×
Ad

ಸಾಧಾರಣ ಕೆಮ್ಮು, ಜ್ವರಕ್ಕೂ ಹೆದರುವ ರೋಗಿಗಳು: ಬಿಬಿಎಂಪಿ ಆಸ್ಪತ್ರೆಗಳು ಬಣಬಣ

Update: 2020-03-15 17:40 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ. 15: ಬಿಬಿಎಂಪಿ ಹೆರಿಗೆ ಆಸ್ಪತ್ರೆಗಳು, ನಗರ ಆರೋಗ್ಯ ಕುಟುಂಬ ಕಲ್ಯಾಣ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಶೀತ, ತಲೆನೋವು ಸೇರಿ ಸಣ್ಣ-ಪುಟ್ಟ ಆರೋಗ್ಯದ ವಿಷಯಕ್ಕೆ ಬರುತಿದ್ದ ಜನರು ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಆಸ್ಪತ್ರೆ ಎಂದರೆ ಹೆದರುವ ಪರಿಸ್ಥಿತಿಗೆ ಬಂದಿದ್ದಾರೆ.

ಪಾಲಿಕೆ ಆಸ್ಪತ್ರೆಗಳಿಗೆ ಮೊದಲಿನಂತೆ ಬರುತ್ತಿದ್ದ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಕೊರೋನಾ ಸೋಂಕು ಹರಡುತ್ತಿದ್ದು, ಆರೋಗ್ಯ ಇಲಾಖೆ ತುರ್ತು ಕ್ರಮಗಳನ್ನು ಕೈಗೊಂಡಿದ್ದು, ಸೋಂಕು ನಿಯಂತ್ರಣಕ್ಕೆ ಬರುವವರೆಗೂ ಬಿಬಿಎಂಪಿ ಮುಂಬರುವ ಎಲ್ಲ ಸಾರ್ವತ್ರಿಕ ರಜಾ ದಿನಗಳಂದು, ಪಾಲಿಕೆಯ ಎಲ್ಲ ವೈದ್ಯರು, ಕಚೇರಿ ಸಿಬ್ಬಂದಿ, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ರಜೆ ರದ್ದುಗೊಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಸುಧಾರಿಸುವವರೆಗೂ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯರೂ ಮುಂದಾಗಿದ್ದಾರೆ. ಆದರೆ, ರೋಗಿಗಳು ತಮಗೆ ಸಾಧಾರಣ ಜ್ವರ, ಶೀತ ನೆಗಡಿ ಇದ್ದರೂ ಕೊರೋನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಆಸ್ಪತ್ರೆ ಕಡೆ ಬರಲು ರೋಗಿಗಳು ಹೆದರುತಿದ್ದಾರೆ.

ಈ ಮೊದಲು ರೋಗಿಗಳು ಸಾಧಾರಣ ಕೆಮ್ಮು, ಶೀತ, ಜ್ವರ ಬಂದರೆ ಬಿಬಿಎಂಪಿ ಆಸ್ಪತ್ರಗಳಿಗೆ ಬರುತ್ತಿದ್ದರು. ಅದರಲ್ಲೂ ಕಾಲರಾ, ಟೈಪಾಯಿಡ್, ಡೆಂಗ್ ಹಾಗೂ ಇತರೆ ರೋಗಗಳಿಂದ ಬಳಲುತಿದ್ದ ರೋಗಿಗಳು ಬಿಬಿಎಂಪಿ ಆಸ್ಪತ್ರೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದರು. ಆದರೆ, ಕೊರೋನಾ ಭೀತಿ ಹೆಚ್ಚಾದ ಬಳಿಕೆ ಬಿಬಿಎಂಪಿ ಆಸ್ಪತ್ರೆಗಳಿಗೆ ಬರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗಿದೆ.

ಕೊರೋನಾ ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆರೋಗ್ಯಾಧಿಕಾರಿಗಳು, ವೈಧ್ಯಾಧಿಕಾರಿಗಳು, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಸ್ವಯಂಸೇವಕರ ತಂಡಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಸೋಂಕು ಹರಡಿರುವ ಪ್ರದೇಶದಲ್ಲಿ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಯೋಜನೆ ರೂಪಿಸಲಾಗಿದೆ. ಕೊರೊನಾ ಭೀತಿಯಿಂದ ಸಾಧಾರಣ ಜ್ವರ, ಕೆಮ್ಮು, ಶೀತದಿಂದ ಬಳುಲುವ ರೋಗಿಗಳು ಹೆದರುವುದು ಸರಿಯಲ್ಲ. ಏನೇ ಇದ್ದರೂ ಆಸ್ಪತ್ರೆಗಳಿಗೆ ರೋಗಿಗಳು ಬರಬೇಕು ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ವಿಜೇಂದ್ರ ತಿಳಿಸಿದ್ದಾರೆ.

'ನ-97 ಮಾಸ್ಕ್‌ಗಳನ್ನೇ ಬಳಸಬೇಕಿಲ್ಲ': ಕೊರೋನಾ ವೈರೆಸ್ ಸೋಂಕು ತಡೆಯಲು ನ-97 ಮಾಸ್ಕ್‌ಗಳನ್ನೇ ಬಳಸಬೇಕಿಲ್ಲ. ತ್ರಿಪಲ್ ಲೇಯರ್ ಮಾಸ್ಕ್‌ಗಳನ್ನು ಬಳಸಿದರೆ ಸಾಕು. ಯಾರಾದರು ಹೊರದೇಶಗಳಿಗೆ ಪ್ರಯಾಣ ಮಾಡಿದ್ದು, ರೋಗದ ಲಕ್ಷಣಗಳು ಕಂಡುಬಂದಲ್ಲಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಇಲ್ಲವಾದಲ್ಲಿ ಸಹಾಯವಾಣಿ 104ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ಅಲ್ಲದೆ, ಪಾಲಿಕೆ ಆರೋಗ್ಯಾಧಿಕಾರಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಮಾಹಿತಿ ನೀಡಲಿದೆ.

‘ಕೊರೋನಾ ಸೋಂಕಿನ ಬಗ್ಗೆ ಪಾಲಿಕೆ ಹಾಗೂ ಆರೋಗ್ಯ ಇಲಾಖೆಯಿಂದ ಈಗಾಗಲೇ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಬಿಬಿಎಂಪಿಯ ಎಲ್ಲ ಆಸ್ಪತ್ರೆಗಳಲ್ಲಿ ಮಾಸ್ಕ್, ಸ್ಯಾನಿಟರೈಸ್ ಸೇರಿ ಅವಶ್ಯಕ ಔಷಧಿಗಳ ದಾಸ್ತಾನು ಮಾಡಲಾಗಿದೆ. ಅಲ್ಲದೆ, ಸಾರ್ವಜನಿಕರ ಮಾಹಿತಿಗಾಗಿ ಹೆಲ್ಪ್ ಡೆಸ್ಕ್‌ಗಳನ್ನು ತೆರೆಯಲಾಗಿದೆ. ಹೆಚ್ಚಿನ ಮಾಹಿತಿಗೆ ಸಹಾಯವಾಣಿ 104ಕ್ಕೆ ಕರೆ ಮಾಡಿ ಸಲಹೆಗಳನ್ನು ಪಡೆದು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬಹುದು’
-ಡಾ.ವಿಜೇಂದ್ರ, ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News