ಏರ್ ಪಿಸ್ತೂಲ್‌ನಲ್ಲಿ ಸೌರಭ್‌ಗೆ ಅಗ್ರ ಸ್ಥಾನ

Update: 2020-03-18 18:41 GMT

ಹೊಸದಿಲ್ಲಿ, ಮಾ.18: ಒಲಿಂಪಿಕ್ಸ್ ಶೂಟಿಂಗ್ ಆಯ್ಕೆ ಟ್ರಯಲ್ಸ್‌ನ ಪುರುಷರ ಏರ್ ಪಿಸ್ತೂಲ್‌ನಲ್ಲಿ 588 ಅಂಕ ಗಳಿಸಿದ ಭಾರತದ ಯುವ ಶೂಟರ್ ಸೌರಭ್ ಚೌಧರಿ ಅಗ್ರ ಸ್ಥಾನ ಪಡೆದಿದ್ದಾರೆ.

ಇಲ್ಲಿನ ತುಘಲಕ್‌ಬಾದ್‌ನಲ್ಲಿರುವ ಡಾ.ಕರ್ಣಿ ಸಿಂಗ್ ರೇಂಜ್‌ನಲ್ಲಿ ಬುಧವಾರ ನಡೆದ ಟ್ರಯಲ್ಸ್‌ನಲ್ಲಿ 17ರ ಹರೆಯದ ಸೌರಭ್ ಈ ಸಾಧನೆ ಮಾಡಿದರು. ಕಳೆದ ವರ್ಷ ವಿಶ್ವಕಪ್‌ನಲ್ಲಿ ಎರಡು ಚಿನ್ನದ ಪದಕ ಜಯಿಸಿದ್ದ ಅಭಿಷೇಕ್ ವರ್ಮಾ ಕೂಡ ಉತ್ತಮ ಪ್ರದರ್ಶನ ನೀಡಿದ್ದು, 585 ಅಂಕ ಗಳಿಸಿ ಎರಡನೇ ಸ್ಥಾನ ಪಡೆದರೆ, ಧರ್ಮೇಂದ್ರ ಸಿಂಗ್(579)ಮೂರನೇ ಸ್ಥಾನ ಪಡೆದರು.

ಸೌರಭ್ 2018ರಲ್ಲಿ ಏಶ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಜಯಿಸಿದ್ದು, ಕಳೆದ ವರ್ಷ ನಡೆದಿದ್ದ ವಿಶ್ವಕಪ್ ಸ್ಪರ್ಧೆಗಳಲ್ಲಿ ಎರಡು ಬಾರಿ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಹಾಗೂ ಮನು ಭಾಕರ್ ಜತೆಗೆ ಮಿಕ್ಸೆಡ್ ಟೀಮ್‌ನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದರು.

ಟೋಕಿಯೊ ಒಲಿಂಪಿಕ್ಸ್‌ಗೆ ತಂಡವನ್ನು ಅಂತಿಮಗೊಳಿಸಲು ಏಶ್ಯನ್ ಗೇಮ್ಸ್, ವರ್ಲ್ಡ್ ಚಾಂಪಿಯನ್‌ಶಿಪ್, ವರ್ಲ್ಡ್ ಕಪ್ ಹಾಗೂ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಶೂಟರ್‌ಗಳು ಗಳಿಸಿರುವ ಸ್ಕೋರ್‌ಗಳನ್ನು ಪರಿಗಣನೆಗೆ ತೆಗೆದುಕೊಳ್ಳಲು ರಾಷ್ಟ್ರೀಯ ರೈಫಲ್ ಅಸೋಸಿಯೇಶನ್ ನಿರ್ಧರಿಸಿತ್ತು. ಈ ಋತುವಿನಲ್ಲಿ ದಿಲ್ಲಿಯಲ್ಲಿ ನಿಗದಿಯಾಗಿರುವ ಶೂಟಿಂಗ್ ವಿಶ್ವಕಪ್ ಮುಂದೂಡಿಕೆಯಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಶೂಟಿಂಗ್ ಸಂಘಟನೆಯು ಟ್ರಯಲ್ಸ್ ನಡೆಸಲು ನಿರ್ಧರಿಸಿದೆ.

ಮಹಿಳಾ ಏರ್ ಪಿಸ್ತೂಲ್ ವಿಭಾಗದಲ್ಲಿ ಒಲಿಂಪಿಯನ್ ಅನ್ನು ರಾಜ್ ಸಿಂಗ್ 579 ಅಂಕ ಗಳಿಸಿ ಅಗ್ರ ಸ್ಥಾನ ಪಡೆದಿದ್ದಾರೆ. ಇಶಾ ಸಿಂಗ್‌ಗಿಂತ ಒಂದು ಅಂಕ ಮುಂದಿದ್ದಾರೆ. ಒಲಿಂಪಿಕ್ಸ್ ಕೋಟಾವನ್ನು ಗಳಿಸಿರುವ ಮನು ಹಾಗೂ ಯಶಸ್ವಿನಿ ದೇಸ್ವಾಲ್ ಕ್ರಮವಾಗಿ 574 ಹಾಗೂ 570 ಅಂಕ ಗಳಿಸಿದ್ದಾರೆ.

50 ಮೀಟರ್ ರೈಫಲ್-3 ಪೊಸಿಶನ್ ಸ್ಪರ್ಧೆಯಲ್ಲಿ ಪುರುಷ ಹಾಗೂ ಮಹಿಳಾ ವಿಭಾಗದ ಅಗ್ರ-4 ಸ್ಥಾನಗಳನ್ನು ಒಲಿಂಪಿಕ್ಸ್ ಕೋಟಾ ವಿಜೇತರಾದ ಐಶ್ವರ್ಯ ಪ್ರತಾಪ್ ಸಿಂಗ್ ಥೋಮರ್, ಅಂಜುಮ್ ವೌದ್ಗಿಲ್, ತೇಜಸ್ವಿನಿ ಸಾವಂತ್ ಹಾಗೂ ಸಂಜೀವ್ ರಾಜ್‌ಪೂತ್ ಪಡೆದಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಜಯಿಸುವ ಮೂಲಕ ಅಂಜುಮ್ ಏರ್ ರೈಫಲ್ ಒಲಿಂಪಿಕ್ಸ್ ಕೋಟಾವನ್ನು ಗೆದ್ದುಕೊಂಡಿದ್ದರು. ಅಂಜುಮ್ ಒಲಿಂಪಿಕ್ಸ್‌ನಲ್ಲಿ ರೈಫಲ್-3 ಪೊಸಿಶನ್ ಇವೆಂಟ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.

ಪುರುಷರ ವಿಭಾಗದಲ್ಲಿ ಐಶ್ವರ್ಯ ಪ್ರತಾಪ್ ಸಿಂಗ್ 1,178 ಅಂಕ ಗಳಿಸಿ ಅಗ್ರಸ್ಥಾನ ಪಡೆದರೆ, ಮಹಿಳಾ ವಿಭಾಗದಲ್ಲಿ 1,174 ಅಂಕ ಕಲೆ ಹಾಕಿರುವ ಅಂಜುಮ್ ಉತ್ತಮ ಪ್ರದರ್ಶನ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News