ಭ್ರಷ್ಟಾಚಾರ ನಿಗ್ರಹ ನೀತಿ ಸಂಹಿತೆ ಉಲ್ಲಂಘನೆ ಉಮರ್ ವಿರುದ್ಧ ಪಿಸಿಬಿ ಆರೋಪ

Update: 2020-03-20 17:40 GMT

ಇಸ್ಲಾಮಾಬಾದ್, ಮಾ.20: ಭ್ರಷ್ಟಾಚಾರ ನಿಗ್ರಹ ನೀತಿ ಸಂಹಿತೆ ಉಲ್ಲಂಘಿಸಿರುವ ಮಧ್ಯಮ ಸರದಿಯ ಬ್ಯಾಟ್ಸ್‌ಮನ್ ಉಮರ್ ಅಕ್ಮಲ್ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಆರೋಪ ದಾಖಲಿಸಿದೆ. ಕಳೆದ ತಿಂಗಳು ಪಾಕಿಸ್ತಾನ ಸೂಪರ್ ಲೀಗ್ ಟ್ವೆಂಟಿ-20 ಟೂರ್ನಮೆಂಟ್ ಆರಂಭವಾಗಲು ಕೆಲವೇ ಗಂಟೆ ಬಾಕಿ ಇರುವಾಗ ಅಕ್ಮಲ್‌ರನ್ನು ಪಿಸಿಬಿ ಅಮಾನತುಗೊಳಿಸಿತ್ತು. ಪಿಎಸ್‌ಎಲ್‌ನಲ್ಲಿ ಅಕ್ಮಲ್ ಕರಾಚಿಯ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವನ್ನು ಪ್ರತಿನಿಧಿಸಿದ್ದರು.

ಕಳೆದ ಮಂಗಳವಾರ ಅಕ್ಮಲ್‌ಗೆ ಆರೋಪದ ನೋಟಿಸ್‌ನ್ನು ಕಳುಹಿಸಿಕೊಡಲಾಗಿದ್ದು, ಮಾರ್ಚ್ 31ರೊಳಗೆ ಲಿಖಿತ ಉತ್ತರ ನೀಡುವಂತೆ ತಿಳಿಸಲಾಗಿದೆ ಎಂದು ಪಿಸಿಬಿ ತಿಳಿಸಿದೆ. ಒಂದು ವೇಳೆ ಅಕ್ಮಲ್ ತಪ್ಪಿತಸ್ಥ ಎಂದು ಕಂಡುಬಂದರೆ ಅವರನ್ನು ಆರು ತಿಂಗಳು ಅಥವಾ ಆಜೀವ ಪರ್ಯಂತ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿಷೇಧ ಹೇರಲಾಗುವುದು. 2017ರಲ್ಲಿ ಪಾಕಿಸ್ತಾನ ತಂಡ ಚಾಂಪಿಯನ್ಸ್ ಟ್ರೋಫಿಯನ್ನು ಜಯಿಸುವ ಮೊದಲು ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲವಾದ ಅಕ್ಮಲ್‌ರನ್ನು ಇಂಗ್ಲೆಂಡ್‌ನಿಂದ ಸ್ವದೇಶಕ್ಕೆ ವಾಪಸ್ ಕಳುಹಿಸಿಕೊಡಲಾಗಿತ್ತು. 29ರ ಹರೆಯದ ಅಕ್ಮಲ್ 2009ರಲ್ಲಿ ನ್ಯೂಝಿಲ್ಯಾಂಡ್ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಆದರೆ, ಕೇವಲ 16 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದು, ಒಟ್ಟು 1,003 ರನ್ ಗಳಿಸಿದ್ದಾರೆ. 2011ರಲ್ಲಿ ಝಿಂಬಾಬ್ವೆ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News