ಸಚಿನ್ 100 ಶತಕದ ದಾಖಲೆಗೆ 8 ವರ್ಷ

Update: 2020-03-16 18:32 GMT

 ಮುಂಬೈ, ಮಾ.16: ಭಾರತದ ಬ್ಯಾಟಿಂಗ್ ಮಾಸ್ಟರ್ ಸಚಿನ್ ತೆಂಡುಲ್ಕರ್‌ರ ನೂರನೇ ಅಂತರ್‌ರಾಷ್ಟ್ರೀಯ ಶತಕದ ಸಾಧನೆಗೆ 7 ವರ್ಷ ತುಂಬಿದೆ.

 ತೆಂಡುಲ್ಕರ್ ಮಾರ್ಚ್ 16, 2012ರಲ್ಲಿ ಬಾಂಗ್ಲಾದೇಶ ವಿರುದ್ಧ ಏಶ್ಯಕಪ್ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 147 ಎಸೆತಗಳಲ್ಲಿ 114 ರನ್ ಗಳಿಸಿದ್ದರು. ಇದು ಏಕದಿನ ಕ್ರಿಕೆಟ್‌ನಲ್ಲಿ 49ನೇ ಶತಕ ಮತ್ತು ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೂರನೇ ಶತಕವಾಗಿತ್ತು. ಎರಡು ದಶಕಗಳ ಕಾಲ ಕ್ರಿಕೆಟ್ ಇತಿಹಾಸದಲ್ಲಿ ನಾನಾ ದೊಡ್ಡ ದಾಖಲೆಗಳನ್ನು ನಿರ್ಮಿಸಿರುವ ಸಚಿನ್ ತೆಂಡುಲ್ಕರ್ ಅವರ ನೂರನೇ ಅಂತರ್‌ರಾಷ್ಟ್ರೀಯ ಶತಕ ದಾಖಲಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದರು. ಸಚಿನ್ ತೆಂಡುಲ್ಕರ್ 2011, ಮಾರ್ಚ್ 12ರಂದು ನಾಗ್ಪುರದಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ 99ನೇ ಅಂತರ್‌ರಾಷ್ಟ್ರೀಯ ಶತಕ ದಾಖಲಿಸಿದ್ದರು.

   ಮೀರ್ಪುರದ ಶೇರ್ ಬಾಂಗ್ಲಾ ಸ್ಟೇಡಿಯಂನಲ್ಲಿ ಬಾಂಗಾದೇಶ ವಿರುದ್ಧ ನಡೆದಿದ್ದ ಏಶ್ಯಕಪ್ ಪಂದ್ಯದಲ್ಲಿ ಶತಕ ದಾಖಲಿಸಿದ್ದಾಗ ಎದುರಾಳಿ ತಂಡದ ಶಾಕಿಬ್ ಅಲ್ ಹಸನ್ ಓಡಿ ಬಂದು ಅವರನ್ನು ಅಭಿನಂದಿಸಿದ್ದರು. ಹಸನ್ ಎಸೆತದಲ್ಲಿ ಒಂದು ರನ್ ಗಳಿಸುವ ಮೂಲಕ ತೆಂಡುಲ್ಕರ್ ಶತಕದ ಮೈಲುಗಲ್ಲನ್ನು ತಲುಪಿದ್ದರು.

ಬಾಂಗ್ಲಾದೇಶ ವಿರುದ್ಧ ಮೊದಲ ಏಕದಿನ ಶತಕ ದಾಖಲಿಸಿದ್ದ ತೆಂಡುಲ್ಕರ್ ಟೆಸ್ಟ್ ಹಾಗೂ ಏಕದಿನ ಪಂದ್ಯಗಳನ್ನು ಆಡುವ ಎಲ್ಲ ದೇಶಗಳ ವಿರುದ್ಧ ಶತಕ ದಾಖಲಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು.

  

ತೆಂಡುಲ್ಕರ್ ಶತಕ, ಸುರೇಶ್ ರೈನಾ (51) ಮತ್ತು ವಿರಾಟ್ ಕೊಹ್ಲಿ (66) ಅರ್ಧಶತಕಗಳ ನೆರವಿನಲ್ಲಿ ಭಾರತ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 289 ರನ್ ಗಳಿಸಿತ್ತು. ಗೆಲುವಿಗೆ 290 ರನ್‌ಗಳ ಕಠಿಣ ಸವಾಲನ್ನು ಪಡೆದಿದ್ದ ಬಾಂಗ್ಲಾದೇಶ ತಂಡ ಇನ್ನೂ 4 ಎಸೆತಗಳನ್ನು ಬಾಕಿ ಉಳಿಸಿ 5 ವಿಕೆಟ್ ನಷ್ಟದಲ್ಲಿ 293 ರನ್ ಗಳಿಸುವ ಮೂಲಕ ಗೆಲುವಿನ ದಡ ಸೇರಿತ್ತು. ಬಾಂಗ್ಲಾದ ತಮೀಮ್ ಇಕ್ಬಾಲ್ (70), ಜಹುರುಲ್ ಇಸ್ಲಾಂ(53), ನಾಸೀರ್ ಹುಸೈನ್(54) ಅರ್ಧಶತಕಗಳು ಮತ್ತು ಶಾಕಿಬ್ ಅಲ್ ಹಸನ್(49) ಮತ್ತು ನಾಯಕ ಮುಶ್ಫಿಕುರ್ರಹೀಂ(ಔಟಾಗದೆ 49) ಉಪಯುಕ್ತ ಕೊಡುಗೆಯ ನೆರವಿನಲ್ಲಿ ಬಾಂಗ್ಲಾ ಗೆಲುವಿನ ದಡ ಸೇರಿತ್ತು. ತೆಂಡುಲ್ಕರ್ 100ನೇ ಅಂತರ್‌ರಾಷ್ಟ್ರೀಯ ಶತಕದ ದಾಖಲೆ ನಿರ್ಮಿಸಿದ್ದರೂ, ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತದ ತಂಡಕ್ಕೆ ಈ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಬೌಲರ್‌ಗಳ ವೈಫಲ್ಯದಿಂದಾಗಿ ಭಾರತ ಸೋಲಿನ ಕಹಿಯನ್ನು ಉಣ್ಣುವಂತಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News