ಕೊರೊನಾವೈರಸ್ ಭೀತಿ: ರಾಜ್ಯಾದ್ಯಂತ 7, 8, 9ನೆ ತರಗತಿಗಳ ಪರೀಕ್ಷೆ ಮುಂದೂಡಿಕೆ

Update: 2020-03-15 11:43 GMT

ಬೆಂಗಳೂರು, ಮಾ. 15: ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಸೋಂಕು ತಡೆಗಟ್ಟುವ ದೃಷ್ಟಿಯಿಂದ ರಾಜ್ಯಾದ್ಯಂತ 7, 8 ಮತ್ತು 9ನೆ ತರಗತಿ ವಾರ್ಷಿಕ ಪರೀಕ್ಷೆಯನ್ನು ಮಾ.31ರ ವರೆಗೆ ಮುಂದೂಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಈಗಾಗಲೇ 1ನೆ ತರಗತಿಯಿಂದ 6ನೆ ತರಗತಿಯ ವರೆಗೆ ರಜೆ ಘೋಷಿಸಲಾಗಿದ್ದು, ಪರೀಕ್ಷಾ ಪೂರ್ವ ಸಿದ್ಧತಾ ರಜೆಯಲ್ಲಿರುವ 7ರಿಂದ 10ನೆ ತರಗತಿ ವಿದ್ಯಾರ್ಥಿಗಳು ಪರೀಕ್ಷೆಗೆ ಮಾತ್ರ ಹಾಜರಾಗುವಂತೆ ಸೂಚಿಸಲಾಗಿತ್ತು. ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವುದರಿಂದ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆಗಳಿದ್ದು, ಮುನ್ನಚ್ಚರಿಕೆ ಕ್ರಮವಾಗಿ 7ರಿಂದ 9ನೆ ತರಗತಿ ವರೆಗಿನ ಪರೀಕ್ಷೆಯನ್ನು ಮಾ.31ರ ವರೆಗೆ ಮುಂದೂಡಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಅಲ್ಲಿಯವರೆಗೆ ಈ ವಿದ್ಯಾರ್ಥಿಗಳು ಪರೀಕ್ಷಾ ಪೂರ್ವ ಸಿದ್ಧತಾ ರಜೆಯನ್ನು ಘೋಷಿಸಿದೆ. ಪರೀಕ್ಷೆಯ ಹೊಸ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ಮಾಹಿತಿ ನೀಡಿದೆ.

ಬದಲಾವಣೆ ಇಲ್ಲ: 10ನೆ ತರಗತಿಯ ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನಿಗಿದಿಯಂತೆ ಮಾ.27ರಿಂದ ಎಪ್ರಿಲ್ 9ರ ವರೆಗೆ ಎಸೆಸೆಲ್ಸಿ ಪರೀಕ್ಷೆಗಳು ನಡೆಯಲಿದ್ದು, ಆಯಾ ದಿನಗಳಂದು ಮಾತ್ರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

‘ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸಿಎಂ ಸೂಚನೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 7, 8, 9ನೆ ತರಗತಿ ಪರೀಕ್ಷಾಗಳನ್ನು ಮಾ.31ರ ವರೆಗೆ ಮುಂದೂಡಿದ್ದು, ಈ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ದತಾ ರಜೆ ಘೋಷಿಸಲಾಗಿದೆ. ಮಾ.31ರ ನಂತರ 7, 8, 9ನೆ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗುವುದು’
-ಎಸ್.ಸುರೇಶ್‌ಕುಮಾರ್, ಶಿಕ್ಷಣ ಸಚಿವ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News