×
Ad

'ದೇವರ ಸಮಾನ': ಬೆಂಗಳೂರಿನ ವೈದ್ಯರಿಗೆ ಕೊರೋನ ಸೋಂಕಿತ ಟೆಕ್ಕಿ ಪತ್ನಿಯ ಭಾವನಾತ್ಮಕ ಸಂದೇಶ

Update: 2020-03-18 18:53 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.18: ಕೊರೋನ ಸೋಂಕಿನಿಂದ ರಾಜೀವ್‌ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗೂಗಲ್ ಸಂಸ್ಥೆಯ ಟೆಕ್ಕಿ ಗುಣಮುಖರಾಗಿದ್ದು, ಚಿಕಿತ್ಸೆ ನೀಡಿದ ವೈದ್ಯರಿಗೆ ಟೆಕ್ಕಿ ಪತ್ನಿ ಧನ್ಯವಾದ ತಿಳಿಸಿದ್ದಾರೆ.

ನನ್ನ ಪತಿ ಕೊರೋನ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾಗ ಬಹಳ ಆತಂಕವಿತ್ತು. ಪತಿಗೆ ಒಳ್ಳೆಯ ಚಿಕಿತ್ಸೆ ಸಿಕ್ಕಿದೆ. ವೈದ್ಯರು ದೇವರ ಸಮಾನ ಎಂದು ಟೆಕ್ಕಿ ಪತ್ನಿ ಸಂತಸ ಹಂಚಿಕೊಂಡಿದ್ದಾರೆ. ಅಲ್ಲದೆ ಪತಿಗೆ ಚಿಕಿತ್ಸೆ ನೀಡಿದ ರಾಜೀವ್ ಗಾಂಧಿ ಆಸ್ಪತ್ರೆ ವೈದ್ಯರಿಗೆ ಹೃದಯಪೂರ್ವಕವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

ನಗರದ ಟೆಕ್ಕಿ ಅಮೆರಿಕಾದಿಂದ ಹಿಂದಿರುಗಿದ ಬಳಿಕ ಕೊರೋನ ಸೋಂಕು ಉಂಟಾದ ಹಿನ್ನೆಲೆ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರ ಪತ್ನಿ ವೈದ್ಯರಿಗೆ ಧನ್ಯವಾದ ಹೇಳಿದ್ದು, ನನ್ನ ಪತಿ ಈಗ ಆರಾಮಾಗಿದ್ದಾರೆ. ರಾಜೀವ್ ಗಾಂಧಿ ಆಸ್ಪತ್ರೆ ವೈದ್ಯರು ನಮಗೆ ದೇವರ ಸಮಾನರಾಗಿದ್ದಾರೆ ಎಂದು ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ.

ಅಮೆರಿಕಾದಿಂದ ನನ್ನ ಪತಿ ಜ್ವರದಿಂದ ಹಿಂದಿರುಗಿದ್ದರು. ನಮ್ಮ ಮನೆಯ ಮೊದಲ ಮಹಡಿಯಲ್ಲಿ ಚೆನ್ನಾಗಿ ಗಾಳಿ ಇರುವ ಪ್ರದೇಶದಲ್ಲಿ ಸ್ವತಃ ಅವರೇ ಏಕಾಂತದಲ್ಲಿ ಉಳಿದುಕೊಂಡರು. ನಾನು ಅವರಿಗೆ ಆಹಾರ, ನೀರು ಅಥವಾ ಔಷಧಿ ನೀಡಲು ಮಾತ್ರ ಮೇಲಕ್ಕೆ ಹೋಗುತ್ತಿದ್ದೆ. ಮಾ.9ರಂದು ಅವರಿಗೆ ವೈರಲ್ ಫೀವರ್ ಹೆಚ್ಚಾಗಿದೆ ಎಂದು ತಿಳಿದುಬಂತು. ಬಳಿಕ ನಮಗೆ ಆರೋಗ್ಯ ಇಲಾಖೆಯಿಂದ ಕರೆ ಬಂತು, ಆ್ಯಂಬುಲೆನ್ಸ್‌ನಲ್ಲಿ ನನ್ನ ಪತಿಯನ್ನು ಕರೆದುಕೊಂಡು ಹೋದರು. ಅವರು ರಾಜೀವ್‌ ಗಾಂಧಿ ಆಸ್ಪತ್ರೆಯಲ್ಲಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಅಲ್ಲಿ ಅವರನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ.

ಕೊರೋನದಿಂದಾಗಿ ನಾವು ಮಾನಸಿಕವಾಗಿ ಒತ್ತಡ ಮತ್ತು ಕಿರಿಕಿರಿಗೆ ಒಳಗಾಗಿದ್ದೆವು. ಮಕ್ಕಳು ಹೊರಗೆ ಹೋಗಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಮನೆ ಕೆಲಸದಾಕೆ ಮತ್ತು ತೋಟದ ಕೆಲಸಗಾರನನ್ನು ಕೆಲಸಕ್ಕೆ ಬರಬಾರದೆಂದು ಹೇಳಿದ್ದೇವೆ. ನಾವೇ ಎಲ್ಲ ಕೆಲಸವನ್ನು ಮಾಡಿಕೊಳ್ಳುತಿದ್ದೇವೆ. ನನ್ನ ಮಗಳು ಪರೀಕ್ಷೆ ಬರೆಯುತ್ತಾಳೆ ಎಂದು ನಾವು ಯೋಚಿಸಿರಲಿಲ್ಲ. ಆದರೆ, ಈಗ ಪರೀಕ್ಷೆಗೆ ಹಾಜರಾಗುತ್ತಿದ್ದಾಳೆ. ನನ್ನ ಪತಿ ಆಸ್ಪತ್ರೆಯಲ್ಲಿರುವ ಸಂದರ್ಭದಲ್ಲಿ ಎಲ್ಲರೂ ನಮಗೆ ಸಹಾಯ ಮಾಡಿದ್ದಾರೆ. ನನ್ನ ಅತ್ತೆ ಹಾಗೂ ಹಿರಿಯ ಮಗ ಅಸ್ತಮಾದಿಂದ ಬಳಲುತ್ತಿದ್ದಾರೆ. ಹೀಗಾಗಿ ನಾವೂ ಕೂಡ ಕೊರೋನ ತಪಾಸಣೆ ಮಾಡಿಸಿಕೊಂಡಿದ್ದು, ಟೆಸ್ಟ್ ವರದಿ ನೆಗೆಟಿವ್ ಬಂದಿದೆ. ಸದ್ಯ ನಾವು ಮನೆಯಲ್ಲೇ ಏಕಾಂತ ವಾಸದಲ್ಲಿದ್ದೇವೆ. ಪ್ರತಿ ಹಂತದಲ್ಲಿ ನಮಗೆ ಸಹಾಯ ಮಾಡಿದ ಇವರೆಲ್ಲರಿಗೂ ಹೇಗೆ ಧನ್ಯವಾದ ಹೇಳಬೇಕೆಂದು ನನಗೆ ತಿಳಿಯುತ್ತಿಲ್ಲ. ಅವರೆಲ್ಲರಿಗೂ ಒಳ್ಳೆಯದಾಗಲೆಂದು ನನ್ನ ಅಂತರಾಳದಿಂದ ಹಾರೈಸುತ್ತೇನೆ. ವಿಶ್ರಾಂತಿ ಇಲ್ಲದೆ ನಿರಂತರವಾಗಿ ಕೆಲಸ ಮಾಡುತ್ತಿರುವ ಅವರೆಲ್ಲರಿಗೂ ಸಂತೋಷ ಮತ್ತು ಒಳ್ಳೆ ಆರೋಗ್ಯ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಸಂದೇಶ ರವಾನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News