ಕೇಂದ್ರ ಸರಕಾರ ಸಂವಿಧಾನದ ಒಂದೊಂದೇ ಹಾಳೆಗಳನ್ನು ಕಿತ್ತು ಹಾಕುತ್ತಿದೆ: ಸಿ.ಎಂ.ಇಬ್ರಾಹಿಂ

Update: 2020-03-19 14:27 GMT

ಬೆಂಗಳೂರು, ಮಾ.19: ಕೇಂದ್ರ ಸರಕಾರ ನಾವು ಸಂವಿಧಾನದಡಿಯಲ್ಲಿಯೇ ಆಡಳಿತ ನಡೆಸುತ್ತಿದ್ದೇವೆಂದು ಹೇಳುತ್ತಲೆ, ಸಂವಿಧಾನದ ಒಂದೊಂದೇ ಹಾಳೆಗಳನ್ನು ಕಿತ್ತು ಹಾಕುತ್ತಿದೆ ಎಂದು ಕಾಂಗ್ರೆಸ್‌ನ ಹಿರಿಯ ಸದಸ್ಯ ಸಿ.ಎಂ.ಇಬ್ರಾಹಿಂ ಆರೋಪಿಸಿದ್ದಾರೆ. 

ಗುರುವಾರ ವಿಧಾನಪರಿಷತ್‌ನಲ್ಲಿ ಸಂವಿಧಾನದ ಕುರಿತ ಚರ್ಚೆಯ ವೇಳೆ ಮಾತನಾಡಿದ ಅವರು, ಇತ್ತೀಚಿಗೆ ಕೇಂದ್ರ ಸರಕಾರ ಜಾರಿ ಮಾಡಿರುವ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಕಾನೂನುಗಳನ್ನು ಗಮನಿಸಿದರೆ ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ಬಂದಿರುವುದು ನಾವು ಗಮನಿಸಬಹುದೆಂದು ತಿಳಿಸಿದರು.

ಸರಕಾರದ ಅಂಕಿ ಅಂಶಗಳ ಪ್ರಕಾರವೇ ರಾಜ್ಯದಲ್ಲಿರುವ ವಲಸಿಗರ ಸಂಖ್ಯೆ 300 ರಿಂದ 400 ಇದೆ. ಇವರನ್ನು ಪತ್ತೆ ಮಾಡಲು ರಾಜ್ಯದ 6.50 ಕೋಟಿ ಜನರನ್ನು ಅನುಮಾನದಿಂದ ನೋಡುವುದೇ ಪ್ರಜಾಪ್ರಭುತ್ವದ ವಿರೋಧಿಯಾದದ್ದು. ಆಯಾ ತಾಲೂಕಿನ ತಹಶೀಲ್ದಾರ್ ಹಾಗೂ ಪೊಲೀಸರಲ್ಲಿ ಮಾಹಿತಿ ಕೇಳಿದರೆ, ಇರುವ ಬೆರಳೆಣಿಕೆಯ ವಲಸಿಗರ ಪಟ್ಟಿ ಕೊಡುತ್ತಾರೆ. ಆದರೆ, ನಮ್ಮ ಸರಕಾರ ಅಕ್ಕಿಯಲ್ಲಿ ಕಲ್ಲನ್ನು ಹುಡುಕುವುದು ಬಿಟ್ಟು, ಕಲ್ಲಿನಲ್ಲಿ ಅಕ್ಕಿಯನ್ನು ಹುಡುಕಲು ಹೊರಟಿದೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಸಮಾನತೆಯನ್ನು ಕಾಣುತ್ತಿಲ್ಲ. ಕರ್ನಾಟಕದಿಂದ ಕೇಂದ್ರ ಸರಕಾರಕ್ಕೆ ಹೆಚ್ಚಿನ ತೆರಿಗೆ ಹೋಗುತ್ತಿದೆ. ಆದರೆ, ರಾಜ್ಯದ ಪಾಲಿಗೆ ಬರಬೇಕಾದ ಜಿಎಸ್‌ಟಿ ಹಣ ಕೊಡಲು ಮಾತ್ರ ಉದಾಸೀನ ಮಾಡುತ್ತಿದೆ. ಕೇಂದ್ರದ ಇಂತಹ ನೀತಿಗಳು ಒಕ್ಕೂಟ ವ್ಯವಸ್ಥೆಗೆ ಅಪಾಯವನ್ನು ತಂದೊಡ್ಡುತ್ತವೆ ಎಂದು ಅವರು ಎಚ್ಚರಿಸಿದರು.

ಇವಿಎಂ ಬೇಡ: ಜಗತ್ತಿನ ಹಲವು ದೇಶಗಳು ಪ್ರಾರಂಭದಲ್ಲಿ ಇವಿಎಂ ಮತಯಂತ್ರಗಳನ್ನು ಅಳವಡಿಸಿಕೊಂಡು ನಂತರ ಅದನ್ನು ಬದಲಾಯಿಸಿ, ಬ್ಯಾಲೆಟ್ ಪೇಪರ್ ಮೂಲಕವೇ ಚುನಾವಣೆ ನಡೆಸುತ್ತಿವೆ. ಅದೇ ಮಾದರಿಯಲ್ಲಿ ನಮ್ಮ ದೇಶದಲ್ಲೂ ಇವಿಎಂ ಬದಲಾಗಿ ಬ್ಯಾಲೆಟ್ ಪೇಪರ್‌ನಲ್ಲಿ ಮತದಾನ ನಡೆಯಲಿ ಎಂದು ಅವರು ಒತ್ತಾಯಿಸಿದರು.

ಇಬ್ರಾಹಿಂ ಮಾತಿನಿಂದ ಗದ್ದಲ

ಕಂಪೆನಿಯ ಮಾಲಕರು ವ್ಯಕ್ತಿಗೆ ಕೆಲಸ ಕೊಡುವಾಗ ಅನುಭವ ಕೇಳುತ್ತಾನೆ. ಆದರೆ, ತನ್ನ ಮಗಳ ಮದುವೆ ಮಾಡುವಾಗ ಅಳಿಯನ ಬಳಿ ಅನುಭವ ಯಾಕೆ ಕೇಳುವುದಿಲ್ಲವೆಂಬ ಕಾಂಗ್ರೆಸ್‌ನ ಸಿ.ಎಂ.ಇಬ್ರಾಹಿಂ ಮಾತು ಸದನದಲ್ಲಿ ಗದ್ದಲಕ್ಕೆ ಕಾರಣವಾಯಿತು.

18 ವರ್ಷ ತುಂಬುತ್ತಿದ್ದಂತೆ ಮತದಾನಕ್ಕೆ ಅವಕಾಶ ಮಾಡಿಕೊಡುವುದು ಸರಿಯಲ್ಲ. ಯಾವುದೇ ಅನುಭವ ಇರುವುದಿಲ್ಲವೆಂಬ ವಿಷಯದ ಕುರಿತು ಮಾತನಾಡುತ್ತಿದ್ದ ಸಂದರ್ಭದಲ್ಲಿ ಇಬ್ರಾಹಿಂ ಮದುವೆಯಾಗುವ ಹುಡುಗನ ಅನುಭವ ಕೇಳುವುದಿಲ್ಲವೆಂಬ ಮಾತು ವಾಗ್ವಾದಕ್ಕೆ ಕಾರಣವಾಯಿತು. ಕೂಡಲೇ ಬಿಜೆಪಿ ಸದಸ್ಯೆ ತೇಜಸ್ವಿನಿ, ಹೆಣ್ಣು ಮಕ್ಕಳನ್ನು ಅನುಮಾನಿಸುವ ರೀತಿಯಲ್ಲಿ ಇಬ್ರಾಹಿಂ ಮಾತನಾಡಿದ್ದಾರೆ. ಕೂಡಲೇ ಅವರು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ, ನಾವು ಸದನದಿಂದ ಹೊರಕ್ಕೆ ಹೋಗುತ್ತೇನೆಂದು ಹೇಳಿದರು. ಇದಕ್ಕೆ ಬಿಜೆಪಿ ಸದಸ್ಯರು ಧ್ವನಿಗೂಡಿಸಿದರು. ನಂತರ ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News