"ಉಜ್ವಲ ಫಲಾನುಭವಿಗಳಿಗೆ ಮೂರು ತಿಂಗಳಲ್ಲಿ ಮೂರು ಎಲ್‍ಪಿಜಿ ಸಿಲಿಂಡರ್ ಉಚಿತ"

Update: 2020-04-01 17:02 GMT
ಸಾಂದರ್ಭಿಕ ಚಿತ್ರ

ಬೆಂಗಳೂರು. ಎ.1: ಉಜ್ವಲ ಯೋಜನೆಯ ಎಲ್ಲ ಬಳಕೆದಾರರು ಮುಂದಿನ ಮೂರು ತಿಂಗಳಲ್ಲಿ(ಎಪ್ರಿಲ್ ನಿಂದ ಜೂನ್‍ವರೆಗೆ) ಮೂರು ಮರುಪೂರಣವಾದ ಸಿಲಿಂಡರ್ ಗಳನ್ನು ಉಚಿತವಾಗಿ ಪಡೆಯಲಿದ್ದಾರೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‍ನ ಉಪ ಮಹಾ ಪ್ರಬಂಧಕ(ಸಾಂಸ್ಥಿಕ ಸಂವಹನ ಮತ್ತು ಸಿಎಸ್‍ಆರ್) ನೂರಾನ ತಿಳಿಸಿದ್ದಾರೆ.

ಪ್ರಧಾನಮಂತ್ರಿ ಉಜ್ವಲ ಯೋಜನೆ(ಪಿಎಂಯುವೈ)ಯ 8 ಕೋಟಿಗೂ ಅಧಿಕ ಫಲಾನುಭವಿಗಳು 14.2 ಕೆ.ಜಿ.ಗಳ ಮೂರು ಎಲ್‍ಪಿಜಿ ಸಿಲಿಂಡರ್ ಪಡೆಯಲು ಅರ್ಹರಾಗಿರುತ್ತಾರೆ. ಅದರಂತೆ, ಎಪ್ರಿಲ್‍ನಲ್ಲಿ ಮರುಪೂರಣದ ಸಿಲಿಂಡರ್ ವೆಚ್ಚಕ್ಕಾಗಿ ಬಳಸಲು ಅದರ ಪೂರ್ಣ ಚಿಲ್ಲರೆ ಮಾರಾಟದ ಬೆಲೆಯನ್ನು(ಆರ್.ಎಸ್.ಪಿ) ಮುಂಗಡವಾಗಿ, ಉಜ್ವಲ ಫಲಾನುಭವಿಗಳ ಸಂಪರ್ಕಿತ ಬ್ಯಾಂಕ್ ಖಾತೆಗೆ ವರ್ಗಾಯಿಸಲು ನಿರ್ಧರಿಸಲಾಗಿದೆ. ಪಿಎಂಯುವೈ ಗ್ರಾಹಕರು ಪ್ರತಿ ತಿಂಗಳು ಒಂದು ಸಿಲಿಂಡರ್ ಗೆ ಅರ್ಹರಾಗಿರುತ್ತಾರೆ ಎಂದು ಅವರು ಹೇಳಿದ್ದಾರೆ.

ಫಲಾನುಭವಿಗಳು ಮುಂದಿನ ಮರುಪೂರಣದ ಸಿಲಿಂಡರ್ ಅನ್ನು ಹಿಂದಿನ ಸಿಲಿಂಡರ್ ಸ್ವೀಕರಿಸಿದ 15 ದಿನಗಳ ನಂತರವಷ್ಟೇ ಬುಕ್ ಮಾಡಬಹುದು. ಮುಂದಿನ ತಿಂಗಳ ಎರಡನೆ ದಿನಾಂಕದ ಹೊತ್ತಿಗೆ ಫಲಾನುಭವಿ ಹಿಂದಿನ ತಿಂಗಳಲ್ಲಿ ಮರುಪೂರಣದ ಸಿಲಿಂಡರ್ ಪಡೆದಿದ್ದಲ್ಲಿ ಮಾತ್ರ ಅಂತಹ ಗ್ರಾಹಕರಿಗೆ ಮುಂಗಡವಾಗಿ ಆಯಾ ತಿಂಗಳ ಆರ್‍ಎಸ್‍ಪಿಗೆ ಸಮಾನವಾದ ಮೊತ್ತವನ್ನು ಮುಂಗಡವಾಗಿ ವರ್ಗಾವಣೆ ಮಆಡುವ ಪ್ರಕ್ರಿಯೆಯನ್ನು ಎಎಂಸಿ ಆರಂಭಿಸಲಿದೆ ಎಂದು ನೂರಾನ ತಿಳಿಸಿದ್ದಾರೆ.

ಒಂದು ವೇಳೆ ಗ್ರಾಹಕರು ಈ ಮೂರು ತಿಂಗಳುಗಳ ಅವಧಿಯಲ್ಲಿ ಮರುಪೂರಣದ ಸಿಲಿಂಡರ್ ಪಡೆಯದಿದ್ದಲ್ಲಿ, ಅವರು ಮುಂಗಡ ಹಣವನ್ನು 2021ರ ಮಾ.31ರವರೆಗೆ ಸಿಲಿಂಡರ್ ಪಡೆಯಲು ಬಳಸಬಹುದಾಗಿದೆ. ಉಚಿತ ಮರುಪೂರಣ ಸಿಲಿಂಡರ್‍ಗಳನ್ನು ಸಾಲ ಮರುಪಾವತಿ ಯೋಜನೆ ಅಡಿ ಲೆಕ್ಕ ಹಾಕುವುದಿಲ್ಲ ಎಂದು ಅವರು ಹೇಳಿದ್ದಾರೆ. ಈಗ ಅಸ್ತಿತ್ವದಲ್ಲಿರುವ ಗರಿಷ್ಠ ಸಿಲಿಂಡರ್ ಮಾನದಂಡಗಳಿಗೆ ಅನುಗುಣವಾಗಿ ಗ್ರಾಹಕರು ಸಬ್ಸಿಡಿ ಸಿಲಿಂಡರ್ ಗಳನ್ನು ಪಡೆಯಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News