ಕೊರೋನ ತಡೆಗಟ್ಟುವ ನಿಟ್ಟಿನಲ್ಲಿ ಮುಸ್ಲಿಮರ ಸಹಕಾರ ಅಗತ್ಯ: ಮುಖ್ಯಮಂತ್ರಿ ಯಡಿಯೂರಪ್ಪ

Update: 2020-04-03 10:39 GMT

ಬೆಂಗಳೂರು. ಎ.3: ಕೊರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಸ್ಲಿಮ್ ಸಮುದಾಯದ ಸಹಕಾರದ ಕುರಿತು ಮನವಿ ಮಾಡಲಾಗಿದ್ದು, ಅವರೆಲ್ಲ ಸಕಾರಾತ್ಮಕವಾಗಿ ಸ್ಪಂದಿಸಿ, ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಸ್ಲಿಮ್ ಸಮುದಾಯದ ಶಾಸಕರೊಂದಿಗೆ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ನಿಝಾಮುದ್ದೀನ್ ತಬ್ಲೀಗ್ ಮರ್ಕಝ್‍ಗೆ ಭೇಟಿ ನೀಡಿದ ರಾಜ್ಯದ ವ್ಯಕ್ತಿಗಳ ಮಾಹಿತಿ ನೀಡಿ, ಅವರು ವೈದ್ಯಕೀಯ ಪರೀಕ್ಷೆಗೆ ಒಳಗಾಗುವಂತೆ ಹಾಗೂ ಕ್ವಾರಂಟೈನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವೊಲಿಸಲು ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಕೊರೋನ ವೈರಸ್ ನಿಯಂತ್ರಣಕ್ಕೆ ಮುನ್ನೆಚ್ಚರಿಕೆಯೊಂದೆ ಪರಿಹಾರ. ಲಾಕ್‍ಡೌನ್ ಅವಧಿ ಮುಗಿಯುವವರೆಗೆ ಎಲ್ಲರ ಆರೋಗ್ಯದ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಾತಿ, ಧರ್ಮ ಭೇದ ಮರೆತು ಶ್ರಮಿಸಬೇಕಾಗಿದೆ ಎಂದು ಎಲ್ಲ ಮುಖಂಡರೂ ಸರ್ವಾನುಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.

ಆರೋಗ್ಯ ಕಾರ್ಯಕರ್ತರಿಗೆ ಎಲ್ಲ ರೀತಿಯ ಸಹಕಾರ ನೀಡುವಂತೆ ತಮ್ಮ ಸಮುದಾಯದ ಜನರ ಮನವೊಲಿಸುವುದಾಗಿ ಅಲ್ಪಸಂಖ್ಯಾತ ಸಮುದಾಯದ ಮುಖಂಡರು, ಶಾಸಕರು ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯದ ಎಲ್ಲ ಜನರಲ್ಲಿ ನನ್ನ ವಿನಂತಿ ಏನೆಂದರೆ, ಯಾವುದೆ ವದಂತಿಗಳಿಗೆ ಕಿವಿಗೊಡಬೇಡಿ, ನಾವೆಲ್ಲರೂ ಒಟ್ಟಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಕೊರೋನ ವಿರುದ್ಧದ ಸಮರ ಜಯಿಸೋಣ ಎಂದು ಯಡಿಯೂರಪ್ಪ ಮನವಿ ಮಾಡಿದರು.

ಕೋವಿಡ್-19 ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಕೈಗೊಳ್ಳುವ ಎಲ್ಲ ನಿರ್ಧಾರಗಳಿಗೆ ನಾವು ಬದ್ಧರಾಗಿದ್ದೇವೆ. ಪ್ರತಿಯೊಬ್ಬರೂ ಆರೋಗ್ಯ ತಪಾಸಣೆಗೆ ಒಳಗಾಗುವಂತೆ ನಾವು ಮನವೊಲಿಸುತ್ತೇವೆ. ಕೆಲವು ಗೊಂದಲಗಳಿಂದಾಗಿ ಸಾದಿಕ್ ನಗರದಲ್ಲಿ ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಯಾಗದಂತೆ ನಾವು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಮುಸ್ಲಿಮ್ ಮುಖಂಡರು ಸರಕಾರಕ್ಕೆ ತಿಳಿಸಿದರು.

ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ, ಕಂದಾಯ ಸಚಿವ ಆರ್.ಅಶೋಕ್, ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಮ್, ಮಾಜಿ ಸಚಿವರಾದ ನಸೀರ್ ಅಹ್ಮದ್, ಝಮೀರ್ ಅಹ್ಮದ್ ಖಾನ್, ಶಾಸಕರಾದ ಎನ್.ಎ.ಹಾರೀಸ್, ರಿಝ್ವಾನ್ ಅರ್ಶದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ದಿಲ್ಲಿಯ ತಬ್ಲೀಗ್ ಜಮಾತ್ ವಿಷಯವನ್ನು ಮುಂದಿಟ್ಟುಕೊಂಡು ಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರ ಆಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಬಳಿ ಪ್ರಸ್ತಾಪ ಮಾಡಿದ್ದೇವೆ. ಯಾರೂ ಗಾಬರಿಯಾಗುವ ಅಗತ್ಯವಿಲ್ಲ. ಮರ್ಕಝ್‍ಗೆ ಹೋಗಿ ಬಂದವರ ಪಟ್ಟಿ ಸಿದ್ಧಪಡಿಸಿ ಅವರನ್ನು ಮೂರು ಹಂತಗಳಲ್ಲಿ ತಪಾಸಣೆ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಅನುಮಾನ ಇರುವವರು ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಸೀದಿಗಳಲ್ಲಿ ನಮಾಝ್ ಮಾಡಬಾರದು ಎಂದು ಸರಕಾರ ಆದೇಶ ನೀಡಿದೆ. ಆದರೆ, ಅಝಾನ್ ಕೂಗಬಹುದು. ಕೆಲವು ಕಡೆ ಇದಕ್ಕೂ ಅವಕಾಶ ನಿರಾಕರಿಸಲಾಗಿದೆ. ಅದನ್ನು ಬಗೆಹರಿಸುವುದಾಗಿ ತಿಳಿಸಿದ್ದಾರೆ.

-ಸಿ.ಎಂ.ಇಬ್ರಾಹಿಮ್, ಕೇಂದ್ರದ ಮಾಜಿ ಸಚಿವ

ಮರ್ಕಝ್‍ಗೆ ಹೋಗಿ ಬಂದವರು ಸ್ವಯಂಪ್ರೇರಣೆಯಿಂದ ತಪಾಸಣೆಗೊಳಪಡಿಸುವಂತೆ ಮನವಿ ಮಾಡಲಾಗಿದೆ. ನನ್ನ ಕ್ಷೇತ್ರದ ಜೆ.ಜೆ.ನಗರದಿಂದ 11 ಮಂದಿ ಹೋಗಿದ್ದರು, ಅವರನ್ನು ನಾನೇ ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಿದೆ, ನೆಗೆಟಿವ್ ವರದಿ ಬಂದಿದೆ. ಪರೀಕ್ಷಿಸಿಕೊಳ್ಳುವದರಲ್ಲಿ ಯಾವುದೆ ತಪ್ಪಿಲ್ಲ. ನಿನ್ನೆ ಸಾದಿಕ್ ಪಾಳ್ಯಗೆ ನಾನು ಹೋಗಿ ಬಂದೆ, ಅಲ್ಲಿ ಆರೋಗ್ಯ ಸಮೀಕ್ಷೆಗೆ ಸರಕಾರದ ಅನುಮತಿ ಪಡೆದು ಆಶಾ ಕಾರ್ಯಕರ್ತೆಯರು ಹೋಗಬೇಕಿತ್ತು. ಆದರೆ, ಅಲ್ಲಿ ಎನ್‍ಆರ್‍ಸಿ, ಎನ್‍ಪಿಆರ್ ನಲ್ಲಿ ಕೇಳುವಂತೆ ಮನೆಯಲ್ಲಿ ಎಷ್ಟು ಜನರಿದ್ದಾರೆ ಎಂದು ಸಮೀಕ್ಷೆ ಮಾಡಲು ಮುಂದಾದಾಗ ಈ ಘಟನೆ ಜರುಗಿದೆ.

-ಬಿ.ಝೆಡ್.ಝಮೀರ್ ಅಹ್ಮದ್ ಖಾನ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News