ನಿಝಾಮುದ್ದೀನ್ ಕಾರ್ಯಕ್ರಮದ ಬಗ್ಗೆ ಮಾಧ್ಯಮ ನಿಲುವು ಖಂಡನಾರ್ಹ: ಜಮಾಅತೆ ಇಸ್ಲಾಮಿ ಹಿಂದ್

Update: 2020-04-01 16:18 GMT

ಬೆಂಗಳೂರು. ಎ.1: ಸುದ್ದಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಬ್ಲೀಗ್ ಜಮಾಅತ್ ಅನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿರುವುದು ಖಂಡನಾರ್ಹ. ಧಾರ್ಮಿಕ ಕಾರ್ಯಕ್ರಮವೊಂದನ್ನು ಕೋಮು ದ್ರುವೀಕರಣಕ್ಕಾಗಿ ಉಪಯೋಗಿಸುತ್ತಿರುವುದು ನಾಚಿಕೆಗೇಡಿನ ವರ್ತನೆಯಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಸೈಯದ್ ಸಆದತುಲ್ಲಾ ಹುಸೇನಿ ಅವರು ಹೇಳಿದ್ದಾರೆ.

ತಬ್ಲೀಗಿ ಜಮಾಅತ್ ತನ್ನ ಕಾರ್ಯಕ್ರಮ ಮಾಡುತ್ತಿದ್ದ ಸಮಯಲ್ಲಿ ದೇಶದ ಇತರ ಕಡೆ ಕೂಡ ಇದಕ್ಕಿಂತ ದೊಡ್ಡ ಸಂಖ್ಯೆಯಲ್ಲಿ ಧಾರ್ಮಿಕ ಮತ್ತು ಜಾತ್ಯತೀತ ಕಾರ್ಯಕ್ರಮಗಳು ಮುಖ್ಯಮಂತ್ರಿಗಳ ನೇತ್ರತ್ವದಲ್ಲೇ ನಡೆದಿದ್ದವು. ಇದನ್ನೆಲ್ಲ ನಿರ್ಲಕ್ಷಿಸಿ ಕೇವಲ ಮರ್ಕಝ್ ನಿಝಾಮುದ್ದೀನಿನ ಕಡೆ ಮಾತ್ರ ಬೊಟ್ಟು ಮಾಡಿ ತೋರಿಸುತ್ತಿರುವುದರ ಅರ್ಥ ಏನು ಅನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಮಾಧ್ಯಮ ಜಗತ್ತಿನ ಈ ನಾಚಿಕೆಗೇಡು ವರ್ತನೆಯು ಅಮಾನವೀಯವಾದುದು. ಮರ್ಕಝ್ ನಿಝಾಮುದ್ದೀನ್ ನ ಯಾವುದೇ ಮುಖ್ಯಸ್ಥ ಅಥವಾ ಅಧಿಕಾರಿಯ ಮೇಲೆ ಎಫ್ಐಆರ್ ಮಾಡುವುದರ ಮೊದಲು, ಕೇಂದ್ರ ಮತ್ತು ರಾಜ್ಯ ಸರಕಾರಗಳ ಅಶಿಸ್ತಿನ ಮೇಲೆ ಮತ್ತು ದಿಢೀರ್ ಲಾಕ್ ಡೌನ್ ನ ನಿರ್ಧಾರದ ಕಾರಣ ಲಕ್ಷಾಂತರ ಕೂಲಿ ಕಾರ್ಮಿಕರು ದೆಹಲಿಯ ಆನಂದ್ ವಿಹಾರ್ ಮತ್ತು ಇತರ ಸ್ಥಳಗಳಲ್ಲಿ ಸಿಲುಕಿ ಸಂಕಟ ಅನುಭವಿಸಿದುದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಅಧಿಕಾರಿಗಳ ಮೇಲೆ ಎಫ್ಐಆರ್ ಮಾಡಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.

ಒಂದು ವರದಿಯ ಪ್ರಕಾರ, ತಬ್ಲೀಗಿ ಜಮಾಅತ್ ನ ಮುಖ್ಯಸ್ಥರು, ಅಧಿಕಾರಿಗಳಿಗೆ ಬರೆದ ಹಲವು ಪತ್ರಗಳಿಗೆ ಪ್ರತಿಕ್ರಿಯಿಸದೆ ಮೌನವಹಿಸಿದ ಎಲ್ಲ ಅಧಿಕಾರಿಗಳ ಮೇಲೂ ಎಫ್ಐಆರ್ ಮಾಡಬೇಕಿದೆ. ಆದರೆ, ಈ ಯಾವುದನ್ನೂ ಚರ್ಚಿಸದ ಮಾಧ್ಯಮದ ನಿಲುವನ್ನು ನಾನು ಖಂಡಿಸುತ್ತೇನೆ ಮತ್ತು ತಬ್ಲೀಗಿ ಜಮಾಅತ್ ಮತ್ತು ಈ ಸಂದರ್ಭದಲ್ಲಿ ಮರ್ಕಝ್ ನಿಝಾಮುದ್ದೀನ್ ಜೊತೆ ಜಮಾಅತೆ ಇಸ್ಲಾಮಿ ಹಿಂದ್ ನಿಲ್ಲುತ್ತದೆ ಎಂಬುದಾಗಿ ಘೋಷಿಸುತ್ತೇನೆ ಎಂದವರು ಅವರು ಹೇಳಿದ್ದಾರೆ.

ಇಂತಹ ಸಂದರ್ಭದಲ್ಲಿ ಮುಸ್ಲಿಮ್ ವಿಧ್ವಾಂಸರು ಮತ್ತು ಧಾರ್ಮಿಕ ಮುಖಂಡರು ಈ ಸಾಂಕ್ರಾಮಿಕ ರೋಗದ ಬಗ್ಗೆ ಅರಿವು ಮೂಡಿಸಲು ಮಾಡಿದ ಪ್ರವಚನ ಮತ್ತು ಭಾಷಣಗಳನ್ನು ಸಮಾಜದ ಮುಂದೆ ಇಡಬೇಕಾಗಿದೆ. ಅದೇ ರೀತಿ ಮುಸ್ಲಿಮರು ಮತ್ತು ಮುಸ್ಲಿಮ್ ಸಂಘಟನೆಗಳು ಈ ರೋಗವನ್ನು ತಡೆಗಟ್ಟಲು ಮತ್ತು ಸಂಕಷ್ಟದಲ್ಲಿರುವ ಭಾರತೀಯರಿಗೆ ನೆರವಾಗಲು ಸರ್ವ ತ್ಯಾಗಕ್ಕೂ ಸಿದ್ಧವಾಗಬೇಕು. ಇದು ರಾಜಕೀಯ ಮಾಡುವ ಸಮಯವಲ್ಲ. ನಾವೆಲ್ಲರು ಒಂದಾಗಿ ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಬೇಕಾಗಿದೆ ಎಂದವರು ಕರೆಕೊಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News