ಕೊರೋನ ವಿರುದ್ಧ ಹೋರಾಟ: ಭಾರತಕ್ಕೆ 100 ಕೋಟಿ ಡಾಲರ್ ತುರ್ತು ನೆರವು ಘೋಷಿಸಿದ ವಿಶ್ವಬ್ಯಾಂಕ್

Update: 2020-04-03 03:38 GMT
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಭಾರತದಲ್ಲಿ 2500ಕ್ಕೂ ಹೆಚ್ಚು ಮಂದಿಗೆ ಕೊರೋನ ವೈರಸ್ ಸೋಂಕು ತಗುಲಿದ್ದು, 53 ಮಂದಿ ಜೀವ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಕೊರೋನ ಸಾಂಕ್ರಾಮಿಕ ವಿರುದ್ಧದ ಹೋರಾಟಕ್ಕಾಗಿ ವಿಶ್ವಬ್ಯಾಂಕ್ ಭಾರತಕ್ಕೆ 100 ಕೋಟಿ ಡಾಲರ್ ತುರ್ತು ನೆರವು ಘೋಷಿಸಿದೆ.

ಮೊದಲ ಹಂತದಲ್ಲಿ ಒಟ್ಟು 25 ದೇಶಗಳಿಗೆ 190 ಕೋಟಿ ಡಾಲರ್ ನೆರವು ನೀಡಲು ಗುರುವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದ್ದು, 40 ದೇಶಗಳಲ್ಲಿ ಹೊಸ ಕಾರ್ಯಾಚರಣೆಗೆ ತ್ವರಿತ ಸಿದ್ಧತೆ ನಡೆದಿದೆ ಎಂದು ಪ್ರಕಟಿಸಿದೆ. ಮೊದಲ ಕಂತಿನಲ್ಲಿ ಭಾರತ 100 ಕೋಟಿ ಡಾಲರ್ ಪಡೆಯುವ ಮೂಲಕ ಸಿಂಹಪಾಲು ಪಡೆದಂತಾಗಿದೆ.

ಉತ್ತಮ ಸ್ಕ್ರೀನಿಂಗ್, ಸೋಂಕಿತರ ಸಂಪರ್ಕದ ಟ್ರ್ಯಾಕಿಂಗ್ ಮತ್ತು ಪ್ರಯೋಗಾಲಯ ಪರೀಕ್ಷೆ, ವೈಯಕ್ತಿಕ ಸುರಕ್ಷಾ ಸಾಧನಗಳ ಖರೀದಿ, ಹೊಸ ಐಸೊಲೇಶನ್ ವಾರ್ಡ್‍ಗಳನ್ನು ಆರಂಭಿಸುವ ಸಲುವಾಗಿ 100 ಕೋಟಿ ಡಾಲರ್ ತುರ್ತು ಹಣಕಾಸು ನೆರವು ನೀಡಲಾಗುತ್ತಿದೆ ಎಂದು ಆಡಳಿತ ಮಂಡಳಿ ಸಭೆ ಬಳಿಕ ಪ್ರಕಟಿಸಲಾಗಿದೆ.

ದಕ್ಷಿಣ ಏಷ್ಯಾದಲ್ಲಿ ಈ ಕಂತಿನ ನೆರವು ಪಡೆದ ದೇಶಗಳ ಪೈಕಿ ಪಾಕಿಸ್ತಾನ (200 ದಶಲಕ್ಷ ಡಾಲರ್), ಅಪ್ಘಾನಿಸ್ತಾನ (100 ದಶಲಕ್ಷ ಡಾಲರ್), ಮಾಲ್ಡೀವ್ಸ್ (73 ಲಕ್ಷ ಡಲರ್), ಶ್ರೀಲಂಕಾ (128.6 ದಶಲಕ್ಷ ಡಾಲರ್) ಸೇರಿವೆ. ಕೊರೋನ ಸಾಂಕ್ರಾಮಿಕ ನಿಭಾಯಿಸುವ ನಿಟ್ಟಿನಲ್ಲಿ ಮುಂದಿನ 15 ತಿಂಗಳಲ್ಲಿ 160 ಶತಕೋಟಿ ಡಾಲರ್ ನೆರವು ಮಂಜೂರು ಮಾಡುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ವಿಶ್ವಬ್ಯಾಂಕ್ ಪ್ರಕಟಿಸಿದೆ.

ಆರ್ಥಿಕತೆ ಪುನಶ್ಚೇತನದ ಅವಧಿಯಲ್ಲಿ ಕನಿಷ್ಠಗೊಳಿಸುವುದು, ಪ್ರಗತಿಗೆ ಪೂರಕ ವಾತಾವರಣ ಸೃಷ್ಟಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೆರವು ಮತ್ತು ಬಡವರು ಮತ್ತು ದುರ್ಬಲರಿಗೆ ನೆರವು ನೀಡುವ ಅಂಶಗಳು ವಿಸ್ತೃತ ಆರ್ಥಿಕ ಯೋಜನೆಯಲ್ಲಿ ಸೇರಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News