×
Ad

ವಿಮಾನ ನಿಲ್ದಾಣ, ಮೆಟ್ರೊ, ಬಸ್ ನಿಲ್ದಾಣಗಳಲ್ಲಿ ವಿರಳ ಸಂಚಾರ

Update: 2020-03-15 18:38 IST

ಬೆಂಗಳೂರು, ಮಾ.15: ಕೊರೋನ ವೈರಸ್ ಭೀತಿಯಿಂದಾಗಿ ರಾಜ್ಯ ಸರಕಾರ ಒಂದು ವಾರಗಳ ಕಾಲ ಬಂದ್ ಘೋಷಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ, ನಮ್ಮ ಮೆಟ್ರೊ ಹಾಗೂ ಮೆಜೆಸ್ಟಿಕ್ ಸೇರಿದಂತೆ ಬಹುತೇಕ ಬಸ್ ನಿಲ್ದಾಣಗಳಿಂದ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.

ಬೆಂಗಳೂರು ವಿಮಾನ ನಿಲ್ದಾಣದಕ್ಕೆ ಬೇರೆಡೆಯಿಂದ ಬರುವ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದೆ. ಮೆಜೆಸ್ಟಿಕ್‌ನಿಂದ ಸಂಚರಿಸುವಂತಹ ಬಿಎಂಟಿಸಿ ಬಸ್ಸುಗಳ ಸುತ್ತುವಳಿಗಳನ್ನು ಪ್ರಯಾಣಿಕರ ಕೊರತೆಯಿಂದಾಗಿ ಕಡಿತ ಮಾಡಲಾಗಿದೆ.

ವಾರಾಂತ್ಯದಲ್ಲಿ ಮೆಟ್ರೊ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟು ಆಗುತ್ತಿತ್ತು. ಆದರೆ, ಕೊರೋನ ಭೀತಿಯಿಂದಾಗಿ ನೇರಳೆ ಹಾಗೂ ಹಸಿರು ಎರಡು ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು.

ನಗರದ ಅವಿನ್ಯೂ ರಸ್ತೆ ಸೇರಿದಂತೆ ಸುತ್ತಮುತ್ತಲು ವಾರಕ್ಕೊಮ್ಮೆ ರವಿವಾರ ಮಾತ್ರ ನಡೆಯುವಂತಹ 'ಸಂಡೆ ಬಝಾರ್'ನಲ್ಲಿ ವ್ಯಾಪಾರಿಗಳು ಹಾಗೂ ಗ್ರಾಹಕರು ಇಲ್ಲದೆ ಬಣಗುಡುತ್ತಿದೆ. ಸಾಮಾನ್ಯವಾಗಿ ಸಂಡೆ ಬಝಾರ್‌ನಲ್ಲಿ ಅಗತ್ಯ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಲು ಗ್ರಾಹಕರು ಮುಗಿಬೀಳುವುದು ಸಾಮಾನ್ಯ. ಆದರೆ, ಕೊರೋನ ಭೀತಿಯಿಂದಾಗಿ ಸಂಡೆ ಬಝಾರ್‌ನಲ್ಲಿ ವ್ಯಾಪಾರಿಗಳೆ ಬೆರಳೆಣಿಕೆಯಷ್ಟು ಮಂದಿಯಿದ್ದಾರೆ.

ಕೆ.ಆರ್.ಮಾರುಕಟ್ಟೆ, ಶಿವಾಜಿನಗರದ ರಸೆಲ್ ಮಾರುಕಟ್ಟೆ, ಮಲ್ಲೇಶ್ವರಂ ಮಾರುಕಟ್ಟೆಗಳಲ್ಲಿ ಜನಸಂದಣಿ ತೀವ್ರ ಕಡಿಮೆಯಾಗಿತ್ತು. ಇದೀಗ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವಂತಹ ಎಲ್ಲ ಈಜುಕೊಳಗಳನ್ನು ಮುಚ್ಚುವಂತೆ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಸಾಮಾನ್ಯವಾಗಿ ಬಿಸಿಲಿನ ತಾಪಮಾನ ಏರಿಕೆಯಾಗಿರುವುದರಿಂದ, ಮಕ್ಕಳು, ಯುವಕರು ಈಜುಕೊಳಗಳತ್ತ ಮುಖ ಮಾಡುತ್ತಾರೆ. ಮಕ್ಕಳನ್ನು ಸೋಂಕಿನಿಂದ ದೂರವಿಡಲು ಈಜುಕೊಳಗಳನ್ನು ಮುಚ್ಚುವಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಈಗಾಗಲೆ ನಿಗದಿಯಾಗಿರುವ ಮದುವೆ ಸೇರಿದಂತೆ ಇನ್ನಿತರ ಸಭೆ ಸಮಾರಂಭಗಳಿಗೆ ಯಾವುದೆ ಅಡ್ಡಿ ಇಲ್ಲ. ಆದರೆ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದಲ್ಲದೆ, ನೂರು ಜನರಿಗಿಂತ ಹೆಚ್ಚು ಜನ ಸೇರಬಾರದು ಎಂದು ಸರಕಾರ ಸೂಚನೆ ನೀಡಿದೆ.

ಮುಖ್ಯವಾಗಿ ಜ್ವರ, ಕೆಮ್ಮು ಹಾಗೂ ಶೀತ ಇರುವವರು ಯಾವುದೇ ಕಾರಣಕ್ಕೂ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಂತೆ ಮನವಿ ಮಾಡಲಾಗಿದೆ. ಕೊರೋನ ಭೀತಿಯಿಂದಾಗಿ ಕಲ್ಯಾಣ ಮಂಟಪಗಳಲ್ಲಿ ನಿಗದಿಯಾಗಿದ್ದ ಬಹುತೇಕ ಮದುವೆಗಳು ದೇವಸ್ಥಾನಗಳಿಗೆ ಸ್ಥಳಾಂತರಗೊಳಿಸಲಾಗಿದೆ.

ನಂದಿ ಗಿರಿಧಾಮ, ಸ್ಕಂದ ಗಿರಿ, ಲಾಲ್ ಬಾಗ್, ಕಬ್ಬನ್ ಪಾರ್ಕ್, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಲುಂಬಿನಿ ಗಾರ್ಡನ್, ವಂಡರ್‌ಲಾ ಸೇರಿದಂತೆ ಬಹುತೇಕ ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಸೂಪರ್ ಮಾರುಕಟ್ಟೆ ತೆರೆಯಲು ಅನುಮತಿ: ಸೂಪರ್ ಮಾರುಕಟ್ಟೆ, ಮೆಟ್ರೋ, ಬಿಗ್ ಬಝಾರ್, ಡಿ ಮಾರ್ಟ್ ಸೇರಿದಂತೆ ಇನ್ನಿತರ ಸೂಪರ್ ಮಾರುಕಟ್ಟೆಗಳನ್ನು ಜನಸಾಮಾನ್ಯರ ಹಿತದೃಷ್ಟಿಯಿಂದ ತೆರೆಯಲು ಷರತ್ತುಬದ್ಧ ಅನುಮತಿ ನೀಡಲಾಗಿದೆ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.

ಜನಸಾಮಾನ್ಯರಿಗೆ ದಿನನಿತ್ಯದ ಅಗತ್ಯ ವಸ್ತುಗಳನ್ನು ಖರೀದಿಸಲು ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ , ಮಾರುಕಟ್ಟೆಗಳಲ್ಲಿ ಸ್ಯಾನಿಟೇಷನ್ ಹಾಗೂ ಶುಚಿತ್ವ ಕಾಪಾಡಬೇಕು. ಜನಸಂದಣಿ ಹೆಚ್ಚಾಗದಂತೆ ಕ್ರಮ ಕೈಗೊಳ್ಳಬೇಕೆಂದು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಕಲಬುರಗಿ ಆಸ್ಪತ್ರೆಗೆ ಆರೋಗ್ಯ ಸಚಿವ ಭೇಟಿ
ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಆರೋಗ್ಯ ಸಚಿವ ಬಿ. ಶ್ರೀರಾಮುಲು, ಆಸ್ಪತ್ರೆಯಲ್ಲಿ ಕೊರೋನ ವೈರಸ್ ಶಂಕಿತರಿಗೆ ಹಾಗೂ ಸೋಂಕು ತಗುಲಿದವರಿಗೆ ಮುಂಜಾಗ್ರತೆ ಚಿಕಿತ್ಸೆಗೆ ಸಿದ್ಧಪಡಿಸಿದ ಐಸೋಲೇಟೆಡ್ ವಾರ್ಡ್‌ಗಳನ್ನು ಪರಿಶೀಲನೆ ನಡೆಸಿದರು.
ಈಗಾಗಲೇ 80 ಪರ್ಸನಲ್ ಪ್ರಿವೆಂನ್ಷನ್ ಕಿಟ್ ಇದ್ದು, ಇಂದು 500 ಕಿಟ್‌ಗಳು ಬರಲಿವೆ. ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಸಮರೋಪಾದಿ ಯಲ್ಲಿ ಕೆಲಸ ಮಾಡಲು ಸನ್ನದ್ಧರಾಗಿರುವಂತೆ ವೈದ್ಯರು ಹಾಗೂ ಇತರ ಸಿಬ್ಬಂದಿಗಳಿಗೆ ಶ್ರೀರಾಮುಲು ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News