×
Ad

ಪೊಲೀಸ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಸಂದರ್ಶನ ಇಲ್ಲದಿದ್ದರೆ ಹಳ್ಳಿ ಹುಡುಗರಿಗೆ ಅನ್ಯಾಯ: ಸಿದ್ದರಾಮಯ್ಯ

Update: 2020-03-19 21:12 IST

ಬೆಂಗಳೂರು, ಮಾ.19: ಪೊಲೀಸ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ನಡೆಯುತ್ತಿದ್ದ ಸಂದರ್ಶನವನ್ನು ತೆಗೆದು ಹಾಕಲಾಗಿದೆ ಎಂಬ ಮಾಹಿತಿಯಿದೆ. ನನ್ನ ಪ್ರಕಾರ ಸಂದರ್ಶನ ಇರಬೇಕು. ಇಲ್ಲದಿದ್ದರೆ, ಹಳ್ಳಿ ಹುಡುಗರಿಗೆ ನ್ಯಾಯ ಸಿಗುವುದಿಲ್ಲ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಗುರುವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಕೆಪಿಎಸ್ಸಿಯಲ್ಲಿ ನಡೆಯುವ ಪರೀಕ್ಷೆಗಳಿಗೆ 200 ಅಂಕಗಳಿತ್ತು. ಎಷ್ಟು ಅಂಕಗಳಿರುತ್ತವೆಯೋ ಅದರಲ್ಲಿ ಶೇ.12.5ರಷ್ಟು ಅಂಕಗಳನ್ನು ಸಂದರ್ಶನಕ್ಕೆ ಇಡಬೇಕು ಎಂದು ನ್ಯಾಯಾಲಯವೆ ಹೇಳಿದೆ ಎಂದರು.

ಇದೀಗ, 200 ಅಂಕಗಳನ್ನು 50 ಅಂಕಗಳಿಗೆ ಇಳಿಸಿದ್ದಾರೆ ಎಂಬ ಮಾಹಿತಿಯಿದೆ. 50 ಅಂಕಗಳನ್ನು ಇಟ್ಟರೆ ದಲಿತರು, ಹಿಂದುಳಿದವರು, ಸಾಮಾನ್ಯ ವರ್ಗಕ್ಕೆ ಬರಲು ಕಷ್ಟವಾಗುತ್ತದೆ. ಮೀಸಲಾತಿ ಈಗ ಎಲ್ಲ ಜಾತಿಯವರಿಗೂ ಸಿಕ್ಕಿದೆ. ಅದನ್ನು ಸರಿಪಡಿಸಲು ಶೇ.12.5ರಷ್ಟು ಮಾಡುವುದನ್ನು ಬಿಟ್ಟು, 50 ಅಂಕಗಳನ್ನು ಮಾಡಿದರೆ ಸಮಸ್ಯೆಯಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಅಭ್ಯರ್ಥಿ ಸಂದರ್ಶನಕ್ಕೆ ಹೋಗಿ, ಸುಮ್ಮನೆ ಕೂತಿದ್ದು ಬಂದರೂ 20 ಅಂಕಗಳನ್ನು ನೀಡಬೇಕು. ಇನ್ನು ಉಳಿದ 30 ಅಂಕಗಳು ಪರೀಕ್ಷೆಗೆ ಸಂಬಂಧಿಸಿದ್ದು. ಈ ಪದ್ಧತಿ ಮುಂದುವರೆಸಿದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ರಾಜ್ಯ ಸರಕಾರ 50 ಅಂಕಗಳ ಆದೇಶವನ್ನು ಬದಲಾವಣೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News