ರೋಗಿಗಳಿಗೆ ದಾಖಲಾತಿ ನಿರಾಕರಿಸಬೇಡಿ: ಖಾಸಗಿ ಆಸ್ಪತ್ರೆಗಳಿಗೆ ಕೆ.ಶಿವರಾಮೇಗೌಡ ಸೂಚನೆ
ಬೆಂಗಳೂರು, ಮಾ. 15: ಕೊರೋನಾ ವೈರಸ್ ಸೋಂಕಿನ ಲಕ್ಷಣಗಳಿರುವ ರೋಗಿಗಳು ಆಸ್ಪತ್ರೆಗೆ ಬಂದಾಗ ದಾಖಲಾತಿ ನಿರಾಕರಿಸಬೇಡಿ ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಶಿರಾಮೇಗೌಡ, ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿದ್ದಾರೆ.
ರವಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನೊವೆಲ್ ಕೊರೋನಾ ವೈರಸ್ ನಿಯಂತ್ರಣ ಕುರಿತು ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ರೋಗಿಗೆ ಕೂಡಲೇ ದಾಖಲು ಮಾಡಿಕೊಂಡು ಅಗತ್ಯ ವೈದ್ಯಕೀಯ ನೇರವನ್ನು ನೀಡಬೇಕೆಂದು ಮನವಿ ಮಾಡಿದರು.
ಖಾಸಗಿ ಆಸ್ಪತ್ರೆಯ ವೈದ್ಯರು ಕೊರೆನಾ ವೈರಸ್ ನಿಯಂತ್ರಣ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಅವರು, ಖಾಸಗಿ ಆಸ್ಪತ್ರೆಯ ವೈದ್ಯರು ಅಥವಾ ಯಾವುದೇ ಪ್ರತಿನಿಧಿಗಳು ರೋಗಿಗಳ ಬಗ್ಗೆ ವೈದ್ಯಕೀಯ ಮಾಹಿತಿಯನ್ನು ಮಾಧ್ಯಮಗಳಿಗೆ ನೇರವಾಗಿ ನೀಡುವಂತಿಲ್ಲ ಎಂದರು.
ಅಲ್ಲದೆ ಯಾವುದೇ ರೋಗಿಯ ಪರೀಕ್ಷೆಗೆ ಕಳುಹಿಸಿರುವ ನಮೂನೆ/ಅದರ ಫಲಿತಾಂಶದ ಬಗ್ಗೆ ಖಾಸಗಿ ಆಸ್ಪತ್ರೆಗಳು ಜಿಲ್ಲಾ ಜಾಗೃತಿ ಘಟಕಕ್ಕೆ ಕೂಡಲೇ ಮಾಹಿತಿ ನೀಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.
ಕೊರೋನಾ ನಿಯಂತ್ರಣದ ಬಗ್ಗೆ ನಗರದ ಶಸ್ತ್ರ ಚಿಕಿತ್ಸೆಯ ಡಾ.ನಾಗರಾಜನ್ ಮಾತನಾಡಿ, ಸೋಂಕು ಪೀಡಿತರ ಸಂಪರ್ಕದಿಂದ ದೂರವಿರುವುದು, ಶಂಕಿತರನ್ನು ಪ್ರತ್ಯೇಕವಾಗಿರಿಸುವುದು, ಕೆಮ್ಮುವಾಗ ಮತ್ತು ಸೀನುವಾಗ ಮಾಸ್ಕ್ ಅಥವಾ ಕರವಸ್ತ್ರ ಉಪಯೋಗಿಸುವುದರಿಂದ ಮಾತ್ರ ನೊವೆಲ್ ಕರೋನಾ ವೈರಸ್ ಹರಡುವಿಕೆ ತಡೆಗಟ್ಟಬಹುದು ಎಂದು ಹೇಳಿದರು.
ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ.ನದೀಮ್ ಅಹಮದ್ ಮಾತನಾಡಿ, ಕರೋನಾ ವೈರಸ್‌ಗೆ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ಮತ್ತು ಜಯದೇವ ಹೃದ್ರೋಹ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುತ್ತಿದ್ದು ಖಾಸಗಿ ಆಸ್ಪತೆಗಳು ರೋಗಿಗಳನ್ನು ಪರೀಕ್ಷೆಗಾಗಿ ಅಲ್ಲಿಗೂ ಕಳುಹಿಸಿಕೊಡಬಹುದು ಎಂದರು.
ಅಲ್ಲದೆ, ರೋಗಿಯ ಕಫ ಪರೀಕ್ಷೆಗಾಗಿ ನಮೂನೆ ಸಂಗ್ರಹಿಸುವವರು ಹಾಗೂ ಚಿಕಿತ್ಸೆ ನೀಡುವವರು ತಮ್ಮ ಸುರಕ್ಷತೆಯನ್ನು ನೋಡಿಕೊಳ್ಳಬೇಕು. ನಮೂನೆಗಳ ಪರೀಕ್ಷೆಯನ್ನು ಬೆಂಗಳೂರಲ್ಲಿ ಎರಡು ಸ್ಥಳಗಳಲ್ಲಿ ನ್ಯಾಷನಲ್ ವೈರಾಲಜಿ ಇನ್ಸ್ಟಿಟ್ಯೂಟ್ ಹಾಗೂ ವೈರಸ್ ರಿಸರ್ಚ್ ಮತ್ತು ಡಯಗ್ನೋಸ್ಟಿಕ್ ಲ್ಯಾಬೋರೇಟರಿಯಲ್ಲಿ ಮಾತ್ರ ಮಾಡಲಾಗುವುದು. ಅಲ್ಲಿಗೆ ನಮೂನೆ ತಲುಪಿಸಲು ಅಗತ್ಯ ಶಿಷ್ಟಾಚಾರ ಪಾಲಿಸಬೇಕು ಎಂದು ಅವರು ಹೆಳಿದರು.