ಕೊರೋನ ರಕ್ಷಣಾ ಉಪಕರಣಕ್ಕೆ ಮೀಸಲಿಟ್ಟಿದ್ದ 50 ಲಕ್ಷ ರೂ. ಪಿಎಂ ಕೇರ್ಸ್ ನಿಧಿಗೆ ವರ್ಗಾವಣೆ

Update: 2020-04-04 15:31 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಎ.4: ಆಡಳಿತ ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ವಿಭಾಗವು ಭಾರತ ಡೈನಾಮಿಕ್ಸ್ ನೀಡಿದ್ದ 50 ಲಕ್ಷ ರೂ. ಗಳನ್ನು ಕೊರೋನ ವೈರಸ್ ಸೋಂಕಿತರ ಚಿಕಿತ್ಸೆಗಾಗಿ ವೈಯಕ್ತಿಕ ರಕ್ಷಣಾ ಉಪಕರಣ (ಪಿಪಿಇ)ಗಳ ಖರೀದಿಯ ಮೂಲಉದ್ದೇಶಕ್ಕೆ ಬಳಸದೆ ಪಿಎಂ-ಕೇರ್ಸ್ ನಿಧಿಗೆ ವರ್ಗಾವಣೆ ಗೊಳಿಸಿವೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ಯ ನಿವಾಸಿ ವೈದ್ಯರ ಸಂಘ (ಆರ್‌ಡಿಎ)ವು ಆರೋಪಿಸಿದೆ ಎಂದು Thehindu.com ವರದಿ ಮಾಡಿದೆ. ಆರೋಪವನ್ನು ನಿರಾಕರಿಸಿರುವ ಏಮ್ಸ್, ಅಸಲಿಗೆ ಭಾರತ ಡೈನಾಮಿಕ್ಸ್‌ನಿಂದ ಯಾವುದೇ ಹಣ ಬಂದೇ ಇಲ್ಲ ಎಂದು ಹೇಳಿದೆ.

‘ನಾವು ಆಡಳಿತ ವರ್ಗವನ್ನು ಭೇಟಿಯಾಗಿ ನಮ್ಮ ಕಳವಳಗಳನ್ನು ತಿಳಿಸಿದ್ದೇವೆ. ಎಲ್ಲ ಪಿಪಿಇಗಳು ಆರೋಗ್ಯ ಸಚಿವಾಲಯವು ನಿಗದಿ ಗೊಳಿಸಿರುವ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿರ ಬೇಕು ಮತ್ತು ವೈದ್ಯರನ್ನಾಗಲೀ ಇತರ ರೋಗಿಗಳನ್ನಾಗಲೀ ಕೊರೋನ ವೈರಸ್ ಸೋಂಕಿನ ಅಪಾಯಕ್ಕೆ ತಳ್ಳಕೂಡದು. ಮಾನದಂಡಗಳಿಗೆ ಅನುಗುಣವಾಗಿಲ್ಲದ ಈಗಿನ ‘ಜುಗಾಡ್’ ಪಿಪಿಇಗಳು ಉಪಯೋಗವಿಲ್ಲ’ ಎಂದು ಹೇಳಿದ ಆರ್‌ಡಿಎ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾಜಕುಮಾರ ಟಿ. ಅವರು,ಪಿಪಿಇ ಖರೀದಿಯ ಹಣವನ್ನು ಪ್ರಧಾನಿ ನಿಧಿಗೆ ವರ್ಗಾಯಿಸುವುದು ಗಂಭೀರ ವಿಷಯವಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿರುವ ಏಮ್ಸ್, ಈ ಆರೋಪವು ನಿರಾಧಾರವಾಗಿದೆ. ಭಾರತ ಡೈನಾಮಿಕ್ಸ್‌ನಿಂದ ಯಾವುದೇ ಹಣ ಏಮ್ಸ್‌ಗೆ ಬಂದಿಲ್ಲ ಎಂದಿದೆ.

ಏಮ್ಸ್ ತನ್ನ ಝಜ್ಜರ್ ಆಸ್ಪತ್ರೆಯಲ್ಲಿ 150 ಶಂಕಿತ ಕೊರೋನ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ ಹಾಗೂ ತನ್ನ ವೈದ್ಯಕೀಯ ಸಿಬ್ಬಂದಿಗೆ ಸುರಕ್ಷತೆಯ ಜೊತೆಗೆ ತನ್ನ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ಒದಗಿಸುವುದಕ್ಕೆ ಬದ್ಧವಾಗಿದೆ ಎಂದು ಅದು ತಿಳಿಸಿದೆ.

ಹೈದರಾಬಾದ್‌ನ ಗಾಂಧಿ ಆಸ್ಪತ್ರೆಯಲ್ಲಿ ಇತ್ತೀಚಿಗೆ ಕೊರೋನ ವೈರಸ್ ರೋಗಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಆರ್‌ಡಿಎ ಕೇಂದ್ರ ಸರಕಾರಕ್ಕೆ ಪತ್ರವನ್ನು ಬರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News