ಜಗಜೀವನ್ ರಾಮ್ ಆದರ್ಶ ಪಾಲಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಕರೆ
ಬೆಂಗಳೂರು, ಎ. 5: ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ ಆದರ್ಶ, ಅವರ ವಿಚಾರಧಾರೆಗಳು ಎಂದೆಂದಿಗೂ ಮಾದರಿಯಾಗಿದ್ದು, ಅವರ ಆದರ್ಶಗಳನ್ನು ಪಾಲಿಸಲು ಯುವಪೀಳಿಗೆ ಅಧ್ಯಯನಶೀಲರಾಗಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಕರೆ ನೀಡಿದ್ದಾರೆ.
ರವಿವಾರ ವಿಧಾನಸೌಧದ ಆವರಣದಲ್ಲಿ ಡಾ.ಬಾಬು ಜಗಜೀವನ್ ರಾಮ್ ಅವರ ಜನ್ಮ ದಿನದ ಅಂಗವಾಗಿ ಅವರ ಪುತ್ಥಳಿ ಬಳಿ ಇದ್ದ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಗೌರವ ನಮನ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯನಂತರ ದೇಶದಲ್ಲಿ ಆಹಾರ ಸಮಸ್ಯೆ ತಲೆದೋರಿ ಜನತೆ ತಲ್ಲಣಗೊಂಡ ಸಂದರ್ಭ ಸುಧಾರಿತ ಬಿತ್ತನೆ ಬೀಜಗಳ ತಳಿಗಳನ್ನು ಬಳಕೆ ಮಾಡುವ ಮೂಲಕ ಹಸಿರು ಕೃಷಿ ವಲಯದಲ್ಲಿ ಪ್ರಗತಿ ಸಾಧಿಸಿ, ಕ್ರಾಂತಿ ಮಾಡಿದರು ಎಂದು ಸ್ಮರಿಸಿದರು.
ಆಹಾರ ಉತ್ಪಾದನೆಯಲ್ಲಿ ಅಪರಿಮಿತ ಸಾಧನೆಗೈದ ಅವರು ಜನತೆ ಹಸಿವನ್ನು ನೀಗಿಸಲಾಯಿತು. ಜಗಜೀವನ್ ರಾಮ್ ಅವರು ಹಸಿರು ಕ್ರಾಂತಿಯ ಹರಿಕಾರರೆಂದೆ ಹೆಸರುವಾಸಿಯಾದರು. ರಾಜ್ಯ ಹಾಗೂ ಕೇಂದ್ರ ಸರಕಾರದ ಕೃಷಿ ಸಚಿವರಾಗಿ ಅಮೋಘ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ರಕ್ಷಣಾ ಸಚಿವರಾಗಿ ಮಾಡಿದ ಸಾಧನೆ ಉಲ್ಲೇಖನೀಯ. ರೈತ ಮತ್ತು ಯೋಧರ ಸಲುವಾಗಿ ಅಪಾರವಾಗಿ ಶ್ರಮಿಸಿದ್ದಾರೆ ಎಂದು ಯಡಿಯೂರಪ್ಪ ನೆನಪು ಮಾಡಿಕೊಂಡರು.
ದೇಶ ಕಂಡ ಅತ್ಯಂತ ಅಪರೂಪದ ನಾಯಕರಾದ ಜಗಜೀವನ್ ರಾಮ್ ಅವರು ಶೋಷಿತರ ಏಳಿಗೆಗಾಗಿ ಅಪರಿಮಿತ ಶ್ರಮಿಸಿದ್ದು, ಬಡವರ ಆಶಾಕಿರಣವಾಗಿದ್ದಾರೆ. ಯುವ ಪೀಳಿಗೆ ಜಗಜೀವನ್ ರಾಮ್ ಅವರ ಆದರ್ಶಗಳನ್ನು ಅಧ್ಯಯನ ನಡೆಸಬೇಕು. ಅಲ್ಲದೆ, ಅವರ ಆದರ್ಶಗಳನ್ನು ಅನುಸರಿಸಬೇಕು. ಸಾಮಾಜಿಕ ಹಾಗೂ ರಾಜಕೀಯ ವಿಚಾರಧಾರೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಯಡಿಯೂರಪ್ಪ ಸಲಹೆ ಮಾಡಿದರು.
ಈ ಸಂದರ್ಭ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದ ಎ.ನಾರಾಯಣಸ್ವಾಮಿ, ಮಾಜಿ ಸಚಿವ ಎಚ್. ಆಂಜನೇಯ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್, ಸಲಹೆಗಾರ ಇ.ವೆಂಕಟಯ್ಯ, ಬಿಬಿಎಂಪಿ ಮೇಯರ್ ಅನಿಲ್ ಕುಮಾರ್ ಸೇರಿದಂತೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಹಾಜರಿದ್ದರು.