ಕೊರೋನಾ ವೈರಸ್ ಭೀತಿ: ರಾಜಧಾನಿಯಲ್ಲಿ ಬಣಗುಟ್ಟಿದ ಮಾರುಕಟ್ಟೆಗಳು
ಬೆಂಗಳೂರು, ಮಾ.14: ರಾಜ್ಯಾದ್ಯಂತ ಕೊರೋನಾ ವೈರಸ್ ಆತಂಕ ಮನೆ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಎಲ್ಲೆಡೆ ಕಟ್ಟೆಚ್ಚರ ವಹಿಸಲು ಸೂಚಿಸಿದ್ದು, ಅದರ ಭಾಗವಾಗಿ ರಾಜಧಾನಿಯಲ್ಲಿ ಎರಡು ದಿನಗಳಿಂದ ಬಹುತೇಕ ಮಾರುಕಟ್ಟೆಗಳು ಸ್ಥಬ್ಧಗೊಂಡಿದ್ದು, ವ್ಯಾಪಾರದ ಮೇಲೆ ಭಾರೀ ಪ್ರಮಾಣದ ಹೊರೆ ಬೀಳುತ್ತಿದೆ. ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ರೈತರು, ಮಧ್ಯವರ್ತಿಗಳು ಯಾರೂ ನಗರದ ಮಾರುಕಟ್ಟೆಗಳಿಗೆ ಆಗಮಿಸುತ್ತಿಲ್ಲ. ನಿಷೇಧದ ಮೊದಲ ದಿನವೇ ಬೃಹತ್ ಪ್ರಮಾಣದಲ್ಲಿ ಮಾರುಕಟ್ಟೆಗಳು ನಷ್ಟಕ್ಕೀಡಾಗಿವೆ. ಎರಡನೇ ದಿನ ಅಲ್ಲೊಬ್ಬರು, ಇಲ್ಲೊಬ್ಬರು ಬಿಟ್ಟರೆ, ನಿರೀಕ್ಷಿತ ಮಟ್ಟದಲ್ಲಿ ಜನರು ಎಲ್ಲಿಯೂ ಕಾಣುತ್ತಿರಲಿಲ್ಲ.
ನಗರದ ಪ್ರಮುಖ ಮಾರುಕಟ್ಟೆಗಳಾದ ಕೆ.ಆರ್.ಮಾರುಕಟ್ಟೆ, ಶಿವಾಜಿನಗರ, ಯಶವಂತಪುರ, ವಿಜಯನಗರ, ಮಲ್ಲೇಶ್ವರಂ ಸೇರಿದಂತೆ ಅನೇಕ ಮಾರುಕಟ್ಟೆಗಳಲ್ಲಿ ವಹಿವಾಟು ಸ್ಥಗಿತಗೊಂಡಿದೆ.
ಮದುವೆ, ಶುಭ ಸಮಾರಂಭಗಳಿಗೆ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆಗಳಲ್ಲಿ ತರಕಾರಿ, ಹೂವು, ಹಣ್ಣು ಹಾಗೂ ಸಗಟು, ದಿನಸಿ ಪದಾರ್ಥಗಳ ವಹಿವಾಟಿನಲ್ಲಿ ವ್ಯತ್ಯಯ ಕಂಡುಬಂದಿದ್ದು, ಸದಾ ಜನಜಾತ್ರೆಯಂತೆ ಇರುತ್ತಿದ್ದ ಮಾರುಕಟ್ಟೆಗಳು ಎಡು ದಿನಗಳಿಂದ ಬಿಕೋ ಎನ್ನುತ್ತಿವೆ.
ಎಲ್ಲ ಕಡೆಗಳಲ್ಲಿ ವಿವಿಧ ಉದ್ಯಮಗಳ ಮೇಲೆ ಭಾರಿ ಹೊಡೆತ ಬೀಳುತ್ತಿದೆ. ಅದರಲ್ಲೂ ಮಾರುಕಟ್ಟೆ ಮೇಲೆ ಕರಿನೆರಳು ಬೀಳಲಾರಂಭಿಸಿದೆ. ವಿವಿಧ ಕಡೆಗಳಿಂದ ಕರ್ನಾಟಕಕ್ಕೆ, ಕರ್ನಾಟಕದಿಂದ ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಸೇರಿ ಇತರೆ ಭಾಗಗಳಿಗೆ ತರಕಾರಿ, ಬೇಳೆಕಾಳುಗಳು, ಮಸಾಲೆ ಪದಾರ್ಥಗಳು ರಫ್ತು ಹಾಗೂ ಆಮದಾಗುತ್ತಿದ್ದವು. ಆದರೆ, ಈ ಕೊರೋನಾದಿಂದ ರಫ್ತು ಮತ್ತು ಆಮದು ನಿಂತುಹೋಗಿದ್ದು, ಇದು ರೈತರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಶೇ.20-30ರಷ್ಟು ಬೆಲೆ ಕುಸಿತ: ಸರಕಾರದ ನಿರ್ಧಾರದಿಂದ ಟೊಮೊಟೊ, ಹಸಿ ಮೆಣಸಿನಕಾಯಿ, ಕ್ಯಾರೆಟ್, ಈರುಳ್ಳಿ, ಆಲೂಗಡ್ಡೆ, ಅವರೇಕಾಯಿ ಸೇರಿದಂತೆ ಬಹುತೇಕ ಎಲ್ಲ ತರಕಾರಿಗಳ ಬೆಲೆ ಕಡಿಮೆಯಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಶೇ. 20ರಷ್ಟು ಬೆಲೆ ಕುಸಿದಿದ್ದು ಸಗಟು ವ್ಯಾಪಾರಸ್ಥರು, ರೈತರು ಕಂಗಾಲಾಗಿದ್ದಾರೆ.
ಕಳೆದ ವಾರ ಭಾರಿ ಇಳಿಕೆ ಕಂಡಿದ್ದ ತರಕಾರಿ ದರ, ಬೇಳೆಕಾಳುಗಳು ದರ ಈಗ ಮತ್ತಷ್ಟು ಇಳಿಕೆ ಕಂಡಿದೆ. ಮಾರುಕಟ್ಟೆಗಳಲ್ಲಿ ಬೆಲೆ ಕಡಿಮೆಯಿದ್ದರೂ, ತರಕಾರಿಗಳನ್ನು ಕೊಳ್ಳಲು ಯಾರೂ ಮುಂದಾಗುತ್ತಿಲ್ಲ. ಸಾಮಾನ್ಯವಾಗಿ ಮಾರ್ಚ್ ಹಾಗೂ ಎಪ್ರಿಲ್ ಎರಡೂ ತಿಂಗಳುಗಳು ಅತಿಹೆಚ್ಚು ಮದುವೆ ಸಮಾರಂಭಗಳು ನಡೆಯುತ್ತವೆ.
ಹೀಗಾಗಿ, ಈ ಸಮಯದಲ್ಲಿ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಸಾಕಷ್ಟು ವಹಿವಾಟು ನಡೆಯುತ್ತದೆ. ಬೇರೆ ಬೇರೆಗಳಿಂದ ರಫ್ತು ಮತ್ತು ಆಮದು ನಡೆಯುತ್ತದೆ. ಆದರೆ, ಈ ಕೊರೋನಾ ಭೀತಿಯಿಂದ ಆಡಂಬರ ಮದುವೆಗಳಿಗೆ ಬ್ರೇಕ್ ಬಿದ್ದಿದ್ದು, ದರ ಕುಸಿತಕ್ಕೂ ಕಾರಣವಾಗಿದೆ.