ಕೋವಿಡ್-19 ವಿರುದ್ಧದ ಹೋರಾಟಕ್ಕೆ 80 ಲಕ್ಷ ರೂ. ದೇಣಿಗೆ ನೀಡಿದ ರೋಹಿತ್

Update: 2020-04-01 04:30 GMT

ಮುಂಬೈ, ಮಾ.31: ಭಾರತದ ಕ್ರಿಕೆಟಿಗ ರೋಹಿತ್ ಶರ್ಮಾ ಕೊರೋನ ವೈರಸ್ ಪರಿಹಾರ ನಿಧಿಗೆ ಒಟ್ಟು 80 ಲಕ್ಷ ರೂ. ದೇಣಿಗೆ ನೀಡುವುದಾಗಿ ಮಂಗಳವಾರ ಘೋಷಿಸಿದ್ದಾರೆ.

ಟ್ವೀಟ್‌ನಲ್ಲಿ ಈ ಕುರಿತು ವಿವರ ಹಂಚಿಕೊಂಡ ರೋಹಿತ್, ಪ್ರಧಾನಮಂತ್ರಿ ಪರಿಹಾರ ನಿಧಿಗೆ 45 ಲಕ್ಷ ರೂ., ಮಹಾರಾಷ್ಟ್ರದ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂ. ಹಾಗೂ ರೆಮೊಟೊ ಸಮುದಾಯ ಆಹಾರ ಉಪಕ್ರಮಕ್ಕೆ 5 ಲಕ್ಷ ರೂ. ಹಾಗೂ ಬೀದಿ ನಾಯಿಗಳ ಆರೈಕೆಗೆ 5 ಲಕ್ಷ ರೂ. ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಮಂಗಳವಾರ ಬೆಳಗ್ಗೆ ಭಾರತದಲ್ಲಿ 1,347 ಕೊರೋನ ವೈರಸ್ ಪ್ರಕರಣ ಪತ್ತೆಯಾಗಿದ್ದು, 43 ಮಂದಿ ಸಾವನ್ನಪ್ಪಿದ್ದಾರೆ. ರೋಹಿತ್ ಅವರ ತವರುರಾಜ್ಯ ಮಹಾರಾಷ್ಟ್ರದಲ್ಲಿ 233 ಸೋಂಕುಪೀಡಿತರಾಗಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ.

ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ನಿಧಿ ಸಂಗ್ರಹಣೆಗೆ ನೆರವು ನೀಡುವಂತೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ವಿನಂತಿಸಿದ ಮರುದಿನವೇ ರೋಹಿತ್‌ನೆರವಿನ ಭರವಸೆ ನೀಡಿದ್ದಾರೆ.

ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡುಲ್ಕರ್, ನಾಯಕ ವಿರಾಟ್ ಕೊಹ್ಲಿ, ಸುರೇಶ್ ರೈನಾ, ಅಜಿಂಕ್ಯ ರಹಾನೆ ಹಾಗೂ ಮಹಿಳಾ ಕ್ರಿಕೆಟ್ ತಂಡದ ಸದಸ್ಯೆಯರು ದೇಣಿಗೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News