ಲಾಕ್‍ಡೌನ್ ವಿಸ್ತರಿಸುವ ಬಗ್ಗೆ ಸಮಗ್ರ ಪರಿಶೀಲನೆ: ಸಿಎಂ ಯಡಿಯೂರಪ್ಪ

Update: 2020-04-05 11:04 GMT

ಬೆಂಗಳೂರು, ಎ. 5: ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ಅತ್ಯಂತ ಕ್ಷಿಪ್ರವಾಗಿ ಏರಿಕೆಯಾಗುತ್ತಿರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಾರ್ವಜನಿಕರು ಸರಕಾರ ಘೋಷಿಸಿರುವ ಲಾಕ್‍ಡೌನ್ ಅನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಇಂದಿಲ್ಲಿ ಮನವಿ ಮಾಡಿದ್ದಾರೆ.

ರವಿವಾರ ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವಿಶ್ವದಾದ್ಯಂತ ಕೊರೋನ ವೈರಸ್ ಸೋಂಕಿನಿಂದ ಉಂಟಾಗುತ್ತಿರುವ ಹಾನಿ ಎಲ್ಲರಿಗೂ ತಿಳಿದಿದೆ. ಪ್ರಧಾನಿ ಮೋದಿ ಅವರು ದೇಶದ ಜನರ ಜೀವ ರಕ್ಷಣೆಗಾಗಿ ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಿದ್ದು, ನಮ್ಮ ರಾಜ್ಯದಲ್ಲಿಯೂ ಬೀದರ್, ಮೈಸೂರು, ಮಂಗಳೂರು, ಬೆಂಗಳೂರು ನಗರ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಗಣನೀಯವಾಗಿ ಹೆಚ್ಚುತ್ತಿದೆ. ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕಾಗಿ ಗಡಿ ಪ್ರದೇಶಗಳನ್ನು ಮುಚ್ಚುವುದು, ಸಾರ್ವಜನಿಕವಾಗಿ ಹೆಚ್ಚು ಹೆಚ್ಚು ಓಡಾಡುವಂತಹ ಪ್ರದೇಶಗಳಿಗೆ ನಿರ್ಬಂಧಗಳನ್ನು ವಿಧಿಸಿರುವುದು, ಧಾರ್ಮಿಕ ಸ್ಥಳಗಳಲ್ಲಿ ಜನರು ಸೇರದಂತೆ ನಿರ್ಬಂಧಿಸುವುದುರ ಜತೆಗೆ ಕೊರೋನ ವೈರಸ್ ಸೋಂಕು ಹರಡದಂತೆ ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ.

ರಾಜ್ಯದ ಜನತೆ ಲಾಕ್‍ಡೌನ್ ಹಿಂದಿನ ಆಶಯವನ್ನು ಹಾಗೂ ಲಾಕ್‍ಡೌನ್ ಉಲ್ಲಂಘನೆಯಿಂದ ದೇಶಕ್ಕೆ ಎದುರಾಗಬಹುದಾದ ಅಪಾಯವನ್ನ ಅರಿತುಕೊಂಡು ಕಟ್ಟುನಿಟ್ಟಾಗಿ ಲಾಕ್‍ಡೌನ್ ಆದೇಶ ಪಾಲಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

ಪಾಶ್ಚಿಮಾತ್ಯ ದೇಶಗಳಲ್ಲಿ ಈಗಾಗಲೇ ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕೆ ಸಿಗದ ಸ್ಥಿತಿ ತಲುಪಿದೆ. ಪ್ರಸ್ತುತ ಪ್ರಧಾನಿ ಮೋದಿಯವರು ಸೂಚಿಸಿರುವ ದೇಶ ವ್ಯಾಪಿ ಲಾಕ್‍ಡೌನ್ ಅವಧಿ ಎ.14ರಂದು ಮುಕ್ತಾಯಗೊಳ್ಳುತ್ತಿದ್ದು, ಈ ಲಾಕ್‍ಡೌನ್ ವಿಸ್ತರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ. ಆದುದರಿಂದ ಈ ಕುರಿತು ಸಲಹೆ-ಸೂಚನೆ ನೀಡಬೇಕು ಎಂದು ಯಡಿಯೂರಪ್ಪ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News