ಕೊರೋನ ಜಾಗೃತಿಗೆ ಶಿಕ್ಷಕರ ಬಳಕೆ: ಶಿಕ್ಷಣ ಇಲಾಖೆ

Update: 2020-04-05 11:16 GMT

ಬೆಂಗಳೂರು, ಎ.5: ಕೋವಿಡ್ 19 ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನ ಸಾಮಾನ್ಯರಿಗೆ ಮಾಹಿತಿ ನೀಡಲು ವಿವಿಧ ಇಲಾಖೆಯ ಅಧಿಕಾರಿಗಳ ಜತೆಗೆ ಶಿಕ್ಷಕರು ಕಾರ್ಯಕ್ಕಿಳಿಯಲಿದ್ದಾರೆ. 

ಬಿಬಿಎಂಪಿ ವ್ಯಾಪ್ತಿಯ ಹೋಂ ಕ್ವಾರಂಟೇನ್‍ನಲ್ಲಿ ಇರುವವರ ಮೇಲೆ ನಿಗಾ ಇಡಲು ರಚಿಸಿರುವ ಪ್ರಾಥಮಿಕ ಸಂಪರ್ಕ ತಂಡ, ದ್ವಿತೀಯ ಸಂಪರ್ಕ ತಂಡದಲ್ಲಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, ಗ್ರಾಮೀಣ ಭಾಗದಲ್ಲೂ ಆರೋಗ್ಯ ಇಲಾಖೆ ಸಹಿತ ವಿವಿಧ ಇಲಾಖೆ ಅಧಿಕಾರಿಗಳ ಜತೆ ಶಿಕ್ಷಕರೂ ಕೊರೋನ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕು ಎಂಬ ಸಂದೇಶವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ತನ್ನೆಲ್ಲಾ ಜಿಲ್ಲಾ ಉಪ ನಿರ್ದೇಶಕರ ಮೂಲಕ ಶಿಕ್ಷಕರಿಗೆ ರವಾನಿಸಿದೆ.

ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಶಿಕ್ಷಕರಿದ್ದು, ಅದರಲ್ಲಿ ಶೇ.40 ಶಿಕ್ಷಕರು, ಶೇ.60 ರಷ್ಟು ಶಿಕ್ಷಕಿಯರು ಎಂಬ ಅಂಕಿ ಅಂಶವನ್ನು ಈ ಹಿಂದೆಯೇ ಇಲಾಖೆ ನೀಡಿತ್ತು. ಎಲ್ಲ ಶಾಲೆಗಳಿಗೂ ಸದ್ಯ ರಜೆ ನೀಡಲಾಗಿದೆ. ಜತೆಗೆ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳ ಪ್ರಸಕ್ತ ಸಾಲಿನ ಪರೀಕ್ಷೆಯನ್ನು ರದ್ದು ಮಾಡಿ ಎಲ್ಲ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡಿ ಆದೇಶಿಸಲಾಗಿದೆ. 

ಕೆಲ ಶಾಲೆಗಳಲ್ಲಿ ಬಿಸಿಯೂಟದ ಆಹಾರ ಪದಾರ್ಥ ವಿತರಣೆ ಕಾರ್ಯ ಆರಂಭವಾಗಿದೆ. ಹೀಗಾಗಿ, ಶಾಲಾ ಮುಖ್ಯ ಶಿಕ್ಷಕರು, ಕೆಲವು ಸಹ ಶಿಕ್ಷಕರು ಈ ಕಾರ್ಯದಲ್ಲಿದ್ದಾರೆ. ಇದರ ಹೊರತಾಗಿ ಸಾವಿರಾರು ಸಂಖ್ಯೆಯಲ್ಲಿ ಶಿಕ್ಷಕರು ಇದ್ದಾರೆ. ಅವರಲ್ಲಿ 50 ವರ್ಷ ಮೇಲ್ಪಟ್ಟವರಿದ್ದಾರೆ. ಆರೋಗ್ಯದ ಸಮಸ್ಯೆ ಹೊಂದಿರುವವರು, ಕೋವಿಡ್19 ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವವರನ್ನು ಹೊರತುಪಡಿಸಿ, ಉಳಿದ ಶಿಕ್ಷಕರನ್ನು ಕೊರೋನ ಜಾಗೃತಿಗೆ ಬಳಸಿಕೊಳ್ಳಲು ಉಪ ನಿರ್ದೇಶಕರ ಮೂಲಕ ಸೂಚನೆ ನೀಡಲಾಗಿದೆ.

ಕೊರೋನ ವಿರುದ್ಧ ಹೋರಾಟದಲ್ಲಿ ಶಿಕ್ಷಕರು ಬೇರೆ ಬೇರೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರ ಜತೆ ಸೇರಿ ಸೇವೆ ಸಲ್ಲಿಸಲಿದ್ದಾರೆ. ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎಂಬುದನ್ನು ಸ್ಥಳಿಯಾಡಳಿತ ಸೂಚನೆ ಮೇರೆಗೆ ನಡೆಯಲಿದ್ದಾರೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

ಶಿಕ್ಷಕರ ಕೆಲಸವೇನು?: ಶಿಕ್ಷಕಿಗೆ ಸೂಚಿಸಿದ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವುದು ಕಡ್ಡಾಯ. ಆ ಪ್ರದೇಶದ ಕುಡಿಯುವ ನೀರು, ಆಹಾರ ಪದಾರ್ಥ, ದಿನಸಿ, ಸ್ವಚ್ಛತೆ, ಆರೋಗ್ಯದ ಸಮಸ್ಯೆ ಸಹಿತವಾಗಿ ವಿವಿಧ ಸಮಸ್ಯೆಗಳ ಕುರಿತು ಜನರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಅವುಗಳಿಗೆ ಸಂಬಂಧಿಸಿದ ಕಂದಾಯ ಇಲಾಖೆ ಅಧಿಕಾರಿ, ಅಭಿಯಂತರರು, ಗ್ರಾಮಲೆಕ್ಕಿಗ, ಆಶಾ ಕಾರ್ಯಕರ್ತೆಯರು, ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗಳು ಪರಿಹಾರವಾಗುವಂತೆ ನೋಡಿಕೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News