ಅತಿಥಿ ಉಪನ್ಯಾಸಕರ ಸಂಬಳ ಶೀಘ್ರ ಬಿಡುಗಡೆಗೆ ಎಸ್ಐಒ ಆಗ್ರಹ
ಬೆಂಗಳೂರು, ಎ.3: ಅತಿಥಿ ಉಪನ್ಯಾಸಕರ ಐದು ತಿಂಗಳ ಬಾಕಿ ಸಂಬಳವನ್ನು ಸರಕಾರ ಕೂಡಲೇ ಬಿಡುಗಡೆ ಮಾಡಬೇಕೆಂದು ಎಸ್ಐಒ ಆಗ್ರಹಿಸಿದೆ.
ರಾಜ್ಯ ಸರಕಾರ ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರಿಗೆ ಕಳೆದ ಐದು ತಿಂಗಳಿನಿಂದ ಸಂಬಳ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಅವರು ಆರ್ಥಿಕವಾಗಿ ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಅವರಿಗೆ ಕೂಡಲೇ ರಾಜ್ಯ ಸರಕಾರ ಐದು ತಿಂಗಳ ಸಂಬಳವನ್ನು ಬಿಡುಗಡೆಗೊಳಿಸಬೇಕು.
ಸುಮಾರು 412 ಸರಕಾರಿ ಪ್ರಥಮ ದರ್ಜೆ ಕಾಲೇಜಿನ 14,564 ಅತಿಥಿ ಉಪನ್ಯಾಸಕರಿಗೆ ಐದು ತಿಂಗಳ ಸಂಬಳವನ್ನು ಸರಕಾರ ನೀಡಿಲ್ಲ. ಈ ರೀತಿ ಸರಕಾರ ದೀರ್ಘ ಕಾಲಕ್ಕೆ ಸಂಬಳವನ್ನು ತಡೆದಿಟ್ಟುಕೊಂಡರೆ ಉಪನ್ಯಾಸಕರ ಜೀವನ ಸಾಗಿಸುವುದು ಕಷ್ಟವಾಗಲಿದೆ.
ಕೊರೋನ ಸೋಂಕಿನಿಂದಾಗಿ ರಾಜ್ಯಾದ್ಯಂತ ಲಾಕ್ ನ್ ಇದೆ. ಇದೀಗ ಸಂಬಳವನ್ನೆ ನಂಬಿ ಜೀವನ ಸಾಗಿಸಬೇಕಾದ ಅತಿಥಿ ಉಪನ್ಯಾಸಕರು ಬಹಳಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಉಪನ್ಯಾಸಕರ ಸಂಬಳವನ್ನು ಕೂಡಲೇ ಬಿಡುಗಡೆ ಮಾಡುವ ಮೂಲಕ ಅವರ ಬದುಕಿನ ಹಕ್ಕನ್ನು ಖಾತ್ರಿಪಡಿಸಬೇಕೆಂದು ಎಸ್ಐಒನ ಕಾರ್ಯದರ್ಶಿ ಮುಹಮ್ಮದ್ ಪೀರ್ ಲಟಗೇರಿ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.