ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸಹಕಾರ ನೀಡಿ: ಪಕ್ಷದ ಶಾಸಕರಿಗೆ ಕುಮಾರಸ್ವಾಮಿ ಸೂಚನೆ

Update: 2020-04-02 11:32 GMT

ಬೆಂಗಳೂರು, ಎ. 2: ಕೊರೋನ ವೈರಸ್ ಸೋಂಕು ತಡೆಗಟ್ಟಲು ಘೋಷಿಸಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವವರಿಗೆ, ಪ್ರಮುಖವಾಗಿ ರೈತರಿಗೆ ಎಲ್ಲ ರೀತಿಯ ಸಹಾಯ-ಸಹಕಾರ ನೀಡಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ಶಾಸಕರಿಗೆ ಸೂಚನೆ ನೀಡಿದ್ದಾರೆ.

ಗುರುವಾರ ತಮ್ಮ ನಿವಾಸದಲ್ಲಿ ಮಂಡ್ಯ ಮತ್ತು ತುಮಕೂರು ಜಿಲ್ಲೆಯ ಪಕ್ಷದ ಶಾಸಕರೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಾರಕ ಕೊರೋನ ವೈರಸ್ ಸೋಂಕು ಮತ್ತು ಲಾಕ್ ಡೌನ್ ಪರಿಣಾಮಗಳ ಬಗ್ಗೆ ಶಾಸಕರಿಂದ ಮಾಹಿತಿಯನ್ನು ಪಡೆದರಲ್ಲದೆ, ಸಂಕಷ್ಟದ ಸಂದರ್ಭದಲ್ಲಿ ಜನರ ನೆರವಿಗೆ ನಿಲ್ಲಬೇಕೆಂದು ಇದೇ ವೇಳೆ ಸಲಹೆ ನೀಡಿದರು.

ವಿಡಿಯೋ ಸಂವಾದದಲ್ಲಿ ಮಂಡ್ಯ ಕ್ಷೇತ್ರದ ಶಾಸಕ ಶ್ರೀನಿವಾಸ್, ಮೇಲುಕೋಟೆ ಕ್ಷೇತ್ರದ ಸಿ.ಎಸ್.ಪುಟ್ಟರಾಜು, ನಾಗಮಂಗಲ ಕ್ಷೇತ್ರದ ಸುರೇಶ್ ಗೌಡ, ತುಮಕೂರು ಗ್ರಾಮಾಂತರ ಕ್ಷೇತ್ರದ ಗೌರಿಶಂಕರ ಹಾಗೂ ಶಿರಾ ಕ್ಷೇತ್ರದ ಶಾಸಕ ಸತ್ಯನಾರಾಯಣ ಅವರೊಂದಿಗೆ ಸಮಾಲೋಚನೆ ನಡೆಸಿದ ಕುಮಾರಸ್ವಾಮಿ, ಸೋಂಕು ತಡೆಗೆ ಎರಡೂ ಜಿಲ್ಲೆಗಳಲ್ಲಿ ರಾಜ್ಯ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಿದರು.

ರಾಮನಗರ, ಚನ್ನಪಟ್ಟಣದಲ್ಲಿ ತಾವು ಆರಂಭಿಸಿರುವ ಎಚ್‍ಡಿಕೆ ಜನತಾ ದಾಸೋಹವನ್ನು ಎಲ್ಲರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಆರಂಭಿಸಿ ಹಸಿದವರಿಗೆ ಆಹಾರ ಪೂರೈಕೆ ಮಾಡುವಂತೆ ಕುಮಾರಸ್ವಾಮಿ, ಪಕ್ಷದ ಎಲ್ಲ ಶಾಸಕರಿಗೆ ಸೂಚಿಸಿದ್ದು, ಎಲ್ಲರೂ ಅದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News