ಡ್ರಗ್ಸ್ ಮಾಫಿಯಾದಲ್ಲಿ ಪಾಲ್ಗೊಂಡವರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ: ಗೃಹ ಸಚಿವ ಬೊಮ್ಮಾಯಿ
ಬೆಂಗಳೂರು, ಮಾ.19: ರಾಜಧಾನಿ ಸೇರಿದಂತೆ ರಾಜ್ಯದಲ್ಲಿ ಅಕ್ರಮ ಮಾದಕ ವಸ್ತುಗಳ ಮಾರಾಟದ ಕುರಿತು ಮಾಹಿತಿಯಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ವಿಧಾನಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕ ಎಂ.ನಾರಾಯಣಸ್ವಾಮಿ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ಡ್ರಗ್ಸ್ ಮಾಫಿಯಾ ಸಹ ಇಂದು ದೊಡ್ಡ ಜಾಲವಾಗಿ ಬೆಳೆದುಕೊಂಡಿದ್ದು, ದೊಡ್ಡ ಅಪರಾಧ ಕೃತ್ಯವಾಗಿದೆ ಎಂದರು.
ರಾಜ್ಯದ ಎಲ್ಲ ಡಿಸಿಪಿಗಳಿಗೂ ಪ್ರತಿದಿನ ಗಸ್ತು ತಿರುಗಲು ಸೂಚನೆ ನೀಡಲಾಗಿದೆ. ಎಲ್ಲರೂ, ಅಪರಾಧದ ಜತೆಗೆ ಇದರ ಕುರಿತು ವರದಿ ನೀಡುವಂತೆ ತಿಳಿಸಲಾಗಿದೆ. ಎಲ್ಲಿಯಾದರೂ ಮಾಹಿತಿಯಿದ್ದರೂ ಕ್ರಮ ಕೈಗೊಳ್ಳದೇ ಇರುವ ಪ್ರಕರಣ ವರದಿಯಾದರೆ, ಅವರ ವಿರುದ್ಧ ಯಾವುದೇ ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ವಿದೇಶಗಳಿಂದ ಬರುವಂತಹವರು ವಿದ್ಯಾರ್ಥಿ ವೀಸಾ ಅವಧಿ ಮುಗಿದರೂ, ಕಾನೂನು ದುರುಪಯೋಗ ಮಾಡಿಕೊಂಡು ರಾಜ್ಯದಲ್ಲಿಯೇ ಉಳಿಯುತ್ತಿರುವ ಪ್ರಕರಣ ವರದಿಯಾಗಿದೆ. ಅನಗತ್ಯವಾಗಿ ಕೇಸುಗಳನ್ನು ಹಾಕಿಸಿಕೊಂಡು, ಅದು ಮುಗಿಯವರೆಗೂ ರಾಜ್ಯದಲ್ಲಿಯೇ ಇರುತ್ತಿದ್ದಾರೆ. ಅಲ್ಲದೆ, ಮತ್ತಷ್ಟು ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಬೊಮ್ಮಾಯಿ ಮಾಹಿತಿ ನೀಡಿದರು.
ರಾಜ್ಯದಲ್ಲಿ ಪ್ರಥಮ ಬಾರಿಗೆ ಡ್ರಗ್ಸ್ ಮಾಫಿಯಾದಲ್ಲಿ ಪಾಲ್ಗೊಂಡವರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುತ್ತಿದ್ದೇವೆ. 2017 ರಲ್ಲಿ 44, 2018 ರಲ್ಲಿ 22, 2019 ರಲ್ಲಿ 67 ಹಾಗೂ ಈ ವರ್ಷದಲ್ಲಿ 89 ಜನರನ್ನು ಬಂಧಿಸಲಾಗಿದೆ. ಈ ಮಾಫಿಯಾದಲ್ಲಿ ಪಾಲ್ಗೊಂಡಿದ್ದ ಹೆನ್ರಿ ಎಂಬಾತನನ್ನು ಬಂಧಿಸಿದ್ದು, ಆತನ ಮೂಲಕ ದಿಲ್ಲಿಯಲ್ಲಿರುವ ಪ್ರಮುಖ ಅಪರಾಧಿಯನ್ನು ಹುಡುಕಲಾಗುತ್ತಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ 395 ಅಕ್ರಮ ವಲಸಿಗರು: ರಾಜ್ಯದಲ್ಲಿ ಒಟ್ಟು 395 ಅಕ್ರಮ ಬಾಂಗ್ಲಾ ವಲಸಿಗರಿದ್ದು, ಅದರಲ್ಲಿ ಬೆಂಗಳೂರು ನಗರದಲ್ಲಿ ಅತಿಹೆಚ್ಚು(316) ಜನರಿದ್ದಾರೆ. ಇವರ ವೀಸಾ ಅವಧಿ ಮುಗಿದಿದ್ದರೂ, ಇಲ್ಲಿಯೇ ಇದ್ದಾರೆ. ಅನೇಕ ಅಕ್ರಮ ಚಟುವಟಿಕೆಗಳಲ್ಲಿ ಇವರ ಪಾಲು ಕಂಡುಬಂದಿದೆ. ವ್ಯವಸ್ಥಿತವಾಗಿ ಕಾರ್ಯಾಚರಣೆ ಮಾಡುವ ಮೂಲಕ ಇವರನ್ನು ಗಡಿಪಾರು ಮಾಡಲಾಗುತ್ತಿದೆ ಎಂದರು.
ಲೆಹರ್‌ಸಿಂಗ್ ಕೇಳಿದ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸುತ್ತಾ ಮಾತನಾಡಿದ ಸಚಿವ ಬೊಮ್ಮಾಯಿ, ಅಕ್ರಮ ವಿದೇಶಿಯರಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸಲು ನೆರವಾದವರ ವಿರುದ್ಧ ನಗರದ ಬೆಳ್ಳಂದೂರು, ಕುಮಾರಸ್ವಾಮಿ ಲೇಔಟ್, ಬನಶಂಕರಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಇವು ಈಗ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿವೆ ಎಂದು ತಿಳಿಸಿದರು.