ವಲಸೆ ಕಾರ್ಮಿಕರು ನಮ್ಮ 'ಅತಿಥಿಗಳು': ಕೇರಳ ಸಿಎಂ ಪಿಣರಾಯಿ ವಿಜಯನ್

Update: 2020-03-28 13:05 GMT

ತಿರುವನಂತಪುರಂ: ವಲಸಿಗ ಕಾರ್ಮಿಕರಿಗೆ ಅಗತ್ಯ ಸವಲತ್ತುಗಳನ್ನು ನೀಡುವಲ್ಲಿ ಕೇರಳ ರಾಜ್ಯ ಇತರ ರಾಜ್ಯಗಳಿಗಿಂತ ಬಹಳಷ್ಟು ಮುಂದಿದೆ. ಈ ಕಾರ್ಮಿಕರಿಗೆ ಶಿಕ್ಷಣವೊದಗಿಸುವುದರಿಂದ ಹಿಡಿದು ಅವರಿಗೆ ಮಲಯಾಳಂ ಕೋರ್ಸನ್ನು ನಡೆಸುವ ತನಕ ಮುಂದುವರಿದಿರುವ ಕೇರಳ ಇದೀಗ ಲಾಕ್‍ ಡೌನ್‍ ನಿಂದಾಗಿ ತೊಂದರೆಗೀಡಾಗಿರುವ ಈ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಜಾರಿಗೊಳಿಸಿರುವ ಕಾರ್ಯಕ್ರಮಗಳು ಸಾಕಷ್ಟು ಪ್ರಶಂಸೆ ಪಡೆದಿವೆ.

ಲಾಕ್‍ ಡೌನ್‍ ನಿಂದಾಗಿ ಸಂದಿಗ್ಧತೆಯಲ್ಲಿರುವ ವಲಸಿಗ ಕಾರ್ಮಿಕರು ಹಾಗೂ  ರೋಗಿಗಳಿಗೆ ಚಿಕಿತ್ಸೆ ನೀಡಲು ಅವಿರತ ಶ್ರಮವಹಿಸುತ್ತಿರುವ ವೈದ್ಯಕೀಯ ಸಮುದಾಯಕ್ಕೆ ಹಲವು ಪೂರಕ ಕ್ರಮಗಳನ್ನು ಘೋಷಿಸುವ ವೇಳೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಮ್ಮ ರಾಜ್ಯದ ವಲಸಿಗ ಕಾರ್ಮಿಕರನ್ನು ಅತಿಥಿ ಕಾರ್ಮಿಕರು ಎಂದು ಬಣ್ಣಿಸಿ ಗೌರವಿಸಿದ್ದಾರೆ.

ಹೆಚ್ಚಾಗಿ ಬಂಗಾಳ ಮತ್ತು ಒಡಿಶಾದ ಈ ಕಾರ್ಮಿಕರನ್ನು ಅವರಿಗಾಗಿ ನಿರ್ಮಿಸಲಾದ ವಿಶೇಷ ಶಿಬಿರಗಳಿಗೆ ಸ್ಥಳಾಂತರಿಸಿ ಅಲ್ಲಿ ಅವರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಹಾಗೂ ಉಚಿತ ಆಹಾರ ನೀಡಲಾಗುವುದು ಎಂದು  ಮುಖ್ಯಮಂತ್ರಿ ಹೇಳಿದ್ದಾರೆ.

ರಾಜ್ಯದ ವಲಸಿಗ ಕಾರ್ಮಿಕರನ್ನು ಅತಿಥಿ ಕಾರ್ಮಿಕರು ಎಂದು ಮೊದಲ ಬಾರಿಗೆ ರಾಜ್ಯದ ವಿತ್ತ ಸಚಿವ ಥಾಮಸ್ ಐಸಾಕ್ ತಮ್ಮ ಫೆಬ್ರವರಿ 18ರ ಬಜೆಟ್ ಭಾಷಣದಲ್ಲಿ ಬಣ್ಣಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News