ನಾವು ಈ ರಾಜ್ಯದ ಜನ ಅಲ್ಲವೇ?: 'ಎತ್ತಿನಹೊಳೆ' ಬಗ್ಗೆ ರಮೇಶ್ ಕುಮಾರ್
ಬೆಂಗಳೂರು, ಮಾ. 17: ‘ಕಲುಷಿತ ನೀರಿನ ಸೇವನೆ ಪರಿಣಾಮವಾಗಿ ಗರ್ಭದಲ್ಲಿರುವ ಮಗುವೂ ವಿಷಕಾರಿ ಫ್ಲೋರೈಡ್‌ಗೆ ತುತ್ತಾಗುತ್ತಿದೆ. ಎತ್ತಿನಹೊಳೆ ಯೋಜನೆ ಮೂಲಕ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಪೂರೈಕೆ ಮಾಡಿ. ನಾವು ಈ ರಾಜ್ಯದ ಜನ ಅಲ್ಲವೇ?’ ಎಂದು ಕಾಂಗ್ರೆಸಿನ ಹಿರಿಯ ಸದಸ್ಯ ಕೆ.ಆರ್. ರಮೇಶ್ ಕುಮಾರ್ ಪ್ರಶ್ನಿಸಿದ್ದಾರೆ.
ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಆಡಳಿತ ಪಕ್ಷದ ಸದಸ್ಯ ಮಸಾಲ ಜಯರಾಮ್ ಕೇಳಿದ ಪ್ರಶ್ನೆಗೆ ಆಕ್ಷೇಪಿಸಿದ ಅವರು, 'ನೀರು ನೀಡುವುದಿಲ್ಲ ಎಂದರೆ ಯೋಜನೆಗೆ ಭೂಮಿ ಕೊಡುವುದಿಲ್ಲ ಎನ್ನುವುದು ಏನು ತಮಾಷೆ ವಿಚಾರವೇ? ಎಂದು ಪ್ರಶ್ನಿಸಿದರು.
ಈ ಹಿಂದೆಯೇ ನಾನು ಮಾತನಾಡಿದ್ದೇನೆ. ಬೆಂಗಳೂರಿನ ಜನ ಬಳಕೆ ಮಾಡಿದ ತ್ಯಾಜ್ಯ ನೀರನ್ನಾದರೂ ಸಂಸ್ಕರಿಸಿ ನಮಗೆ ಕೊಡಿ ಎಂದಿದ್ದೇನೆ. ಎತ್ತಿನಹೊಳೆ ಯೋಜನೆಯಲ್ಲಿ 24ಟಿಎಂಸಿ ನೀರಿನ ಲಭ್ಯತೆ ಇದ್ದರೂ, ಕೋಲಾರ-ಚಿಕ್ಕಬಳ್ಳಾಪುರಕ್ಕೆ ಕೇವಲ 8 ಟಿಎಂಸಿ ಹಂಚಿಕೆಯಾಗಿದೆ. ಈ ಬಗ್ಗೆ ರಾಜ್ಯ ಸರಕಾರ ಖಚಿತ ನಿಲುವು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಆರಂಭಕ್ಕೆ ಮಾತನಾಡಿದ ಮಸಾಲ ಜಯರಾಮ್, ಎತ್ತಿನಹೊಳೆ ಯೋಜನೆಗೆ ತುರುವೇಕೆರೆ ತಾಲೂಕಿನ ಹಡವನಹಳ್ಳಿ, ಹೊನ್ನೇನಹಳ್ಳಿ ಗ್ರಾಮಗಳ 58 ಎಕರೆ ಕೃಷಿ ಭೂಮಿ ವಶಪಡಿಸಿಕೊಳ್ಳಲಾಗಿದೆ. ಆದರೆ, ಆ ಭಾಗದ ಕೆರೆ ಕಟ್ಟೆಗಳಿಗೆ ನೀರಿನ ಹಂಚಿಕೆ ಮಾಡದಿರುವುದು ಸಲ್ಲ. ನಮಗೆ ನೀರು ಕೊಡದಿದ್ದರೆ ಭೂಮಿ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಬಳಿಕ ಜಲಸಂಪನ್ಮೂಲ ಸಚಿವರ ಪರವಾಗಿ ಉತ್ತರ ನೀಡಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಎತ್ತಿನಹೊಳೆ ಮೂಲ ಯೋಜನೆಯಲ್ಲಿ ತುರುವೇಕೆರೆಗೆ ನೀರು ಪೂರೈಕೆ ಮಾಡುವ ಯಾವುದೇ ಪ್ರಸ್ತಾವನೆ ಇಲ್ಲ. ಮುಂದಿನ ದಿನಗಳಲ್ಲಿ ಬೇರೆ-ಬೇರೆ ಪ್ರದೇಶಗಳಿಗೆ ನೀರು ಪೂರೈಸಿದ ನಂತರ ನೀರು ಉಳಿದರೆ ತುರುವೇಕೆರೆ ಕ್ಷೇತ್ರದ ಕೆರೆಗಳಿಗೆ ನೀರು ಪೂರೈಸಲು ಪರಿಶೀಲಿಸಲಾಗುವುದು ಎಂದು ಸ್ಪಷ್ಟನೆ ನೀಡಿದರು.