ಭಾರತ ಅಂಡರ್-17 ಮಹಿಳಾ ತಂಡದ ಕೋಚ್ ಇಂದು ಸ್ವೀಡನ್‌ಗೆ ವಾಪಸ್

Update: 2020-04-01 04:34 GMT

ಹೊಸದಿಲ್ಲಿ, ಮಾ.31: ಕೋವಿಡ್-19 ವೈರಸ್‌ನಿಂದಾಗಿ 21 ದಿನಗಳ ಕಾಲ ದೇಶದಲ್ಲಿ ಲಾಕ್‌ಡೌನ್ ಮಾಡಿರುವ ಕಾರಣ ಭಾರತದ ಅಂಡರ್-17 ಮಹಿಳಾ ತಂಡದ ತರಬೇತಿ ಸ್ಥಗಿತಗೊಂಡಿದ್ದು, ತಂಡದ ಕೋಚ್, ಸ್ವೀಡನ್‌ನ ಥಾಮಸ್ ಡೆನರ್ ಬುಧವಾರ ತಮ್ಮ ದೇಶದ ವಿಮಾನ ಏರಲು ಸಜ್ಜಾಗಿದ್ದಾರೆ.

 ಭಾರತದಲ್ಲಿ ಸಿಲುಕಿರುವ ತಮ್ಮ ನಾಗರಿಕರಿಗೆ ಸ್ವೀಡನ್ ಸರಕಾರ ವ್ಯವಸ್ಥೆ ಮಾಡಿರುವ ವಿಮಾನದಲ್ಲಿ ಥಾಮಸ್ ಡೆನರ್ ಹಾಗೂ ಫಿಟ್ನೆಸ್ ಕೋಚ್ ಪೀರ್ ಕಾರ್ಲ್‌ಸನ್ ಸ್ವದೇಶಕ್ಕೆ ವಾಪಸಾಗಲಿದ್ದಾರೆ. ನವೆಂಬರ್‌ನಲ್ಲಿ ನಡೆಯಲಿರುವ ಫಿಫಾ ಅಂಡರ್-17 ವಿಶ್ವಕಪ್‌ಗಾಗಿ ಭಾರತ ಮಹಿಳಾ ತಂಡದ ಮೇಲ್ವಿಚಾರಣೆಯನ್ನು ಥಾಮಸ್ ವಹಿಸಿಕೊಂಡಿದ್ದರು. ‘‘ಮುಖ್ಯ ಕೋಚ್ ಥಾಮಸ್ ಅವರು ನಾಳೆ ಸ್ವೀಡನ್‌ಗೆ ವಾಪಸಾಗಲಿದ್ದಾರೆ. ಈಗ ಯಾವುದೇ ತರಬೇತಿ ನಡೆಯುತ್ತಿಲ್ಲ. ಆಟಗಾರ್ತಿಯರು ಮನೆಗೆ ತೆರಳಿದ್ದಾರೆ’’ ಎಂದು ಅಖಿಲ ಭಾರತ ಫುಟ್ಬಾಲ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಪಿಟಿಐಗೆ ತಿಳಿಸಿದ್ದಾರೆ.

ಫಿಫಾ ಅಂಡರ್-17 ಮಹಿಳಾ ವಿಶ್ವಕಪ್ ಟೂರ್ನಿ ಭಾರತದ ಐದು ತಾಣಗಳಲ್ಲಿ ನವೆಂಬರ್ 2ರಿಂದ 21ರ ತನಕ ನಿಗದಿಯಾಗಿದೆ. 60ರ ವಯಸ್ಸಿನ ಅನುಭವಿ ಡೆನರ್‌ರನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಭಾರತದ ಅಂಡರ್-17 ತಂಡದ ಪ್ರಮುಖ ಕೋಚ್ ಆಗಿ ನೇಮಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News