ಪ್ರಾಣವನ್ನೇ ಒತ್ತೆಯಿಟ್ಟು ಮುಂಬೈಗರನ್ನು ಪ್ಲೇಗ್‌ನಿಂದ ರಕ್ಷಿಸಲು ಯತ್ನಿಸಿದ ಮಹಾವೈದ್ಯ

Update: 2020-03-28 17:38 GMT

ಡಾ. ಅರಾಸಿಯೊ ಗೇಬ್ರಿಯೆಲ್ ವೇಗಸ್ ಅವರು ಸಾರ್ವಜನಿಕ ಸಾರಿಗೆ ಶುಲ್ಕ, ವಿದ್ಯುತ್ ಶುಲ್ಕಗಳಲ್ಲಿ ಇಳಿಕೆ, ಬಡ ರೋಗಿಗಳಿಗೆ ಉಚಿತವಾಗಿ ಆಯಾಗಳ ಸೇವೆಯ ಸೌಲಭ್ಯವನ್ನು ಒದಗಿಸುವುದಕ್ಕೂ ಶ್ರಮಿಸಿದ್ದರು. ಅಂತಿಮವಾಗಿ ಉಚಿತ ಹಾಗೂ ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಒದಗಿಸಬೇಕೆಂದು ಅವರು ಪ್ರತಿಪಾದಿಸಿದ್ದರು. ಹೀಗೆ ಬದುಕಿನುದ್ದಕ್ಕೂ ಬಡವರು, ರೋಗಿಗಳ ಬಗ್ಗೆ ಅಪಾರಕಾಳಜಿಯನ್ನು ಹೊಂದಿದ್ದ ವೇಗಸ್ ಅವರು 1933ರ ಫೆಬ್ರವರಿಯಲ್ಲಿ ಕೊನೆಯುಸಿರೆಳೆದರು. ಮಹಾನ್ ಸಾಮಾಜಿಕ ಧುರೀಣನನ್ನು ಮುಂಬೈ ಮಹಾನಗರ ಈಗಲೂ ಸ್ಮರಿಸಿಕೊಳ್ಳುತ್ತಿದೆ. ಈಗ ಇನೊಕ್ಸ್ ಚಿತ್ರಮಂದಿರವಿರುವ ಎದುರುಗಡೆಯಿದ್ದಂತಹ ಕೊಸಾಜಿ ಜಹಾಂಗೀರ್ ಹಾಲ್‌ನಲ್ಲಿ ಡಾ.ವೇಗಸ್ ಅವರ ಪ್ರತಿಮೆಯು ಜನಸಾಮಾನ್ಯರಿಗಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟ ಈ ಧೀಮಂತ ವ್ಯಕ್ತಿಯನ್ನು ನೆನಪಿಸುತ್ತದೆ.


ಮಾರಣಾಂತಿಕ ಕೊರೋನ ವೈರಸ್ ಒಂದು ಜಾಗತಿಕ ಪಿಡುಗು ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸುವುದರೊಂದಿಗೆ, ಭಾರತದ ಹಲವಾರು ಇತಿಹಾಸ ತಜ್ಞರ ನೆನಪು 1918ನೇ ಇಸವಿಯ ದಿನಗಳಿಗೆ ಜಾರಿದ್ದವು. ಆ ಸಮಯದಲ್ಲಿ ಇನ್‌ಫ್ಲುಯೆಂಜಾ ವೈರಸ್‌ನ ಹಾವಳಿಯು ಭಾರತದ ವಿಶಾಲ ಭೂಪ್ರದೇಶಗಳಿಗೆ ವ್ಯಾಪಿಸಿ, 1-2 ಕೋಟಿ ಮಂದಿಯನ್ನು ಬಲಿ ಪಡೆದುಕೊಂಡಿದ್ದನ್ನು ಮತ್ತು ಈ ಭೀಕರ ಸಾಂಕ್ರಾಮಿಕ ರೋಗದಿಂದ ದೇಶವು ಕಲಿಯಬೇಕಾದ ಪಾಠಗಳ ಬಗ್ಗೆ ಅವರು ಮಾತನಾಡಿದ್ದಾರೆ.

 ಆದರೆ ಕೆಲವೇ ಕೆಲವು ಮಂದಿ, 19ನೇ ಶತಮಾನದ ಅಂತ್ಯದಲ್ಲಿ ಬಾಂಬೆ (ಈಗಿನ ಮುಂಬೈ) ನಗರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಬ್ಯುಬೊನಿಕ್ ಪ್ಲೇಗ್ ಬಗ್ಗೆ ಕೆಲವೇ ಕೆಲವು ಮಂದಿಯಷ್ಟೇ ಮಾತನಾಡಿದ್ದಾರೆ. ಈ ಮಹಾಮಾರಿ ಪ್ಲೇಗ್, ಮುಂಬೈ ನಗರದ ಸಾವಿರಾರು ಮಂದಿಯನ್ನು ಕೊಂದಿತ್ತು ಹಾಗೂ ಈ ಭಯಾನಕ ಸಾಂಕ್ರಾಮಿಕ ರೋಗದ ಭೀತಿಯಿಂದ ಸಾವಿರಾರು ಮಂದಿ ಪಲಾಯನಗೈದಿದ್ದರಿಂದ ನಗರದ ಜನಸಂಖ್ಯೆಯಲ್ಲಿ ಭಾರೀ ಕುಸಿತವುಂಟಾಗಿತ್ತು. ಇದಲ್ಲದೆ, ಈ ಮಾರಣಾಂತಿಕ ರೋಗಗಳ ವಿರುದ್ಧ ಸಮರದಲ್ಲಿ ಮುಂಚೂಣಿಯಲ್ಲಿದ್ದ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ತಮ್ಮ ಜೀವವನ್ನೇ ಅಪಾಯಕ್ಕೊಡ್ಡಿ ಇತರರನ್ನು ರಕ್ಷಿಸುವ ಕಾರ್ಯದಲ್ಲಿ ಹಗಲುರಾತ್ರಿ ಶ್ರಮಿಸಿದ್ದರು.

ಮುಂಬೈನಲ್ಲಿ ಬ್ಯುಬೊನಿಕ್ ಪ್ಲೇಗ್ ಹರಡಿದ ಸಂದರ್ಭದಲ್ಲಿ ತನ್ನ ಪ್ರಾಣವನ್ನೇ ಒತ್ತೆಯಿಟ್ಟು ದುಡಿದಂತಹ ವೈದ್ಯ ಡಾ. ಅರಾಸಿಯೊ ಗೇಬ್ರಿಯೆಲ್ ವೇಗಸ್. ನಗರದಲ್ಲಿ ಈ ರೋಗವು ಮಾರಣಹೋಮವನ್ನು ನಡೆಸಲಿದೆಯೆಂಬುದನ್ನು ಪತ್ತೆಹಚ್ಚಿದ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ. ತನ್ನ ಆರೋಗ್ಯಕ್ಕೆ ಎದುರಾಗಬಹುದಾದ ಗಂಭೀರ ಅಪಾಯಗಳನ್ನು ಲೆಕ್ಕಿಸದೆ, ನಗರದ 18 ಸಾವಿರಕ್ಕೂ ಅಧಿಕ ನಿವಾಸಿಗಳಿಗೆ ಲಸಿಕೆಗಳನ್ನು ನೀಡಿ ಅವರ ಪ್ರಾಣಗಳನ್ನು ರಕ್ಷಿಸಿದ್ದಾರೆ.

1856ರ ಎಪ್ರಿಲ್ 1ರಂದು ಗೋವಾದ ಅರ್ಪೊರಾ ಗ್ರಾಮದಲ್ಲಿ ಜನಿಸಿದ ಡಾ. ವೇಗಸ್ ಅವರು ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ಬಳಿಕ ಮುಂಬೈಗೆ ತೆರಳಿದರು. 12ನೇ ತರಗತಿಯಲ್ಲಿ ಉತ್ಕೃಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ ಬಳಿಕ ಅವರು ಗ್ರಾಂಟ್ ಮೆಡಿಕಲ್ ಕಾಲೇಜ್‌ನಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಸೇರ್ಪಡೆಗೊಂಡರು.

ವೈದ್ಯಕೀಯ ಪದವಿ ಪಡೆದ ಕೆಲವೇ ವರ್ಷಗಳಲ್ಲಿ ಡಾ. ವೇಗಸ್ ಅವರು ಬಾಂಬೆಯ ಮಾಂಡ್ವಿನಲ್ಲಿ ಪ್ರಾಕ್ಟೀಸ್ ಆರಂಭಿಸಿದರು. ಕೆಲವೇ ಸಮಯದೊಳಗೆ ಭಾರೀ ಜನಪ್ರಿಯತೆ ಗಳಿಸಿದರು. 1888ರಲ್ಲಿ ಬಾಂಬೆ ಮಹಾನಗರ ಪಾಲಿಕೆಯ ಸದಸ್ಯರಾಗಿ ಐದು ವರ್ಷಗಳ ಅವಧಿಗೆ ಆಯ್ಕೆಯಾದರು. ಮುಂಬೈ ಮಹಾನಗರ ಪಾಲಿಕೆ ಆಯ್ಕೆಯಾದ ಮೊದಲ ಗೋವಾ ಮೂಲದ ವ್ಯಕ್ತಿ ಅವರಾಗಿದ್ದರು ಎಂದು ಜೆ. ಕ್ಲಿಮೆಂಟ್ ವಾಝ್ ಅವರು ತನ್ನ ಕೃತಿ ‘ಪ್ರೊಫೈಲ್ ಆಫ್ ಎಮಿನೆಂಟ್ ಗೋವನ್ಸ್, ಪಾಸ್ಟ್ ಆ್ಯಂಡ್ ಪ್ರೆಸೆಂಟ್’ ಕೃತಿಯಲ್ಲಿ ಬರೆದಿದ್ದಾರೆ.

1896ರ ಸೆಪ್ಟೆಂಬರ್‌ನಲ್ಲಿ ಡಾ. ವೇಗಸ್ ಅವರು ಮುಂಬೈ ನಗರದಲ್ಲಿ ಬ್ಯುಬೊನಿಕ್ ಪ್ಲೇಗ್‌ನ ಮೊದಲ ಪ್ರಕರಣವನ್ನು ಪತ್ತೆಹಚ್ಚಿದ್ದರು.
 ಡಾ. ವೇಗಸ್ ರ ಡಿಸ್ಪೆನ್ಸರಿಯು ಮಾಂಡ್ವಿಯ ಪೋರ್ಟ್ ಟ್ರಸ್ಟ್ ಎಸ್ಟೇಟ್‌ನಲ್ಲಿತ್ತು. ಅದೊಂದು ಕಿರಿದಾದ ಓಣಿಗಳು ಹಾಗೂ ಜನನಿಬಿಡ ರಸ್ತೆಗಳಿಂದ ಕೂಡಿದ ಬಡವರೇ ಅಧಿಕಸಂಖ್ಯೆಯಲ್ಲಿರುವ ವಸತಿ ಪ್ರದೇಶವಾಗಿತ್ತು. ಕಟ್ಟಡಗಳು ಒಂದರ ಪಕ್ಕ ಒಂದರಂತೆ ಅಂಟಿಕೊಂಡಂತಿದ್ದವು ಹಾಗೂ ಗಟಾರಗಳಲ್ಲಿ ಕೊಳಚೆನೀರು ಸಂಗ್ರಹವಾಗುತ್ತಿತ್ತು. ಚರಂಡಿಯಲ್ಲಿ ಹರಿಯುವ ಮಲ,ಕಲ್ಮಶಗಳು ಮಡುಗಟ್ಟುತ್ತಿದ್ದುದರಿಂದ, ಅದನ್ನು ಬಕೆಟ್‌ಗಳಲ್ಲಿ ತೆಗೆದು, ಸಮೀಪದ ಗಲ್ಲಿಗಳ ಖಾಲಿ ಜಾಗಗಳಲ್ಲಿ ಸುರಿಯಲಾಗುತ್ತಿತ್ತು. ಇದರಿಂದ ಆತಂಕಗೊಂಡ ಈ ವೈದ್ಯರು ಈ ಬಗ್ಗೆ ಮಹಾನಗರಪಾಲಿಕೆಯ ಸಭೆಗಳಲ್ಲಿ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದರು. ಆನಂತರ 1896ರ ಸೆಪ್ಟಂಬರ್ 18ರ ಮಧ್ಯಾಹ್ನದ ವೇಳೆಗೆ ಅವರಿಗೆ ಲುಕ್ಮಿಬಾಯಿ ಎಂಬ ವೃದ್ಧೆ ರೋಗಿಯನ್ನು ನೋಡಲು ಬರುವಂತೆ ಕರೆ ಬಂದಿತು. ವೃದ್ಧೆಯ ತಪಾಸಣೆ ನಡೆಸಿದ ಡಾ.ವೇಗಸ್‌ಗೆ ಆಕೆ ಕೋಮಾ ವಸ್ಥೆಗೆ ಜಾರುವ ಮುನ್ನ ಕಳೆದ ಮೂರು ದಿನಗಳಿಂದ ನಿದ್ರಿಸಿಲ್ಲವೆಂಬ ವಿಷಯ ತಿಳಿದುಬಂದಿತು. ಆಕೆಯ ಕಣ್ಣುಗಳು ಕಡುಗೆಂಪಾಗಿದ್ದವು, ಆಕೆಯ ತೊಡೆಯೆಲುಬಿನ ಜಾಗದಲ್ಲಿ ಕಿತ್ತಳೆಗಾತ್ರದಲ್ಲಿ ಗ್ರಂಥಿಯೊಂದು ಊದಿಕೊಂಡಿತ್ತು. ಜ್ವರದಿಂದ ಕುದಿಯುತ್ತಿದ್ದ ಆಕೆಯ ತಾಪಮಾನ 104.2ರಷ್ಟಿತ್ತು ಮತ್ತು ನಾಡಿಬಡಿತ ನಿಮಿಷಕ್ಕೆ 140ರಟ್ಟಿತ್ತು. ಡಾ.ವೇಗಸ್ ಆಕೆಗೆ ಡಯಾಫೊರೆಟಿಕ್ಸ್, ಸೋಡಾ ಸಾಲಿಸಿಲೇಟ್ ಮತ್ತು ಕ್ವಿನೈನ್ ಔಷಧಿಗಳನ್ನು ಶಿಫಾರಸು ಮಾಡಿದರು. ಆದರೆ ಸಂಜೆಯ ವೇಳೆಗೆ ಆಕೆಯ ಪರಿಸ್ಥಿತಿ ಚಿಂತಾಜನಕವಾಗಿತ್ತು. ಮಾರನೆಯ ದಿನ ವೃದ್ಧೆಯನ್ನು ನೋಡಲು ಹೋದಾಗ ಅಕೆ ಮೃತಪಟ್ಟಿದ್ದಳು. ಆಕೆಯ ಕ್ಷಿಪ್ರ ಸಾವಿನಿಂದ ಅಚ್ಚರಿಗೊಂಡ ಡಾ.ವೇಗಸ್, ಇದೊಂದು ಬ್ಯುಬೊನಿಕ್ ಪ್ಲೇಗ್ ರೋಗದ ಪ್ರಕರಣವಾಗಿರಬಹುದೆಂದು ಸಂದೇಹಪಟ್ಟರು ಎಂದು ಖ್ಯಾತ ಇತಿಹಾಸಕಾರ ಗ್ಯಾನ್ ಪ್ರಕಾಶ್ ಬರೆಯುತ್ತಾರೆ.

ಆನಂತರ ಇನ್ನೋರ್ವ ರೋಗಿ ಕೂಡಾ ಇದೇ ರೀತಿಯ ರೋಗಚಿಹ್ನೆಗಳನ್ನು ಪ್ರದರ್ಶಿಸಿದರು ಹಾಗೂ ಇದರಿಂದಾಗಿ 50-60ರಷ್ಟು ಸಾವುಗಳು ಸಂಭವಿಸಿದವು. 1896ರ ವೇಳೆಗೆ ಪ್ರತಿವಾರಕ್ಕೆ ಕನಿಷ್ಠ 1,900 ಮಂದಿ ಸಾವನ್ನಪ್ಪಿದ್ದರು. ಇದರಿಂದ ಭೀತಿಗೊಂಡ ಹಲವಾರು ನಾಗರಿಕರು ಬಾಂಬೆ ನಗರದಿಂದ ಪಲಾಯನಗೈದರು. ಇದರಿಂದಾಗಿ 1891ರ ಜನಗಣತಿಯ ಪ್ರಕಾರ 8.20 ಲಕ್ಷದಷ್ಟಿದ್ದ ನಗರದ ಜನಸಂಖ್ಯೆ 1901ರ ಜನಗಣತಿಯ ಹೊತ್ತಿಗೆ 7.80 ಲಕ್ಷಕ್ಕಿಳಿಯಿತು.

ಅತ್ಯಂತ ಸಾಂಕ್ರಾಮಿಕವಾದ ಈ ರೋಗವು ತ್ವರಿತವಾಗಿ ಹರಡುತ್ತಿರುವುದನ್ನು ಕಂಡು ಆಡಳಿತವು ಧಂಗಾಯಿತು. ಈ ಬಗ್ಗೆ ವ್ಯಾಪಕವಾಗಿ ಸಂಶೋಧನೆ ನಡೆಸಿದ ಡಾ. ವೇಗಸ್ ಅವರು, ಈ ರೋಗವನ್ನು ಬ್ಯುಬೊನಿಕ್ ಪ್ಲೇಗ್ ಎಂಬುದಾಗಿ ಗುರುತಿಸಿದರು ಮತ್ತು ಈ ಪಿಡುಗಿನ ವಿರುದ್ಧ ದಣಿವರಿಯದ ಹೋರಾಟ ನಡೆಸಿದರು. ಬ್ಯುಬೊನಿಕ್ ಪ್ಲೇಗ್‌ನ ವೈರಾಣುಗಳಿಗೆ ಇಲಿಗಳು ವಾಹಕವೆಂಬುದನ್ನು ಪತ್ತೆಹಚ್ಚಿದ ಅವರು, ರೋಗ ಹರಡುವುದನ್ನು ತಡೆಯುವಲ್ಲಿ ಮಹತ್ವದ ಪಾತ್ರವಹಿಸಿದ್ದರು ಎಂದು ಸೈಂಟ್ ಕ್ಸೇವಿಯರ್ ಕಾಲೇಜ್‌ನ ಇತಿಹಾಸ ವಿಭಾಗದ ಮಾಜಿ ಮುಖ್ಯಸ್ಥ ಡಾ. ಫ್ಲೇಯೂರ್ ಡಿಸೋಝಾ ಹೇಳುತ್ತಾರೆ.

ಡಾ.ವೇಗಸ್ ಅವರ ಸಂಶೋಧನೆಯನ್ನು ನಗರಾಡಳಿತವು ಸ್ವತಂತ್ರ ತಜ್ಞರ ನಾಲ್ಕು ತಂಡಗಳನ್ನು ಪಟ್ಟಿ ಮಾಡಿತು. ‘‘ಸೋಂಕು ತಗಲಿದ ಇಲಿಗಳ ಸೇನೆಯು ಸ್ಥಳದಿಂದ ಸ್ಥಳಕ್ಕೆ ಚಲಿಸುತ್ತಾ ಈ ರೋಗವನ್ನು ಹರಡುತ್ತಿವೆ’’ ಎಂಬುದಾಗಿ ಅಧಿಕೃತ ತನಿಖಾ ವರದಿ ತಿಳಿಸಿರುವುದಾಗಿ ಪ್ರಕಾಶ್ ಹೇಳಿದ್ದಾರೆ.

ಡಾ. ವೇಗಸ್ ಅವರ ರೋಗಪರಿಶೋಧನೆ ದೃಢಪಟ್ಟ ಬಳಿಕ ಬಾಂಬೆಯ ಗವರ್ನರ್ ಅವರು ರಶ್ಯದ ವೈರಾಣುತಜ್ಞ ಡಬ್ಲು.ಎಫ್. ಹಾಫ್ಕಿನ್‌ರನ್ನು ಬ್ಯುಬೊನಿಕ್ ಪ್ಲೇಗ್‌ನ ಲಸಿಕೆಯನ್ನು ಅಭಿವೃದ್ಧಿಪಡಿಸುವಂತೆ ಆಹ್ವಾನಿಸಿದರು. ಅವರ ಆಹ್ವಾನವನ್ನು ಸ್ವೀಕರಿಸಿದ ಡಾ. ಹಾಫ್ಕಿನ್ ಅವರು ಮುಂಬೈಯಲ್ಲಿ ಸ್ಥಾಪಿಸಲಾದ ತಾತ್ಕಾಲಿಕ ಪ್ರಯೋಗ ಶಾಲೆಯೊಂದರಲ್ಲಿ ಮೂರು ತಿಂಗಳುಗಳ ಕಾಲ ಅವಿರತ ಶ್ರಮದಿಂದ ಲಸಿಕೆಯನ್ನು ಅಭಿವೃದ್ಧಿಪಡಿಸಿದರು. ಅವರದನ್ನು ರೋಗಿಗಳ ಮೇಲೆ ಬಳಸುವ ಮುನ್ನ ಮೊದಲು ತನ್ನ ಮೇಲೆಯೇ ಪರೀಕ್ಷಿಸಿದರು.

1897ರ ಜನವರಿಯಲ್ಲಿ ಬೈಕುಲಾ ಕಾರಾಗೃಹದಲ್ಲಿ ಸ್ವಯಂಸೇವಕರ ಮೇಲೆ ಪ್ರಯೋಗಿಸಿದರು. ಆ ನಂತರ ಈ ಲಸಿಕೆಯನ್ನು ಜನಸಾಮಾನ್ಯರ ಮೇಲೆ ಪ್ರಯೋಗಿಸಲು ಆರಂಭಿಸಿದರು.

ಪ್ಲೇಗ್‌ನಿಂದಾಗಿ ಬೈಕುಲಾ ಜೈಲಿನಲ್ಲಿದ್ದ ಏಳು ಮಂದಿ ಮೃತಪಟ್ಟಿದ್ದರಾದರೂ ಈ ಲಸಿಕೆಯು ಸಾವಿನ ಸಂಖ್ಯೆಯನ್ನು ಶೇ.50ಕ್ಕೆ ಇಳಿಸಿತು. ಹಾಫ್ಕಿನ್ ಸಂಶೋಧಿಸಿದ ಲಸಿಕೆಯನ್ನು ಡಾ. ವೇಗಸ್ ಅವರು ಖುದ್ದಾಗಿ ಬಾಂಬೆ ನಗರದ ಸುಮಾರು 18 ಸಾವಿರ ನಿವಾಸಿಗಳಿಗೆ ನೀಡಿದರು.

ಪ್ಲೇಗ್ ರೋಗಿಗಳನ್ನು ಪತ್ತೆಹಚ್ಚುವಿಕೆ ಹಾಗೂ ಲಸಿಕೆ ನೀಡುವ ಕಾರ್ಯದ ಜೊತೆಗೆ ಡಾ. ವೇಗಸ್ ಅವರು ಕೊಳೆಗೇರಿಗಳ ಸ್ವಚ್ಛೀಕರಣಕ್ಕೆ ಹಾಗೂ ಪ್ಲೇಗ್ ಮಹಾಮಾರಿ ಹರಡಲು ಕಾರಣವಾಗಿರುವ ಇಲಿಗಳನ್ನು ನಾಶಪಡಿಸುವ ಅಭಿಯಾನವನ್ನು ಕೂಡಾ ಆರಂಭಿಸಿದರು. ಆದಾಗ್ಯೂ ಪ್ಲೇಗನ್ನು ನಿರ್ಮೂಲನೆಗೊಳಿಸುವ ಮಹಾನಗರ ಪಾಲಿಕೆಯ ಅಭಿಯಾನವು ಬಡವರ ಶೋಷಣೆಗೂ ಕಾರಣವಾಯಿತು. ಮಹಾನಗರಪಾಲಿಕೆಯ ಅಧಿಕಾರಿಗಳು ಪ್ಲೇಗ್ ನಿರ್ಮೂಲನೆಯ ಹೆಸರಿನಲ್ಲಿ ನೂರಾರು ಕೊಳೆಗೇರಿಗಳನ್ನು ನಾಶಪಡಿಸಿದರು. ಇದರಿಂದ ಸಾವಿರಾರು ಬಡವರು ಆಸರೆಗಿದ್ದ ಸೂರನ್ನು ಕೂಡಾ ಕಳೆದುಕೊಂಡರು. ಬಡ ಪ್ಲೇಗ್ ಪೀಡಿತರನ್ನು ಸಮಾಜದಿಂದ ಕಟ್ಟುನಿಟ್ಟಾಗಿ ದೂರವಿಡುವಂತಹ ಅಮಾನವೀಯ ಕೆಲಸಗಳೂ ನಡೆದವು. ಇದರ ವಿರುದ್ಧ ಡಾ.ವೇಗಸ್ ಬಲವಾದ ಧ್ವನಿಯೆತ್ತಿದ್ದರು. ಭಾರೀ ಜನಸಂದಣಿ ಸೇರುವಂತಹ ಜಾತ್ರೆಗಳು, ಉತ್ಸವಗಳಿಗೂ ನಿಷೇಧ ಹೇರಲಾಯಿತು.

ಇದೇ ಸಂದರ್ಭದಲ್ಲಿ ಕೆಲವು ಪ್ಲೇಗ್ ಪೀಡಿತರು ಪ್ರಮಾದವಶಾತ್ ಕಣ್ಣು ತಪ್ಪಿಸಿ ಬೇರೆ ಬೇರೆ ಪ್ರದೇಶಗಳಿಗೆ ವಲಸೆ ಹೋಗಿದ್ದರಿಂದ ದೇಶದ ವಿವಿಧ ಭಾಗಗಳಿಗೂ ಈ ಮಹಾಮಾರಿ ಹರಡಿತ್ತು. ಹೀಗೆ ಸುಮಾರು ಎರಡು ದಶಕಗಳ ಕಾಲ ಪ್ಲೇಗ್ ಭಾರತಾದ್ಯಂತ ಅಟ್ಟಹಾಸಗೈದು ಸಾವಿರಾರು ಜನರನ್ನು ಬಲಿತೆಗೆದುಕೊಂಡಿತು.

ಆದಾಗ್ಯೂ ಎದೆಗುಂದದ ಡಾ.ವೇಗಸ್ ವಿಶೇಷವಾಗಿ ಬಡವರು ಸೇರಿದಂತೆ ಜನತೆಯ ಜೀವನಪರಿಸ್ಥಿತಿಯ ಸುಧಾರಣೆಗೆ ಶ್ರಮಿಸಿದರು. 1906ರಲ್ಲಿ ಅವರು ಬಾಂಬೆ ಮಹಾನಗರ ಪಾಲಿಕೆಯ ಅಧ್ಯಕ್ಷರಾಗಿ ಆಯ್ಕೆಯಾದರು.

ಬಾಂಬೆ ಮಹಾನಗರ ಪಾಲಿಕೆಯ ಸದಸ್ಯರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದ ಡಾ. ವೇಗಸ್ ಪುರಪಿತ (ಮೇಯರ್) ನಾಗಿಯೂ ಕಾರ್ಯನಿರ್ವಹಿಸಿದ್ದರು. ವಿಶೇಷವಾಗಿ ನೈರ್ಮಲ್ಯ ಹಾಗೂ ಸಾರ್ವಜನಿಕ ಆರೋಗ್ಯ ಸೇರಿದಂತೆ ನಗರದ ಹಿತಾಸಕ್ತಿಗಳನ್ನು ಕಾಪಾಡುವ ವಿಷಯದಲ್ಲಿ ಡಾ.ವೇಗಸ್ ಕಾವಲುಗಾರನಂತೆ ಅಹೋರಾತ್ರಿ ಶ್ರಮಿಸಿದ್ದರು. ಉತ್ತರ ಬಾಂಬೆಗೆ ಸುರಕ್ಷಿತವಾದ ಒಳಚರಂಡಿ ವ್ಯವಸ್ಥೆಯನ್ನು ರೂಪಿಸುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಕೃಪೆ: the betterindia.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News