×
Ad

ಇನ್ನೂ 2 ಲಕ್ಷ ಪಿಪಿಇ ಕಿಟ್ ಖರೀದಿಗೆ ಕಾರ್ಯಾದೇಶ ನೀಡಲು ಸಿಎಂ ಬಿಎಸ್‌ವೈ ಸೂಚನೆ

Update: 2020-04-03 17:35 IST

ಬೆಂಗಳೂರು, ಎ. 3: ಕೊರೋನ ವೈರಸ್ ಸೋಂಕಿನ ನಿಯಂತ್ರಣಕ್ಕೆ ಈಗಾಗಲೇ 1 ಲಕ್ಷ ಪಿಪಿಇ ಕಿಟ್‍ಗಳನ್ನು ಪೂರೈಕೆಗೆ ಕಾರ್ಯಾದೇಶ ನೀಡಲಾಗಿದೆ. ಇನ್ನೂ ಎರಡು ಲಕ್ಷ ಪಿಪಿಇ ಕಿಟ್‍ಗಳ ಪೂರೈಕೆಗೆ ಕಾರ್ಯಾದೇಶ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶುಕ್ರವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಕೊರೋನ ವೈರಸ್ ಸೋಂಕಿನ ನಿಯಂತ್ರಣ ಸಂಬಂಧ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಎಲ್ಲ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆಯಾ ಜಿಲ್ಲೆಗಳಿಗೆ ಭೇಟಿ ನೀಡಿ ಕೊರೋನ ವೈರಸ್ ಸೋಂಕಿನ ನಿಯಂತ್ರಣ ಮತ್ತು ಮುನ್ನಚ್ಚರಿಕೆ ಕ್ರಮಗಳನ್ನು ಪರಿಶೀಲಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಓಲಾ, ಉಬರ್ ಕಂಪೆನಿಗಳ ನೆರವಿನೊಂದಿಗೆ ತುರ್ತು ಸಂದರ್ಭದಲ್ಲಿ ವಿವಿಧ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ವಾಹನ ಒದಗಿಸುವ ಬಗ್ಗೆ ಸೂಚಿಸಲಾಗಿದೆ. 15 ಲಕ್ಷ ಕಟ್ಟಡ ಕಾರ್ಮಿಕರ ಖಾತೆಗೆ ಈಗಾಗಲೇ 1 ಸಾವಿರ ರೂಪಾಯಿಗಳನ್ನು ಜಮಾ ಮಾಡಲಾಗಿದೆ. ಅವರಿಗೆ ಹೆಚ್ಚುವರಿಯಾಗಿ ಇನ್ನೂ 1 ಸಾವಿರ ರೂ.ಜಮಾ ಮಾಡಲು ಕಾರ್ಮಿಕ ಇಲಾಖೆಗೆ ಸೂಚಿಸಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಉಚಿತ ಆಹಾರ ವಿತರಣೆ ಕ್ರಮ ಬದ್ಧವಾಗಿ ಆಗುತ್ತಿಲ್ಲ. ಅದನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಬಗ್ಗೆ ಬೆಂಗಳೂರಿನ ಸಚಿವರು ಮತ್ತು ಶಾಸಕರುಗಳೊಂದಿಗೆ ಹಾಗೂ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಯಡಿಯೂರಪ್ಪ ಮಾಹಿತಿ ನೀಡಿದರು.

ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್.ಅಶೋಕ್, ಗೋಪಾಲಯ್ಯ, ಸುರೇಶ್ ಕುಮಾರ್, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಶಾಸಕ ಎಸ್. ಆರ್. ವಿಶ್ವನಾಥ್ ಹಾಗೂ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಹಾಜರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News