ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹೂಡಿಕೆದಾರರ ಸಮಾವೇಶಕ್ಕೆ ಚಿಂತನೆ: ಸಚಿವ ಸಿ.ಟಿ.ರವಿ

Update: 2020-03-18 12:26 GMT

ಬೆಂಗಳೂರು, ಮಾ. 18: ರಾಜ್ಯದ ಪ್ರವಾಸಿ ತಾಣಗಳ ಅಭಿವೃದ್ಧಿಪಡಿಸುವ ಉದ್ದೇಶದಿಂದ ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಇಂದಿಲ್ಲಿ ತಿಳಿಸಿದ್ದಾರೆ.

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಹಿರಿಯ ಸದಸ್ಯ ಎಚ್.ಕೆ.ಕುಮಾರಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಪ್ರೇಕ್ಷಣೀಯ ಸ್ಥಳಗಳಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಹೂಡಿಕೆದಾರರ ಸಮಾವೇಶ, ಕೈಗಾರಿಕೆಗಳ ಸಿಎಸ್‌ಆರ್ ನಿಧಿ ಬಳಕೆ ಹಾಗೂ ಪ್ರವಾಸಿ ತಾಣಗಳ ದತ್ತು ನೀಡಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

ಸ್ವಿಡ್ಜರ್‌ಲ್ಯಾಂಡ್‌ಗಿಂತ ಕಡಿಮೆ ಇಲ್ಲ: ಮಲೆನಾಡು ಸ್ವಿಡ್ಜರ್‌ಲ್ಯಾಂಡ್‌ಗಿಂತ ಕಡಿಮೆ ಇಲ್ಲ. ಸಕಲೇಶಪುರದ ಮಂಜಿರಬಾದ್ ಕೋಟೆ ಕೇಂದ್ರ ಪುರಾತತ್ವ ಇಲಾಖೆಗೆ ಒಳಪಟ್ಟಿದ್ದು, ಮೂಲಸೌಲಭ್ಯ ಕಲ್ಪಿಸಲು ಅನುಮತಿ ನೀಡುವಂತೆ ಕೇಂದ್ರದೊಂದಿಗೆ ಚರ್ಚಿಸಲಾಗುವುದು. ಹಾಸನ ಜಿಲ್ಲೆ ವಿಶ್ವ ಪ್ರವಾಸಿ ತಾಣವಾಗಿ ಗುರುತಿಸಲಾಗಿದ್ದು, ಪ್ರವಾಸಿಗರನ್ನು ಆಕರ್ಷಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

ಒಳ ಹೋಗಲು ಅನುಮತಿ ಸಲ್ಲ: ಆರಂಭಕ್ಕೆ ಮಾತನಾಡಿದ ಕುಮಾರಸ್ವಾಮಿ, ಪುರಾತತ್ವ ಇಲಾಖೆಗೆ ಸೇರ್ಪಡೆಯಾದರೆ ಒಳ ಹೋಗಲು ಅನುಮತಿ ಪಡೆಯಬೇಕು ಎಂದರೆ ಸರಿಯಲ್ಲ. ಇದರಿಂದ ಪ್ರೇಕ್ಷಣೀಯ ಸ್ಥಳಗಳು ಅಭಿವೃದ್ಧಿ ಸಾಧ್ಯವಿಲ್ಲ. ಈ ಷರತ್ತು ಸಡಿಸಲು ಕ್ರಮ ವಹಿಸಿ, ಮೂಲಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.

ಹೆಚ್ಚಿನ ನೆರವು: ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹೆಚ್ಚಿನ ಹಣ ಒದಗಿಸಲಾಗುವುದು ಎಂದು ಬಿಜೆಪಿ ಸದಸ್ಯ ಸಿ.ಎಸ್.ನಿರಂಜನ್ ಕುಮಾರ್ ಪ್ರಶ್ನೆಗೆ ಮಧ್ಯಪ್ರವೇಶಿಸಿ ಉತ್ತರಿಸಿದ ಸಿಎಂ ಯಡಿಯೂರಪ್ಪ, ಸುಧಾಮೂರ್ತಿ ಅಧ್ಯಕ್ಷತೆಯಲ್ಲಿ ಪ್ರವಾಸಿ ತಾಣಗಳನ್ನು ಗುರುತಿಸಲು ಸಮಿತಿ ರಚನೆ ಮಾಡಲಾಗಿದೆ ಎಂದರು.

ಕರ್ನಾಟಕ ಪ್ರವಾಸೋದ್ಯಮ ನೀತಿ-2015-20ರಲ್ಲಿ 319 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ವಿಸ್ತೃತವಾಗಿ ಪ್ರವಾಸಿ ತಾಣಗಳನ್ನು ಗುರುತಿಸುವ ವೇಳೆ ಬಿಟ್ಟು ಹೋಗಿರುವ ಬರಚುಕ್ಕಿಯಂತಹ ಪ್ರವಾಸಿ ತಾಣಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ಹೇಳಿದರು.

ಚಾಮರಾಜನಗರದ ಕನಕಗಿರಿ, ಚಿಕ್ಕಹೊಳೆ ಜಲಾಶಯ, ಕರಿವರದರಾಜ ಬೆಟ್ಟ, ಗುಂಡ್ಲುಪೇಟೆದ ಬಂಡಿಪುರ, ಹಿಮವದ್ ಗೋಪಾಲಸ್ವಾಮಿಬೆಟ್ಟ, ಕೊಳ್ಳೇಗಾಲದ ಹೊಗೆನಕಲ್ ಜಲಪಾತ, ಬಿಳಿಗಿರಿ ರಂಗನಬೆಟ್ಟ, ಮಲೆಮಹದೇಶ್ವರ ಬೆಟ್ಟ ಸೇರಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ 17 ಕೋಟಿ ರೂ.ಮಂಜೂರು ಮಾಡಲಾಗಿದೆ ಎಂದರು.

ಇಲಾಖೆಗೆ ಕೇವಲ 11.60 ಕೋಟಿ ರೂ.: ರಾಜ್ಯದ 29 ಜಿಲ್ಲಾ ಹಾಗೂ 117 ತಾಲೂಕು ಕ್ರೀಡಾಂಗಣಗಳ ಸುಸ್ಥಿತಿಗೆ 381ಕೋಟಿ ರೂ.ಅಗತ್ಯವಿದೆ. ಆದರೆ, ಈ ವರ್ಷ 11.60 ಕೋಟಿ ರೂ.ಗಳು ಮಾತ್ರ ಲಭ್ಯವಿದೆ. ಹೀಗಾಗಿ ಅನುದಾನದ ಲಭ್ಯತೆ ಆಧರಿಸಿ ಕ್ರೀಡಾಂಗಣ ಅಭಿವೃದ್ಧಿಗೆ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಆಡಳಿತ ಪಕ್ಷದ ಸದಸ್ಯ ಕುಮಾರ್ ಬಂಗಾರಪ್ಪ ಪ್ರಶ್ನೆಗೆ, ಸಚಿವ ರವಿ ಉತ್ತರಿಸಿದರು.

ಸೊರಬ ಪಟ್ಟಣದಲ್ಲಿ 10 ಎಕರೆ ಪ್ರದೇಶದಲ್ಲಿ ಎಸ್.ಬಂಗಾರಪ್ಪ ಹೆಸರಿನಲ್ಲಿ ತಾಲೂಕು ಕ್ರೀಡಾಂಗಣ ಸ್ಥಾಪಿಸಲಾಗಿದೆ. ಅದರಲ್ಲಿ ಫೆವಿಲಿಯನ್ ಕಟ್ಟಡ, ಪ್ರೇಕ್ಷಕರ ಗ್ಯಾಲರಿ, ಶೌಚಾಲಯ, ನೀರು ಸರಬರಾಜು, ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಪ್ರಾಥಮಿಕ, ಪ್ರೌಢಶಾಲೆ, ಕಾಲೇಜುಗಳ ವಾರ್ಷಿಕ ಕ್ರೀಡಾಕೂಟ ನಡೆಸಲಾಗುತ್ತಿದೆ. ಕೇಂದ್ರ ಸರಕಾರದ ಖೇಲೋ ಇಂಡಿಯಾ ಯೋಜನೆಯಡಿ ಅಥ್ಲೆಟಿಕ್ ಟ್ರ್ಯಾಕ್ ಅಳವಡಿಸಲು ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಕೇಂದ್ರದಿಂದ ಮಂಜೂರಾತಿ ದೊರೆತು ಅನುದಾನ ಬಿಡುಗಡೆ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News