ಕೊರೋನ ಭೀತಿ: ರಾಜ್ಯದ ಹಲವು ರೈಲು ಸಂಚಾರ ರದ್ದು

Update: 2020-03-19 14:41 GMT

ಬೆಂಗಳೂರು, ಮಾ.19: ರಾಜ್ಯದ ವಿವಿದೆಡೆ ಕೊರೋನ ವೈರಸ್ ಸೋಂಕು ಆತಂಕ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಯಿಂದ ರೈಲ್ವೆ ಇಲಾಖೆ ಕಠಿಣ ಕ್ರಮ ಕೈಗೊಂಡಿದ್ದು, ನೈರುತ್ಯ ರೈಲ್ವೆ ಇಲಾಖೆ ಮುನ್ನೆಚ್ಚರಿಕೆಯಾಗಿ ಕೆಲವೊಂದು ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಇಂದಿನಿಂದ ಈ ಆದೇಶ ಮಾ.31ರವರೆಗೆ ಅನ್ವಯವಾಗಲಿದೆ.

ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣಿಸುವ ಜನಶತಾಬ್ದಿ ಎಕ್ಸ್‌ಪ್ರೆಸ್, ಮೈಸೂರು-ಯಲಹಂಕ-ಮೈಸೂರು ಸಂಚರಿಸಲಿರುವ ಮಾಲ್ಗುಡಿ ಎಕ್ಸ್‌ಪ್ರೆಸ್, ಯಶವಂತಪುರದಿಂದ ಪಂಢರಪುರ ಸಂಚರಿಸುವ ಯಶವಂತಪುರ ಎಕ್ಸ್‌ಪ್ರೆಸ್, ಬೆಂಗಳೂರಿನಿಂದ ಮೈಸೂರು ಸಂಚರಿಸಲಿರುವ ರಾಜಾರಾಣಿ ಎಕ್ಸ್‌ಪ್ರೆಸ್, ಶಿವಮೊಗ್ಗದಿಂದ ಯಶವಂತಪುರ ನಡುವೆ ನಾಲ್ಕು ದಿನಕ್ಕೊಮ್ಮೆ ಸಂಚರಿಸುವ ವಿಕ್ಲಿ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಮಾ.20ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಿದೆ.

ಇದೇ ವೇಳೆ, ಮೈಸೂರಿನಿಂದ ರೇಣುಗುಂಟಾ ಮೈಸೂರು ಎಕ್ಸ್‌ಪ್ರೆಸ್, ಸಾಯಿನಗರ ಶಿರಡಿ ಸಂಚರಿಸುವ ಮೈಸೂರು ಎಕ್ಸ್‌ಪ್ರೆಸ್, ಯಶವಂತಪುರದಿಂದ ಮೈಸೂರಿಗೆ ಸಂಚರಿಸುವ ಯಶವಂತಪುರ ವಿಕ್ಲಿ ಎಕ್ಸ್‌ಪ್ರೆಸ್, ಬೆಳಗಾವಿಯಿಂದ ಮೈಸೂರು ನಡುವೆ ಸಂಚರಿಸುವ ವಿಶ್ವಮಾನವ ಎಕ್ಸ್‌ಪ್ರೆಸ್ ಹಾಗೂ ಮೈಸೂರಿನಿಂದ ಬೆಳಗಾವಿ ಹೋಗುವ ವಿಶ್ವಮಾನವ ಎಕ್ಸ್‌ಪ್ರೆಸ್ ಮಾ.31ರ ವರೆಗೂ ತಾತ್ಕಾಲಿಕವಾಗಿ ರದ್ದುಗೊಳಿಸಿ ರೈಲ್ವೇ ಸಚಿವಾಲಯ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News