ಖಾಸಗಿ ಆಸ್ಪತ್ರೆಗಳು ಕೊರೋನ ವಿರುದ್ಧದ ಹೋರಾಟಕ್ಕೆ ಕೈಜೋಡಿಸಲಿ : ಜಗದೀಶ್ ಶೆಟ್ಟರ್

Update: 2020-04-05 11:27 GMT

ಧಾರವಾಡ, ಎ.5: ಕೊರೋನ ವಿರುದ್ಧದ ಹೋರಾಟಕ್ಕೆ ಸರಕಾರದೊಂದಿಗೆ ಖಾಸಗಿ ವೈದ್ಯರು ಕೈಜೋಡಿಸಬೇಕು. ತಮ್ಮ ಹೊರ ರೋಗಿಗಳ ವಿಭಾಗದ ಮತ್ತು ಉಳಿದ ಸಾಮಾನ್ಯ ಖಾಯಿಲೆಗಳ ಚಿಕಿತ್ಸೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಬಾರದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ  ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು ಹಾಗೂ ಖಾಸಗಿ ವೈದ್ಯರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಭಾರತೀಯ ವೈದ್ಯಕೀಯ ಸಂಘ ಮತ್ತು ಎಲ್ಲ ಕೆಪಿಎಂಇ ನೋಂದಾಯಿತ ಆಸ್ಪತ್ರೆಗಳ ವೈದ್ಯರು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಉಂಟಾಗುತ್ತಿರುವ ಜನ ಸಂದಣಿಯನ್ನು ಕಡಿಮೆ ಮಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಕೊರೋನ ನಿಯಂತ್ರಿಸಲು ಪ್ರಧಾನಮಂತ್ರಿ 21 ದಿನಗಳ ಲಾಕ್‍ಡೌನ್ ಅನಿವಾರ್ಯವಾಗಿ ಘೋಷಿಸಿದ್ದಾರೆ. ಅದನ್ನು ಪಾಲಿಸಲು ಮುಖ್ಯಮಂತ್ರಿ ಕೂಡಾ ಉಪಕ್ರಮಗಳನ್ನು ಕೈಗೊಂಡಿದ್ದಾರೆ. ವಿವಿಧ ಇಲಾಖೆಗಳು, ವೈದ್ಯರು, ಆರೋಗ್ಯ ಸಿಬ್ಬಂದಿ, ಜಿಲ್ಲಾಡಳಿತ ದಿನದ 24 ತಾಸುಗಳ ಕಾಲ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.

ಬಹುತೇಕ ಖಾಸಗಿ ಆಸ್ಪತ್ರೆಗಳು ಸ್ಥಗಿತಗೊಂಡಿರುವುದರಿಂದ ಸರಕಾರಿ ಆಸ್ಪತ್ರೆಗಳ ಮೇಲೆ ಸಾಮರ್ಥ್ಯಕ್ಕಿಂತ ಹೆಚ್ಚು ಹೊರೆ ಬೀಳುತ್ತಿದೆ. ಸರಕಾರದ ವೈದ್ಯರು ಅಪಾಯವನ್ನು ಲೆಕ್ಕಿಸದೆ ಕಾರ್ಯನಿರ್ವಹಿಸುತ್ತಿದ್ದಾರೆ. ಐಎಂಎ ಹಾಗೂ ಕೆಪಿಎಂಇಯಲ್ಲಿ ನೋಂದಣಿಯಾಗಿರುವ ಎಲ್ಲ ಖಾಸಗಿ ನರ್ಸಿಂಗ್ ಹೋಮ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿದರೆ ಜನರಿಗೆ ಸಮಸ್ಯೆಗಳು ಆಗುವುದಿಲ್ಲ. ಆಸ್ಪತ್ರೆ ನಿರ್ವಹಣೆಗೆ ಸರಕಾರ ಸಿಬ್ಬಂದಿಗೆ ಪಾಸ್‍ಗಳನ್ನು ನೀಡಲಿದೆ ಅಗತ್ಯ ಬಿದ್ದರೆ ಪೊಲೀಸ್ ಭದ್ರತೆ ಒದಗಿಸಲು ಸಿದ್ಧವಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ಶಾಸಕ ಅರವಿಂದ ಬೆಲ್ಲದ್ ಮಾತನಾಡಿ, ಖಾಸಗಿ ಆಸ್ಪತ್ರೆಗಳಿಗೆ ಸೇವೆ ನೀಡಲು ತೊಂದರೆಗಳಿದ್ದರೆ ಜಿಲ್ಲಾಡಳಿತ ಅವುಗಳನ್ನು ಪರಿಹಾರ ಮಾಡುತ್ತದೆ. ತುರ್ತು ಹಾಗೂ ಸಾಮಾನ್ಯ ಚಿಕಿತ್ಸೆಗಳು ಜನರಿಗೆ ಸಿಗಬೇಕು. ವೈದ್ಯರು ಲಾಭದ ಉದ್ದೇಶವಿಲ್ಲದೆ ಸೇವೆ ನೀಡಬೇಕು ಎಂದು ಮನವಿ ಮಾಡಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗೌರವ್ ಗುಪ್ತಾ ಮಾತನಾಡಿ, ಕೋವಿಡ್-19 ಪ್ರಕರಣಗಳನ್ನು ಸರಕಾರಿ ಆಸ್ಪತ್ರೆಗಳು ನಿಭಾಯಿಸುತ್ತಿವೆ. ಧಾರವಾಡ ವ್ಯವಸ್ಥಿತ ಜಿಲ್ಲೆಯಾಗಿದೆ. ವೈದ್ಯಕೀಯ ಸೌಕರ್ಯಗಳು ಉತ್ತಮವಾಗಿವೆ ಎಂದರು.

ಸಂಕಷ್ಟದ ಸಂದರ್ಭದಲ್ಲಿ ಖಾಸಗಿ ವೈದ್ಯರು ಸರಕಾರದ ಜೊತೆಗೆ ನಿಲ್ಲಬೇಕು. ಸಮಸ್ಯೆಗಳು ಇದ್ದೇ ಇರುತ್ತವೆ ಅವುಗಳ ನಡುವೆ ಕಾರ್ಯನಿರ್ವಹಿಸಬೇಕು. 130 ಕೋಟಿ ಜನಸಂಖ್ಯೆ ಹೊಂದಿರುವ ಭಾರತ ದೇಶ ಕೊರೋನವನ್ನು ಹೇಗೆ ಎದುರಿಸಲಿದೆ ಎಂದು ಜಗತ್ತಿನ ಇತರ ರಾಷ್ಟ್ರಗಳು ನಮ್ಮತ್ತ ನೋಡುತ್ತಿವೆ ಎಂದು ಅವರು ತಿಳಿಸಿದರು.

ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರಠಾಣಿ ಮಾತನಾಡಿ, ಕಿಮ್ಸ್ ಆಸ್ಪತ್ರೆಯು ಕೊರೊನಾ ಚಿಕಿತ್ಸೆಯನ್ನು ಸಮರ್ಪವಾಗಿ ನೀಡುತ್ತಿದೆ. ನ್ಯುಮೋನಿಯಾ ಇದ್ದರೆ ಮಾತ್ರ ಕೋವಿಡ್ ಪರೀಕ್ಷೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನವಿದೆ. ಆದರೆ ಖಾಸಗಿ ಆಸ್ಪತ್ರೆಗಳು ಎಲ್ಲ ಪ್ರಕರಣಗಳನ್ನು ಕಿಮ್ಸ್‍ಗೆ ವರ್ಗಾಯಿಸುತ್ತಿವೆ ಇದರಿಂದ ಕಾರ್ಯದ ಒತ್ತಡ ಹೆಚ್ಚಾಗಿದೆ ಎಂದರು.
ಹುಬ್ಬಳ್ಳಿ ಐಎಂಎ ಅಧ್ಯಕ್ಷ ಡಾ.ಕ್ರಾಂತಿಕಿರಣ್ ಮಾತನಾಡಿ, ಕೊರೋನ ತಡೆಗೆ ಸರಕಾರ, ಜಿಲ್ಲಾಡಳಿತ ಅದ್ಭುತ ಸೇವೆ ನೀಡುತ್ತಿವೆ. ಸ್ಯಾನಿಟೈಜರ್ ಮತ್ತು ಮಾಸ್ಕ್‍ಗಳ ಸಮಸ್ಯೆ ಪರಿಹಾರವಾಗಿದೆ. ಖಾಸಗಿ ವೈದ್ಯರು ಕೂಡ ಸೇವೆ ಪುನರಾರಂಭ ಮಾಡಲು ನಿರ್ಧರಿಸಲಾಗಿದೆ ಎಂದರು.
ಬಹುತೇಕ ಹೊರರೋಗಿಗಳ ವಿಭಾಗದ ಚಿಕಿತ್ಸೆ ನೀಡಲಾಗುತ್ತಿದೆ. ಶೇ.80ರಷ್ಟು ಎಲ್ಲ ಸೇವೆಗಳನ್ನು ನೀಡಲು ವೈದ್ಯರಿಗೆ ಮನವಿ ಮಾಡಲಾಗಿದೆ. ಜನಸಂದಣಿ ನಿಯಂತ್ರಣ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸವಾಲಾಗಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಎಸ್‍ಡಿಎಂ ಆಸ್ಪತ್ರೆಯ ಡಾ.ಕಿರಣ ಹೆಗಡೆ, ಡಾ.ಸುಧೀರ್ ಜಂಬಗಿ,  ಡಾ.ಸುಭಾಶ್ ಭಬ್ರುವಾಡ, ಡಾ.ಆನಂದ ಪಾಂಡುರಂಗಿ, ಡಾ.ಸುಶ್ರೂತ, ಡಾ.ಮಂಜುನಾಥ ಮತ್ತಿತರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News