ಲಾಕ್‌ಡೌನ್ ಕೊನೆಗೊಂಡ ಬಳಿಕ ಜನರ ಸೀಮಿತ ಸಂಚಾರಕ್ಕೆ ಸಮಾನ ಕಾರ್ಯನೀತಿ ಅಗತ್ಯ: ಪ್ರಧಾನಿ ಮೋದಿ

Update: 2020-04-02 17:44 GMT

ಹೊಸದಿಲ್ಲಿ, ಎ. 2: ಕೊರೊನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಲಾಕ್‌ಡೌನ್ ಕೊನೆಗೊಂಡ ಬಳಿಕ ಜನರ ಸೀಮಿತ ಸಂಚಾರ ಖಾತರಿಪಡಿಸಲು ಎಲ್ಲಾ ರಾಜ್ಯಗಳೂ ಸಮಾನ ಕಾರ್ಯನೀತಿ ರೂಪಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೊರೊನ ವೈರಸ್ ಬಿಕ್ಕಟ್ಟಿನ ಕುರಿತು ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಮೋದಿ, ಲಾಕ್‌ಡೌನ್ ಕೊನೆಗೊಂಡ ಬಳಿಕ ಪರಿಸ್ಥಿತಿ ಈ ಹಿಂದಿಗಿಂತ ಭಿನ್ನವಿರಲಿದೆ ಮತ್ತು ಕೆಲವೊಂದು ಸಂರಕ್ಷಣೋಪಾಯಗಳನ್ನು ಕೈಗೊಳ್ಳಬೇಕಿದೆ ಎಂದರು. ಲಾಕ್‌ಡೌನ್ ನಿಯಮಗಳನ್ನು ರಾಜ್ಯಗಳು ಗಂಭೀರವಾಗಿ ಅನುಷ್ಟಾನಗೊಳಿಸಬೇಕಿದೆ ಮತ್ತು ಸಾಮಾಜಿಕ ಅಂತರ ನಿಯಮವನ್ನು ಅನುಸರಿಸಬೇಕು ಎಂದು ಮೋದಿ ಹೇಳಿದರು.

ಗೃಹ ಸಚಿವ ಅಮಿತ್ ಶಾ ಆಯೋಜಿಸಿದ್ದ ಸಭೆಯಲ್ಲಿ 7 ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು. ವಿಶಾಲ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ಮೋದಿ, ಸಚಿವ ಅಮಿತ್ ಶಾ ಹಾಗೂ ಇತರ ಸಚಿವರು ಅಂತರ ಕಾಯ್ದುಕೊಂಡಿದ್ದರು. ಕೊರೊನ ವೈರಸ್ ವಿರುದ್ಧದ ಹೋರಾಟಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕೆಂಬ ಮುಖ್ಯಮಂತ್ರಿಗಳ ಆಗ್ರಹಕ್ಕೆ ಪ್ರಧಾನಿ ಮೋದಿ ಪ್ರತ್ರಿಕ್ರಿಯಿಸಲಿಲ್ಲ. ದಿಲ್ಲಿಯ ನಿಝಾಮುದ್ದೀನ್‌ನಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಹಲವು ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News