ಪರೀಕ್ಷೆ ಇಲ್ಲದೆಯೇ 7, 8, 9ನೇ ತರಗತಿ ವಿದ್ಯಾರ್ಥಿಗಳು ಉತ್ತೀರ್ಣ: ಸಚಿವ ಸುರೇಶ್ ಕುಮಾರ್

Update: 2020-04-02 08:39 GMT

ಬೆಂಗಳೂರು, ಎ.2: ಕೊರೋನ ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯಬೇಕಿದ್ದ 7, 8 ಮತ್ತು 9ನೇ ತರಗತಿ ಹಾಗೂ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿಯ ಕೊನೆಯ ಪರೀಕ್ಷೆ ನಡೆಸಲು ಸದ್ಯ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ 7 ಮತ್ತು 8ನೇ ತರಗತಿಗೆ ಪರೀಕ್ಷೆಗಳಿಲ್ಲದೆ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ಉತ್ತೀರ್ಣ ಮಾಡಲು ನಿರ್ಧರಿಸಲಾಗಿದೆ ಎಂದು ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಇಂದು ಮಧ್ಯಾಹ್ನ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಲೈವ್‌ನಲ್ಲಿ ಈ ವಿಚಾರವನ್ನು ಅವರು ಪ್ರಕಟಿಸಿದ್ದಾರೆ.

ಯಾವುದೇ ಪರೀಕ್ಷೆ, ಷರತ್ತುಗಳಿಲ್ಲದೆ 7ನೇ ತರಗತಿಯ ವಿದ್ಯಾರ್ಥಿಗಳು 8ನೇ ತರಗತಿಗೆ, 8ನೇ ತರಗತಿ ವಿದ್ಯಾರ್ಥಿಗಳು 9ನೇ ತರಗತಿಗೆ ಕಳುಹಿಸಲಾಗುವುದು. ಮುಂದಿನ ಶೈಕ್ಷಣಿಕ ಸಾಲಿನ ಆರಂಭಿಸುವುದಕ್ಕೆ ಮುಂಚಿತವಾಗಿ 7ನೇ ತರಗತಿಗೆ ಸಿದ್ಧಪಡಿಸಲಾಗಿರುವ ಪ್ರಶ್ನೆಪತ್ರಿಕೆಯನ್ನಿಟ್ಟು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವವ ಬಗ್ಗೆ ಚಿಂತನೆ ನಡೆಸಲಾಗುವುದು. ಆದರೆ ಸದ್ಯ 7 ಮತ್ತು 8ನೇ ತರಗತಿಗೆ ಯಾವುದೇ ಪರೀಕ್ಷೆಗಳು ಇರುವುದಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.

9ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ವರೆಗೆ ನಡೆದಿರುವ ತರಗತಿ ಪರೀಕ್ಷೆಗಳಾಗಿ ನಡೆದಿರುವ Formative(ರೂಪಣಾತ್ಮಕ) ಮತ್ತು summative (ಸಂಕಲನಾತ್ಮಕ) ಪರೀಕ್ಷೆಗಳ ಆಧಾರದ ಮೇಲೆ 10ನೇ ತರಗತಿಗೆ ಉತ್ತೀರ್ಣ ಮಾಡಲಾಗುವುದು. ಒಂದುವೇಳೆ ಈ ಎರಡು ಆಂತರಿಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರದಿದ್ದಲ್ಲಿ, ಅಂತಹ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನ ಅವಧಿಗೆ ಮುಂಚಿತವಾಗಿ ಮತ್ತೊಮ್ಮೆ ಪರೀಕ್ಷೆ ನಡೆಸಬೇಕು. ಇದಕ್ಕೆ ಅಗತ್ಯವಾಗಿರುವ ಕ್ರಮಗಳನ್ನು ಸಂಬಂಧಪಟ್ಟ ಶಾಲೆಗಳೇ ಕೈಗೊಳ್ಳಬೇಕು ಎಂದು ಸಚಿವರು ತಿಳಿಸಿದರು.

ಎಸೆಸೆಲ್ಸಿ ಪರೀಕ್ಷೆಯ ಬಗ್ಗೆ ಎಪ್ರಿಲ್ 14ರ ಬಳಿಕ ಪರಿಸ್ಥಿತಿಯ ಅವಲೋಕನ ನಡೆಸಿ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು. ಅದೇರೀತಿ ಬಾಕಿ ಉಳಿದಿರುವ ಪಿಯುಸಿ ಕೊನೆಯ ಪರೀಕ್ಷೆ(ಇಂಗ್ಲಿಷ್ ) ನಡೆಸುವ ಬಗ್ಗೆಯೂ ಎಪ್ರಿಲ್ 14ರ ಬಳಿಕ ತೀರ್ಮಾನಿಸಲಾಗುವುದು ಎಂದು ಸಚಿವರು ಸ್ಪಷಪಡಿಸಿದರು. ಈ ನಡುವೆ ಪರೀಕ್ಷೆ ಇಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಬೀದಿಗಿಳಿಯೂ ಪ್ರಯತ್ನ ಮಾಡಬಾರದು ಎಂದು ಶಿಕ್ಷಣ ಸಚಿವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News