ಕೊರೋನ: ಗುಣಮುಖರಾದವರು 14 ದಿನ ಎಚ್ಚರಿಕೆಯಿಂದಿರಲು ವೈದ್ಯರ ಸಲಹೆ

Update: 2020-04-02 12:54 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.2: ಕೊರೋನ ಸೋಂಕು ದೃಢಪಟ್ಟ ಬಳಿಕ ಗುಣಮುಖರಾದವರು ಮತ್ತೂ 14 ದಿನಗಳ ಕಾಲ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.

ಸೋಂಕು ದೃಢಪಟ್ಟ 9 ಜನ ಈಗಾಗಲೇ ಗುಣಮುಖರಾಗಿ ಮನೆಗಳಿಗೆ ವಾಪಸ್ಸಾಗಿದ್ದಾರೆ. ಆದರೂ, ಅವರ ಮೇಲೆ ವಿಶೇಷ ಕಾಳಜಿ ವಹಿಸುವ ಮೂಲಕ ಜಾಗರೂಕತೆಯಿಂದ ನೋಡಿಕೊಳ್ಳಬೇಕಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಸೋಂಕಿನಿಂದ ಗುಣಮುಖರಾದವರು 14 ದಿನ ಯಾರ ಸಂಪರ್ಕಕ್ಕೂ ಬಾರದೆ, ಪ್ರತ್ಯೇಕ ನಿಗಾದಲ್ಲಿರಬೇಕು. ವೈರಸ್‍ನಿಂದಾಗಿ ದೇಹ ಸಾಕಷ್ಟು ಬಳಲಿರುತ್ತದೆ. ಅದರಿಂದ ಚೇತರಿಸಿಕೊಳ್ಳಲು ಪೌಷ್ಠಿಕ ಆಹಾರ ಸೇವಿಸಬೇಕು. ಹೆಚ್ಚಿನ ವಿಶ್ರಾಂತಿ ಪಡೆಯಬೇಕು. ಸ್ವಲ್ಪ ಮಟ್ಟಿಗೆ ವ್ಯಾಯಾಮ ಮಾಡಬೇಕು. ರಕ್ತದೊತ್ತಡ ಸಮಸ್ಯೆಯಿದ್ದಲ್ಲಿ ಅದಕ್ಕೆ ಸ್ಪಂದಿಸಿದ ಔಷಧಿಗಳನ್ನು ಸೇವಿಸಬಹುದು ಎಂದು ಸಲಹೆ ನೀಡಿದ್ದಾರೆ.

ನಿತ್ಯ ಕೌನ್ಸೆಲಿಂಗ್: ಆಸ್ಪತ್ರೆಯಲ್ಲಿ 28 ದಿನಗಳ ನಿಗಾ, ನಂತರ ಮನೆಯಲ್ಲಿ 14 ದಿನಗಳ ಪ್ರತ್ಯೇಕತೆಯಿಂದಾಗಿ ರೋಗಿ ಮಾನಸಿಕವಾಗಿ ಕುಗ್ಗುವ ಸಾಧ್ಯತೆಯಿರುತ್ತದೆ. ಹೀಗಾಗಿ, ಅವರ ಆತ್ಮಸ್ಥೈರ್ಯ ಹೆಚ್ಚಿಸಲು ಆರೋಗ್ಯ ಇಲಾಖೆಯ ಮನೋರೋಗ ತಜ್ಞರು ನಿತ್ಯ ಕರೆ ಮಾಡಿ ಕೌನ್ಸೆಲಿಂಗ್ ಮಾಡಲಿದ್ದಾರೆ.

ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಬಂದ ನಂತರದ 14 ದಿನ ಯಾರ ಸಂಪರ್ಕಕ್ಕೆ ಬರದೇ ಪ್ರತ್ಯೇಕವಾಗಿರಬೇಕು. ಈ ಅವಧಿಯಲ್ಲಿ ಏನಾದರೂ ಸಮಸ್ಯೆಯಾದರೆ ಕೂಡಲೇ ವೈದ್ಯರನ್ನು ಕಾಣುವುದು ಸೂಕ್ತ.

-ಡಾ.ನಾಗರಾಜ್, ರಾಜೀವ್‍ಗಾಂದಿ ಎದೆ ರೋಗಗಳ ಆಸ್ಪತ್ರೆಯ ನಿರ್ದೇಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News