ಕೊರೋನವೈರಸ್ ಬಗ್ಗೆ ರಶ್ಯ, ಚೀನಾ, ಇರಾನ್‌ಗಳಿಂದ ಅಪಪ್ರಚಾರ

Update: 2020-03-21 17:20 GMT

ವಾಶಿಂಗ್ಟನ್, ಮಾ. 21: ರಶ್ಯ, ಚೀನಾ ಮತ್ತು ಇರಾನ್‌ಗಳು ನೋವೆಲ್-ಕೊರೋನವೈರಸ್ ಬಗ್ಗೆ ‘ಅಪಪ್ರಚಾರ’ ನಡೆಸುತ್ತಿವೆ ಹಾಗೂ ವೇಗವಾಗಿ ಹರಡುತ್ತಿರುವ ಸಾಂಕ್ರಾಮಿಕವನ್ನು ನಿಯಂತ್ರಿಸಲು ಅಮೆರಿಕ ನಡೆಸುತ್ತಿರುವ ಪ್ರಯತ್ನಗಳನ್ನು ‘ವಿಫಲಗೊಳಿಸಲು’ ಸಂಘಟಿತ ಪ್ರಯತ್ನಗಳನ್ನು ನಡೆಸುತ್ತಿವೆ ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಆರೋಪಿಸಿದ್ದಾರೆ.

ಶ್ವೇತಭವನದಲ್ಲಿ ಶುಕ್ರವಾರ ಮಾತನಾಡಿದ ಅವರು, ಅಪಪ್ರಚಾರ ಅಭಿಯಾನಗಳು ವ್ಯಾಪಕವಾಗಿ ಹರಡಿವೆ ಎಂದು ಹೇಳಿದರು. ಅಮೆರಿಕದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮ ಮಾಹಿತಿಗಳು ವಿಶ್ವಾಸಾರ್ಹ ಮೂಲಗಳಿಂದ ಬರುತ್ತಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಿ ಎಂದರು. ಕೆಲವರು ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿಗಳನ್ನು ಸೃಷ್ಟಿಸಿ ಹರಡುತ್ತಿದ್ದಾರೆ ಎಂದು ಅವರು ಹೇಳಿದರು.

‘‘ಟ್ವಿಟರ್ ಮತ್ತು ಜಗತ್ತಿನಾದ್ಯಂತ ಜನರು ಸುಳ್ಳು ಮಾಹಿತಿಗಳನ್ನು ನೋಡುತ್ತಿರುವ ಬಗ್ಗೆ ನಾನು ಮಾತನಾಡುತ್ತಿದ್ದೇನೆ. ಇಂಥ ಕೆಲವು ಸುಳ್ಳು ಸುದ್ದಿಗಳು ಸರಕಾರಗಳಿಂದ ಬರುತ್ತಿವೆ ಹಾಗೂ ಕೆಲವು ಸುದ್ದಿಗಳು ವ್ಯಕ್ತಿಗಳಿಂದ ಬರುತ್ತಿವೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನುಡಿದರು.

ಈ ‘ಅಪಪ್ರಚಾರ ಅಭಿಯಾನ’ಗಳಲ್ಲಿ ಮೂರು ದೇಶಗಳು ಶಾಮೀಲಾಗಿವೆ ಎಂದು ಅವರು ಹೇಳಿದರು.

ಸೋಂಕಿನ ಸರಿಯಾದ ಮಾಹಿತಿ ನೀಡಿ: ಚೀನಾಕ್ಕೆ ಒತ್ತಾಯ

ನೋವೆಲ್-ಕೊರೋನವೈರಸ್‌ಗೆ ಸಂಬಂಧಿಸಿದ ಹೆಚ್ಚಿನ ಅಂಕಿಸಂಖ್ಯೆಗಳನ್ನು ನೀಡಿ ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಶುಕ್ರವಾರ ಚೀನಾವನ್ನು ಒತ್ತಾಯಿಸಿದ್ದಾರೆ.

‘‘ಚೀನಾ ಕಮ್ಯುನಿಸ್ಟ್ ಪಾರ್ಟಿಗೆ ಲಭಿಸುವ ಅಂಕಿ-ಅಂಶಗಳು ಸೇರಿದಂತೆ ಪ್ರತಿಯೊಂದು ದೇಶಕ್ಕೆ ಲಭಿಸುವ ಅಂಕಿ-ಸಂಖ್ಯೆಗಳನ್ನು ಇಡೀ ಜಗತ್ತಿಗೆ ಲಭಿಸಬೇಕು. ಹೀಗೆ ಆಗುವಂತೆ ನಾವು ನೋಡಿಕೊಳ್ಳಬೇಕು. ಜನರನ್ನು ಸುರಕ್ಷಿತವಾಗಿಡಲು ಇದು ಅಗತ್ಯವಾಗಿದೆ’’ ಎಂದು ಅವರು ಹೇಳಿದರು.

ಚೀನಾದಲ್ಲಿ ನೋವೆಲ್-ಕೊರೋನವೈರಸ್ ಪತ್ತೆಯಾದ ಬಳಿಕ, ಹಲವು ಅಮೂಲ್ಯ ದಿನಗಳನ್ನು ಚೀನಾ ವ್ಯರ್ಥಗೊಳಿಸಿತು ಹಾಗೂ ವುಹಾನ್‌ನಿಂದ ಲಕ್ಷಾಂತರ ಜನರು ಇಟಲಿ ಸೇರಿದಂತೆ ಜಗತ್ತಿನ ಎಲ್ಲ ಕಡೆಗಳಿಗೆ ಹೋಗಲು ಅವಕಾಶ ನೀಡಿತು ಎಂದು ಇದಕ್ಕೂ ಮೊದಲು ‘ಫಾಕ್ಸ್ ನ್ಯೂಸ್’ಗೆ ನೀಡಿದ ಸಂದರ್ಶನವೊಂದರಲ್ಲಿ ಪಾಂಪಿಯೊ ಹೇಳಿದ್ದಾರೆ.

ಹಸಿ ಹಸಿ ಸುಳ್ಳು ಹೇಳುವುದನ್ನು ನಿಲ್ಲಿಸಿ: ಕೋಪದಿಂದ ಪ್ರತಿಕ್ರಿಯಿಸಿದ ಚೀನಾ

ವುಹಾನ್‌ನಿಂದ ಲಕ್ಷಾಂತರ ಜನರು ರೋಗವನ್ನು ಹೊತ್ತುಕೊಂಡು ಬೇರೆ ಬೇರೆ ದೇಶಗಳಿಗೆ ಹೋಗಿದ್ದಾರೆ ಎಂಬ ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊರ ಹೇಳಿಕೆಗೆ ಅಮೆರಿಕ ಕೋಪದಿಂದ ಪ್ರತಿಕ್ರಿಯಿಸಿದೆ.

‘‘ಹಸಿ ಹಸಿ ಸುಳ್ಳು ಹೇಳುವುದನ್ನು ನಿಲ್ಲಿಸಿ’’ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್ ಹೇಳಿದ್ದಾರೆ. ‘‘ವಿಶ್ವ ಆರೋಗ್ಯ ಸಂಸ್ಥೆಯ ಪರಿಣತರು ಹೇಳಿರುವಂತೆ, ಚೀನಾದ ಪ್ರಯತ್ನಗಳು ಲಕ್ಷಾಂತರ ಸಂಭಾವ್ಯ ಸೋಂಕು ಪ್ರಕರಣಗಳನ್ನು ತಡೆದಿವೆ’’ ಎಂದು ಅವರು ಟ್ವೀಟ್ ಮಾಡಿದರು.

ಬೀಜಿಂಗ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ವಿದೇಶ ಸಚಿವಾಲಯದ ಇನ್ನೋರ್ವ ವಕ್ತಾರ ಗೆಂಗ್ ಶುವಾಂಗ್, ಚೀನಾ ‘ಅಗಾಧ ತ್ಯಾಗ’ವನ್ನು ಮಾಡಿದೆ ಹಾಗೂ ಜಾಗತಿಕ ಆರೋಗ್ಯಕ್ಕೆ ದೇಣಿಗೆ ನೀಡಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News