ಒಲಿಂಪಿಕ್ಸ್ ಮುಂದೂಡಲೇಬೇಕು: ಶರತ್ ಕಮಲ್

Update: 2020-03-22 04:31 GMT

ಹೊಸದಿಲ್ಲಿ, ಮಾ.21: ಕೋವಿಡ್-19 ಭೀತಿಯ ಕಾರಣಕ್ಕೆ ಈ ವರ್ಷದ ಜುಲೈ-ಆಗಸ್ಟ್‌ನಲ್ಲಿ ನಿಗದಿಯಾಗಿರುವ ಟೋಕಿಯೊ ಒಲಿಂಪಿಕ್ ಗೇಮ್ಸ್‌ನ್ನು ಅಂತರ್‌ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) ಮುಂದೂಡಲೇಬೇಕು ಎಂದು ನಾಲ್ಕನೇ ಬಾರಿ ಒಲಿಂಪಿಕ್ಸ್ ನಲ್ಲಿ ಆಡಲು ಅರ್ಹತೆ ಪಡೆದಿರುವ ಭಾರತದ ಹಿರಿಯ ಟೇಬಲ್ ಟೆನಿಸ್ ಪಟು ಶರತ್ ಕಮಲ್ ಒತ್ತಾಯಿಸಿದ್ದಾರೆ.

ಕಳೆದ ವಾರ ಐಟಿಟಿಎಫ್ ಒಮಾನ್ ಓಪನ್ ಜಯಿಸುವ ಮೂಲಕ 10 ವರ್ಷಗಳ ಬಳಿಕ ಮೊದಲ ಬಾರಿ ಪ್ರಶಸ್ತಿ ಜಯಿಸಿರುವ ಶರತ್ ಸೋಮವಾರ ಬೆಳಗ್ಗಿನ ಜಾವ ಮಸ್ಕತ್‌ನಿಂದ ಭಾರತಕ್ಕೆ ವಾಪಸಾದ ಬಳಿಕ ಸ್ವಯಂ ಪ್ರತ್ಯೇಕವಾಗಿದ್ದಾರೆ.

ಅಂತರ್‌ರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಶನ್(ಐಟಿಟಿಎಫ್)ಎಪ್ರಿಲ್ ಅಂತ್ಯದ ತನಕ ಎಲ್ಲ ಸ್ಪರ್ಧೆಗಳನ್ನು ರದ್ದುಗೊಳಿಸಿದೆ. ಮುಂದಿನ ತಿಂಗಳು ಬ್ಯಾಂಕಾಕ್‌ನಲ್ಲಿ ನಡೆಯಬೇಕಾಗಿದ್ದ ಏಶ್ಯನ್ ಒಲಿಂಪಿಕ್ಸ್ ಅರ್ಹತಾ ಟೂರ್ನಿಯು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ.

‘‘ನಾನೋರ್ವ ಅಥ್ಲೀಟ್ ಆಗಿ ಒಲಿಂಪಿಕ್ಸ್ ನಡೆಯಬೇಕೆಂದು ಬಯಸುವೆ. ಆದರೆ ಇದು ನಡೆಯಬಾರದು. ಕೊರೋನ ವೈರಸ್ ಪರಿಸ್ಥಿತಿಯನ್ನು ಬದಲಾಯಿಸುತ್ತಾ ಬರುತ್ತಿದೆ. ಮೊದಲಿಗೆ ಚೀನಾ, ಇದೀಗ ಇಟಲಿ ಹಾಗೂ ಇರಾನ್‌ನಲ್ಲಿ ನೂರಾರು ಜನರನ್ನು ಬಲಿ ಪಡೆದಿದೆ. ಇದು ಏಶ್ಯದ ಮೇಲೆ ಕೆಟ್ಟ ಪರಿಣಾಮಬೀರಿದೆ. ಸರಿಯಾದ ಸಮಯಕ್ಕೆ ಒಲಿಂಪಿಕ್ಸ್ ಆರಂಭವಾಗಲು ಪರಿಸ್ಥಿತಿ ಸೂಕ್ತವಾಗಿದೆ ಎಂದು ನನಗನಿಸುತ್ತಿಲ್ಲ’’ ಎಂದು 37ರ ಹರೆಯದ ಶರತ್ ಅಭಿಪ್ರಾಯಪಟ್ಟರು.

‘‘ಪ್ರತಿಯೊಬ್ಬರು ವ್ಯಕ್ತಿಯಿಂದ ವ್ಯಕ್ತಿಗೆ ಅಂತರ ಕಾಯ್ದುಕೊಳ್ಳಿ ಎಂದು ಹೇಳುತ್ತಾರೆ. ಆದರೆ ಒಲಿಂಪಿಕ್ಸ್‌ನಲ್ಲಿ ಇದು ಸಾಧ್ಯವಿಲ್ಲ. ಒಂದೇ ಕ್ರೀಡಾಗ್ರಾಮದಲ್ಲಿ ಸಾವಿರಾರು ಅಥ್ಲೀಟ್‌ಗಳು ನೆಲೆಸಿರುತ್ತಾರೆ’’ ಎಂದರು.

ಅಂತರ್‌ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ)ಬೇಸಿಗೆ ಒಲಿಂಪಿಕ್ಸ್ ಕುರಿತು ಇನ್ನಷ್ಟೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಗೇಮ್ಸ್ ಕುರಿತು ಹೇಳಿಕೆ ನೀಡುವುದು ಅವಸರವಾಗುತ್ತದೆ ಎಂದು ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಇತ್ತೀಚೆಗೆ ಹೇಳಿದ್ದರು. ಕೊರೋನ ವೈರಸ್ ಭೀತಿಯಿಂದಾಗಿ ಒಂದು ವೇಳೆ ಅರ್ಹತಾ ಟೂರ್ನಿಯು ನಡೆಯದೇ ಇದ್ದರೂ ರ್ಯಾಂಕಿಂಗ್‌ನ ಆಧಾರದಲ್ಲಿ ವಿಶ್ವದ ನಂ.38ನೇ ಆಟಗಾರ ಶರತ್ ಹಾಗೂ 31ನೇ ರ್ಯಾಂಕಿನ ಜಿ.ಸತ್ಯನ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ನಿಶ್ಚಿತವಾಗಿದೆ.

‘‘ಈ ಕ್ಷಣದಲ್ಲಿ ಯಾವುದೇ ಟೂರ್ನಿಗಳು ನಡೆಯುತ್ತಿಲ್ಲ. ಹೀಗಾಗಿ ರ್ಯಾಂಕಿಂಗ್‌ಗಳಲ್ಲಿ ಬದಲಾವಣೆಯಾಗದು. ಇದೇ ರೀತಿಯ ಪರಿಸ್ಥಿತಿ ಮುಂದುವರಿದರೆ ನಮ್ಮ ರ್ಯಾಂಕಿಂಗ್‌ನ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ನಿಶ್ಚಿತ’’ ಎಂದು ಶರತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News