ಕೊರೋನದಿಂದ ಭಾರತ ಪಾರಾಗಬಲ್ಲದೇ ?

Update: 2020-03-26 17:46 GMT

ಎರಡು ದಿನಗಳ ಹಿಂದೆ ವಿಧಾನಪರಿಷತ್‌ನಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಕರ್ನಾಟಕದಲ್ಲಿ 1 ಲಕ್ಷ ಜನರಿಗೆ ಸೋಂಕು ತಗಲುವ ಸಾಧ್ಯತೆಯಿದೆ, ಸುಮಾರು 20,000 ಜನರು ಆಸ್ಪತ್ರೆಗೆ ದಾಖಲಾಗಬಹುದು, ಹಾಗಾಗಿ ಸರಕಾರವು ಒಂದು ಸಾವಿರ ವೆಂಟಿಲೇಟರ್ ಖರೀದಿಗೆ ಆದೇಶವನ್ನು ನೀಡಿದೆ ಎಂಬ ಆಘಾತಕಾರಿ ಅಂಶವನ್ನು ಹೊರಹಾಕಿದ್ದಾರೆ.

ಇನ್ನು ದೇಶದ ಪರಿಸ್ಥಿತಿಯನ್ನು ಅವಲೋಕಿಸುವುದಾದರೆ, ಈಗಾಗಲೇ ಕೊರೋನದ 650ಕ್ಕೂ ಹೆಚ್ಚು ಪ್ರಕರಣಗಳನ್ನು, 13 ಸಾವುಗಳನ್ನು ಕಂಡಂತಹ ಭಾರತ ಪ್ರಪಂಚದ ಆರೋಗ್ಯ ಸೂಚ್ಯಂಕದಲ್ಲಿ 154ನೇ ಸ್ಥಾನದಲ್ಲಿದೆ. ಭಾರತವು ಆಯವ್ಯಯದಲ್ಲಿ ತನ್ನ ಜಿ.ಡಿ.ಪಿ.ಯ 1.5ರಷ್ಟು ಅಂದರೆ ಕೇವಲ 61,398 ಕೋಟಿ ರೂಪಾಯಿಗಳನ್ನು ಮಾತ್ರ ಆರೋಗ್ಯಕ್ಕೆ ಖರ್ಚು ಮಾಡುತ್ತಿದೆ. ಪ್ರತಿ ದಿನ ಪ್ರತಿ ನಾಗರಿಕನ ಮೇಲೆ ಖರ್ಚಾಗುತ್ತಿರುವುದು 1 ರೂ.30 ಪೈಸೆ ಮಾತ್ರ, ಆದರೆ ಆರೋಗ್ಯಕ್ಕೆ ಸಂಬಂಧಿಸಿದ ಖಾಸಗಿ ವಲಯದ ಒಂದು ವರ್ಷದ ವ್ಯವಹಾರವೇ 6,50,000 ಕೋಟಿ. ಸರಕಾರಗಳು ಆರೋಗ್ಯಕ್ಕೆ ಕಡಿಮೆ ಮಹತ್ವವನ್ನು ನೀಡಿರುವುದು ಗಮನಿಸಬಹುದಾಗಿದೆ. ಇನ್ನು ಮುಂದಾದರೂ ಕೇಂದ್ರ ಸರಕಾರ ಆರೋಗ್ಯಕ್ಕೆ ಹೆಚ್ಚಿನ ಗಮನ ಹರಿಸಬೇಕಾದ ಅವಶ್ಯಕತೆಯಿದೆ.

ಪ್ರಪಂಚದಲ್ಲಿ ಆರೋಗ್ಯದ ಸೂಚ್ಯಂಕದಲ್ಲಿ ಇಟಲಿಯು 2ನೇ ಸ್ಥಾನದಲ್ಲಿದೆ ಆರೋಗ್ಯಕ್ಕೆ ತುಂಬಾ ಮಹತ್ವವನ್ನು ನೀಡಿದ ಆ ದೇಶದಲ್ಲಿಯೇ ಕೊರೋನದಿಂದ ಇಷ್ಟೊಂದು ಅನಾಹುತವಾಗಿ ಚಿಕಿತ್ಸೆ ನೀಡುವಲ್ಲಿ ನಿರತರಾಗಿರುವ 23 ವೈದ್ಯರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇಂತಹ ಸನ್ನಿವೇಶದಲ್ಲಿ ಭಾರತದ ಪರಿಸ್ಥಿತಿ ಊಹಿಸಲೂ ಅಸಾಧ್ಯ. ಇದಕ್ಕೆ ಮೂಲಭೂತ ಕಾರಣಗಳೆಂದರೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಭಾರತದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ವೈದ್ಯರ ಸಂಖ್ಯೆ ಕಡಿಮೆಯಿರುವುದು, ದೇಶದ ಸರಾಸರಿ 17,000 ಜನರಿಗೆ ಒಬ್ಬ ವೈದ್ಯ, ಬಿಹಾರ-43,788 ಜನರಿಗೆ ಒಬ್ಬ ವೈದ್ಯ(ಅತೀ ಹೆಚ್ಚು ಜನರಿಗೆ) ಮತ್ತು ದಿಲ್ಲಿ-2,028 ಜನರಿಗೆ ಒಬ್ಬ ವೈದ್ಯ(ಅತೀ ಕಡಿಮೆ ಜನರಿಗೆ). ಒಂದು ಲಕ್ಷ ಜನರಿಗೆ ಸರಾಸರಿ 8 ಕೊರೋನ ಪತ್ತೆ ಹಚ್ಚುವ ಕೇಂದ್ರಗಳು, ಅದೇ ಒಂದು ಲಕ್ಷ ಜನರಿಗೆ ಸರಾಸರಿ 110 ಆಸ್ಪತ್ರೆಯ ಮಂಚಗಳು, ವೆಂಟಿಲೇಟರ್‌ಗಳು ಮತ್ತು ಐಸಿಯುಗಳು ಕಡಿಮೆ ಇರುವ ಆಸ್ಪತ್ರೆಗಳು. ಇವುಗಳನ್ನು ಗಮನಿಸಿದರೆ ಭಾರತದ ಆರೋಗ್ಯ ಕಾಪಾಡಲು ಬೇಕಾದ ವ್ಯವಸ್ಥೆಗಳು ಹೊಂದುವಲ್ಲಿ ಹಿಂದೆ ಬಿದ್ದಿದೆ ಎನ್ನುವುದು ಕಂಡುಬರುತ್ತದೆ. ಈ ದೇಶಕ್ಕೆ ಹೆಚ್ಚಿನ ವೈದ್ಯರುಗಳು ಮತ್ತು ಸುಸಜ್ಜಿತ ಸರಕಾರಿ ಆಸ್ಪತ್ರೆಗಳು ಬೇಕೆಂಬುದನ್ನು ಮನಗಾಣಬೇಕಿದೆ.

ರಾಮ್ ಮನೋಹರ ಲೋಹಿಯಾ ಆಸ್ಪತ್ರೆಯ ನರ್ಸ್ ಒಬ್ಬರು ಇತ್ತ್ತೀಚೆಗೆ ಮಾಧ್ಯಮದ ಮುಖಾಂತರ ಮುಖಗವಸಗಳನ್ನು ಮತ್ತು ಕೈಚೀಲಗಳನ್ನು ಒದಗಿಸಬೇಕಾಗಿ ಕೇಳಿಕೊಂಡಿದ್ದಾರೆ. ಹಾಗೆಯೇ ಭಾರತದ ಪ್ರತಿಷ್ಠಿತ ಆರೋಗ್ಯ ಸಂಸ್ಥೆಯಾದ ಏಮ್ಸ್‌ನ ವೈದ್ಯರು ಸಹ ಅವಶ್ಯಕ ವೈಯಕ್ತಿಕ ಸಂರಕ್ಷಣಾ ಸಾಧನಗಳ ಕೊರತೆ ಇದೆ ಇದನ್ನು ಕೇಂದ್ರ ಸರಕಾರ ಶೀಘ್ರವಾಗಿ ಒದಗಿಸಬೇಕು ಜೊತೆಗೆ ಎಲ್ಲಾ ರಾಜ್ಯ ಸರಕಾರಗಳು ತಮ್ಮ ರಾಜ್ಯಗಳಲ್ಲಿ ಇವುಗಳನ್ನು ಒದಗಿಸಬೇಕೆಂದು ಆದೇಶಿಸಲು ಆಗ್ರಹಿಸಿದ್ದಾರೆ. ಸೂಕ್ತ ಸಾಮಗ್ರಿಗಳಿಲ್ಲದೆ ವೈದ್ಯರು ಪರಿತಪಿಸಲು ಕಾರಣ ಭಾರತ ಮಾರ್ಚ್ 19ರವರೆಗೂ ತಯಾರಿಸಿದ ವೈದ್ಯಕೀಯ ಉಪಕರಣಗಳನ್ನು ಬೇರೆ ದೇಶಕ್ಕೆ ರಫ್ತು ಮಾಡಿರುವುದು. ಕೇಂದ್ರ ಸರಕಾರ ಈಗಾಗಲೇ 15,000 ಕೋಟಿ ರೂಪಾಯಿಯನ್ನು ಆರೋಗ್ಯ ಮೂಲ ಸೌಕರ್ಯಕ್ಕೆ ಮೀಸಲಿಟ್ಟಿದ್ದು, ಕರ್ನಾಟಕ ರಾಜ್ಯ ಸರಕಾರವೂ ಸುಮಾರು 1,500 ಕೋಟಿ ರೂ.ಯನ್ನು ಬೀದಿ ವ್ಯಾಪಾರಿಗಳಿಗೆ, ಕಟ್ಟಡ ಕಾರ್ಮಿಕರಿಗೆ ಮತ್ತು ವಿವಿಧ 62 ಲಕ್ಷ ಫಲಾನುಭವಿಗಳಿಗೆ ಮೀಸಲಿಟ್ಟಿದ್ದು ಮಹತ್ವದ ನಿರ್ಧಾರವಾಗಿದೆ. ಇದರ ಮಧ್ಯೆಯೇ ನಾವು 21 ದಿನಗಳ ದಿಗ್ಬಂಧನಕ್ಕೊಳಗಾಗಿದ್ದೇವೆ. ಇದನ್ನು ಕಟ್ಟುನಿಟ್ಟಾಗಿ ಸೂಕ್ತ ರೀತಿಯಲ್ಲಿ ನಿರ್ವಹಿಸದಿದ್ದರೆ ರೋಗವನ್ನು ತಡೆಗಟ್ಟಲಾಗದೇ ಸಾವಿಗೆ ಬರಮಾಡಿಕೊಂಡಂತೆ ಎಂದು ಎಲ್ಲಾ ವೈದ್ಯರು ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಿದ್ದಾರೆ.

ಸಭ್ಯ ಮತ್ತು ಆದರ್ಶ ನಾಗರಿಕರಾದ ನಾವೆಲ್ಲರೂ ಸರಕಾರದ ನಿಯಮಗಳನ್ನು ಪಾಲಿಸಿ ನಮ್ಮನ್ನು ಕಾಪಾಡಿಕೊಂಡು ಭವಿಷ್ಯದ ಮನಕುಲವನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ವಿದ್ಯಾವಂತರು, ನೌಕರಸ್ಥರು ಪರಿಸ್ಥಿತಿಯ ಮೂಕಪ್ರೇಕ್ಷಕರಾಗದೆ ಸಾಧ್ಯವಾದಷ್ಟು ಸರಕಾರದ ನಿಯಮಗಳಿಗನುಗುಣವಾಗಿ ಎಲ್ಲರಿಗೆ ಅರಿವು ಮೂಡಿಸುತ್ತಾ, ಕೈಲಾದಷ್ಟು ಸಹಾಯಹಸ್ತ ಚಾಚುತ್ತಾ ತಾವು ಪಡೆದ ಶಿಕ್ಷಣಕ್ಕೆ ಮೆರಗು ತರುವ ಹಾಗೆ ನಡೆದುಕೊಳ್ಳಬೇಕಿದೆ. ಹಾಗಾಗಿ ನಮ್ಮ ಅರಿವೇ ನಮಗೆ ಗುರುವಾಗಲಿದೆ. ಹಾಗಾದಾಗ ಮಾತ್ರ ಕೊರೋನದಿಂದ ಭಾರತ ಪಾರಾಗಬಲ್ಲದು. ಮನಕುಲದ ಬೆಳವಣಿಗೆಗೆ ಶಿಕ್ಷಕರ ಪಾತ್ರ ಮಹತ್ತರವಾಗಿರುವುದರಿಂದ ಪ್ರತಿ ಹಂತದ ಬೋಧನೆಯಲ್ಲೂ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿ ವಿದ್ಯಾರ್ಥಿಗಳನ್ನು ಆರೋಗ್ಯದ ರೂವಾರಿಗಳನ್ನಾಗಿ ರೂಪಿಸುವುದು ಅವರ ಆದ್ಯ ಕರ್ತವ್ಯ.

Writer - ಡಾ.ಕೆ.ಜಗನ್ನಾಥ ಡಾಂಗೆ

contributor

Editor - ಡಾ.ಕೆ.ಜಗನ್ನಾಥ ಡಾಂಗೆ

contributor

Similar News