ರಾಜ್ಯದಲ್ಲಿ ಮತ್ತೊಂದು ಕೊರೋನ ಶಂಕಿತ ಪ್ರಕರಣ ಪತ್ತೆ: ಯುವತಿ ಆಸ್ಪತ್ರೆಗೆ ದಾಖಲು
ಬೆಂಗಳೂರು, ಮಾ.19: ರಾಜ್ಯದಲ್ಲಿ ಈಗಾಗಲೇ ಕೊರೋನ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಈ ಬೆನ್ನಲ್ಲೇ ನಗರದಲ್ಲಿ ಮತ್ತೊಂದು ಕೊರೋನ ಶಂಕಿತ ಪ್ರಕರಣ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಫ್ರಾನ್ಸ್‌ನಿಂದ ನಗರಕ್ಕೆ ಬಂದಿದ್ದ ಯುವತಿಯಲ್ಲಿ ಕೊರೋನ ವೈರಸ್ ಲಕ್ಷಣಗಳು ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಆರೋಗ್ಯಾಧಿಕಾರಿಗಳು ಏರ್‌ಪೋರ್ಟ್‌ನಲ್ಲಿ ಪ್ರಾಥಮಿಕ ತಪಾಸಣೆ ನಡೆಸಿದ ಬಳಿಕ ಈ ಶಂಕಿತ ಪ್ರಕರಣ ಪತ್ತೆಯಾಗಿದೆ.
ಯುವತಿಗೆ ಕೆಮ್ಮು ಮತ್ತು ಜ್ವರ ಉಲ್ಬಣವಾಗಿದ್ದು, ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎನ್ನಲಾಗಿದೆ. ಕೊರೋನ ಶಂಕಿತ ಯುವತಿ ಐಟಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗುತ್ತಿದೆ.
ಸದ್ಯ ಟೆಕ್ ಪಾರ್ಕ್ ಬಳಿ ಇರುವ ಪಿಜಿಯಲ್ಲಿ ಯುವತಿ ವಾಸವಿದ್ದಳು ಎನ್ನಲಾಗಿದೆ. ಆಸ್ಪತ್ರೆಗೆ ದಾಖಲಾಗಿರುವ ಯುವತಿಯ ರಕ್ತ ಮತ್ತು ಕಫದ ಮಾದರಿಯನ್ನು ಪರೀಕ್ಷೆಗಾಗಿ ರಾಜೀವ್ ಗಾಂಧಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಇನ್ನೂ ಸಹ ವರದಿ ಬಂದಿಲ್ಲ. ಬೌರಿಂಗ್ ಆಸ್ಪತ್ರೆಯ ವೈದ್ಯರು ವರದಿಗಾಗಿ ಕಾಯುತ್ತಿದ್ದಾರೆ. ಸದ್ಯ ಯುವತಿಯನ್ನು ಬೌರಿಂಗ್ ಆಸ್ಪತ್ರೆಯಲ್ಲಿ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಜೀವ್ ಗಾಂಧಿ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.