮಿಯ ಮೇಲೆ ನೀರು ಇಲ್ಲದಿದ್ರೆ ಜಲ ಸಾರಿಗೆ ಎಂಬ ಸಾರಿಗೆಯ ವಿಧಾನವೇ ಇರುತ್ತಿರಲಿಲ್ಲ. ತೆಪ್ಪ, ದೋಣಿ, ಹಡಗು, ನಾವಿಕ, ಅಂಬಿಗ ಎಂಬ ಪದಗಳ ಬಳಕೆಯ ಪ್ರಸಂಗವೇ ಬರುತ್ತಿರಲಿಲ್ಲ. ದೋಣಿ ಮುಳುಗಿ ಜನರ ಸಾವು ಎಂಬ ಸುದ್ದಿ ಬರುತ್ತಲೇ ಇರಲಿಲ್ಲ. ನೀರು ಇಲ್ಲದಿದ್ರೆ ರಾಜ್ಯ ರಾಜ್ಯಗಳ ನಡುವೆ ಮತ್ತು ರಾಷ್ಟ್ರ ರಾಷ್ಟ್ರದ ನಡುವೆ ಜಲ ಜಗಳಗಳು ನಡೆಯುತ್ತಲೇ ಇರಲಿಲ್ಲ. ನೀರು ಇಲ್ಲದಿದ್ರೆ ಈಜುಗಾರಿಕೆ ಎಂಬ ಪದವೇ ಇರುತ್ತಿರಲಿಲ್ಲ. ನೀರು ಇಲ್ಲದಿದ್ರೆ ಕೆರೆ, ಸರೋವರ, ನದಿ, ಹಳ್ಳಗಳ ಕಲ್ಪನೆಯೇ ಇರುತ್ತಿರಲಿಲ್ಲ. ಅಣೆಕಟ್ಟು ಮತ್ತು ಸೇತುವೆಗಳ ನಿರ್ಮಾಣವಾಗುತ್ತಿರಲಿಲ್ಲ.

ಭೂಮಿಯ ಮೇಲೆ ನೀರಿಲ್ಲ ಎಂದೊಡದೆ ಎಲ್ಲಾ ಜೀವಿಗಳು ನಿರ್ನಾಮ ಹೊಂದುತ್ತವೆ ಎಂಬುದು ಸರಿಯಲ್ಲ. ಎಕ್ಸ್ಟ್ರಿಮೋಪೈಲ್ಸ್ ಎಂದು ಕರೆಯಲ್ಪಡುವ ಸೂಕ್ಷ್ಮಾಣು ಜೀವಿಗಳು ನೀರು ಇಲ್ಲದೆಯೂ ಬದುಕುವ ಸಾಮರ್ಥ್ಯ ಪಡೆದಿವೆ. ಅವು ಕಾರ್ಬನ್ ಮೋನಾಕ್ಸೈಡ್‌ನಿಂದ ತಮ್ಮ ಆಹಾರ ತಯಾರಿಸಿಕೊಳ್ಳುವ ಶಕ್ತಿ ಹೊಂದಿವೆ. ಎಕ್ಸ್ಟ್ರಿಮೋಪೈಲ್ಸ್‌ಗಳು ನೀರು ಅಥವಾ ಸೂರ್ಯನ ಶಾಖ ಇಲ್ಲದೆ ಆಮ್ಲೀಯ ವಾತಾವರಣ ಅಥವಾ ಹಬೆಯ ಬಿಸಿಯಲ್ಲೂ ಸಹ ಅವು ಆಹಾರ ತಯಾರಿಸಿಕೊಂಡು ಬದುಕುತ್ತವೆ. ಭೂಮಿಯ ಮೇಲೆ ನೀರು ಇಲ್ಲದಿದ್ರೆ ಏನಾಗ್ತಿತ್ತು ಎಂಬ ಪೆದ್ದುವಿನ ಪ್ರಶ್ನೆಗೆ ಅತಿಥಿಗಳು ಸುಧೀರ್ಘವಾದ ಉಪನ್ಯಾಸ ನೀಡಿದರು. ಪ್ರಾರಂಭದಲ್ಲಿ ಪೆದ್ದುವಿನ ಪ್ರಶ್ನೆ ಕೇಳಿ ಮುಸಿ ಮುಸಿ ನಕ್ಕವರೆಲ್ಲ ಪೆದ್ದುವನ್ನು ಅಭಿನಂದಿಸಿ ಮನೆಯತ್ತ ಹೆಜ್ಜೆ ಹಾಕಿದರು. ನಮ್ಮ ಪೆದ್ದು ಈಗ ಹೀರೋ ಆಗಿದ್ದ.

Writer - ಆರ್.ಬಿ. ಗುರುಬಸವರಾಜ

contributor

Editor - ಆರ್.ಬಿ. ಗುರುಬಸವರಾಜ

contributor

Similar News