ಕೆ.ಆರ್.ಪುರ: 40 ಸಾವಿರ ಕುಟುಂಬಗಳಿಗೆ ಆಹಾರಧಾನ್ಯ ವಿತರಣೆಗೆ ಚಾಲನೆ

Update: 2020-04-05 11:52 GMT

ಬೆಂಗಳೂರು, ಎ.5: ಕೋವಿಡ್-19 ನಿಯಂತ್ರಣದ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಿಸಿರುವುದರಿಂದ ಬಡವರಿಗೆ ದಿನನಿತ್ಯದ ಜೀವನಕ್ಕೆ ಯಾವುದೆ ರೀತಿಯ ತೊಂದರೆಯಾಗದಂತೆ ರಾಜ್ಯ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ನೇತೃತ್ವದಲ್ಲಿ ಸುಮಾರು 40 ಸಾವಿರ ಕುಟುಂಬಗಳಿಗೆ ಆಹಾರಧಾನ್ಯಗಳನ್ನು ವಿತರಿಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ರವಿವಾರ ಕೆ.ಆರ್.ಪುರದ ಭಟ್ಟರಹಳ್ಳಿಯಲ್ಲಿ ಆಹಾರಧಾನ್ಯಗಳ ವಿತರಣೆ ಕಾರ್ಯಕ್ಕೆ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಹಾಗೂ ವಸತಿ ಸಚಿವ ವಿ.ಸೋಮಣ್ಣ ಜೊತೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಲಾಕ್‍ಡೌನ್‍ನಿಂದಾಗಿ ಜನ ಸಂಕಷ್ಟದಲ್ಲಿದ್ದಾರೆ. ಅವರಿಗೆ ಸಹಾಯ ಮಾಡಲು ಸಚಿವ ಬಸವರಾಜ ಮುಂದಾಗಿದ್ದಾರೆ. ಕೆ.ಆರ್.ಪುರ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕೆಲಸ ಮಾಡುವವರು, ಗಾರ್ಮೆಂಟ್ಸ್ ಗಳಲ್ಲಿ ದುಡಿಯುವವರಿದ್ದಾರೆ. ಅಂತಹ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ವಿತರಿಸುತ್ತಿದ್ದಾರೆ ಎಂದು ಅಶೋಕ್ ಹೇಳಿದರು.

ಮುಂದುವರೆದ ದೇಶಗಳಾದ ಅಮೆರಿಕ, ಇಟಲಿ ಸೇರಿದಂತೆ ಇನ್ನಿತರ ಮುಂದುವರೆದ ದೇಶಗಳಲ್ಲಿ ಕೊರೋನ ವೈರಸ್‍ನಿಂದಾಗಿ ಸಾವಿರಾರು ಜನ ಮೃತಪಟ್ಟಿದ್ದಾರೆ. ಆದರೆ, ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಅವರ ಸಮರ್ಥ ನಾಯಕತ್ವದಿಂದಾಗಿ ನಮ್ಮ ದೇಶ ಹಾಗೂ ರಾಜ್ಯದಲ್ಲಿ ಕೊರೋನ ನಿಯಂತ್ರಿಸುವಲ್ಲಿ ಭಾಗಶಃ ಯಶಸ್ಸು ಕಂಡಿದ್ದೇವೆ ಎಂದು ಅವರು ತಿಳಿಸಿದರು.

ಇಡೀ ದೇಶದಲ್ಲಿ ಮೊಟ್ಟಮೊದಲು ಲಾಕ್‍ಡೌನ್ ಘೋಷಿಸಿದ್ದು ನಮ್ಮ ರಾಜ್ಯ ಸರಕಾರ. ಆದುದರಿಂದ, ರಾಜ್ಯದಲ್ಲಿ ಸಾವು ನೋವಿನ ಸಂಖ್ಯೆ ಕಡಿಮೆಯಾಗಿದೆ. ಅಗತ್ಯವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ಬಡವರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದೇವೆ ಎಂದು ಅಶೋಕ್ ಹೇಳಿದರು.

ಕಾರ್ಮಿಕ ಇಲಾಖೆ ವತಿಯಿಂದ ಪ್ರತಿ ಕ್ಷೇತ್ರಕ್ಕೆ 4-5 ಸಾವಿರ ಆಹಾರ ಪ್ಯಾಕೆಟ್‍ಗಳನ್ನು, ಕೆಎಂಎಫ್ ಮೂಲಕ ಪ್ರತಿಯೊಂದು ಮನೆಗೆ ಒಂದು ಲೀಟರ್ ಹಾಲನ್ನು ನೀಡುತ್ತಿದ್ದೇವೆ. ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಮಲಗಬಾರದು ಎಂಬುದು ನಮ್ಮ ಸರಕಾರದ ಉದ್ದೇಶ. ಅದಕ್ಕಾಗಿ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಎಲ್ಲ ಪಕ್ಷಗಳು ಪಕ್ಷಬೇದ ಮರೆತು ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ ಎಂದು ಅವರು ತಿಳಿಸಿದರು.

ಬಿಬಿಎಂಪಿ ಬಜೆಟ್ ಅನುಮೋದನೆ ಪಡೆದುಕೊಳ್ಳಬೇಕಿದೆ. ಸಾಧ್ಯವಾದಷ್ಟು ಕಡಿಮೆ ಕೋರಂ ಇರುವಂತೆ ನೋಡಿಕೊಂಡು ಬಜೆಟ್ ಅನುಮೋದನೆ ಪಡೆದುಕೊಳ್ಳುವ ಸಂಬಂಧ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸುತ್ತೇನೆ. ಬಜೆಟ್ ಅನುಮೋದನೆ ಆಗದಿದ್ದರೆ ಬಿಬಿಎಂಪಿ ವತಿಯಿಂದ ಹಣ ಖರ್ಚು ಮಾಡಲು ಸಾಧ್ಯವಾಗುವುದಿಲ್ಲ ಎಂದು ಅಶೋಕ್ ಹೇಳಿದರು.

ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಮಾತನಾಡಿ, ಕಳೆದ ಎಂಟು ವರ್ಷಗಳಿಂದ ಕ್ಷೇತ್ರದಲ್ಲಿ ಬಡವರಿಗೆ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಆಹಾರಧಾನ್ಯಗಳ ಕಿಟ್‍ಗಳನ್ನು ವಿತರಿಸಿಕೊಂಡು ಬರುತ್ತಿದ್ದೇನೆ. ಈಗ ಸಂಕಷ್ಟದ ಸಮಯ. ಬಡವರು, ಕೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಸುಮಾರು 40 ಸಾವಿರ ಕುಟುಂಬಗಳಿಗೆ 15 ದಿನಗಳಿಗೆ ಬೇಕಾಗುವಷ್ಟು ಆಹಾರಧಾನ್ಯಗಳ ಕಿಟ್‍ಗಳನ್ನು ವಿತರಿಸಲಾಗುತ್ತದೆ ಎಂದರು.

ನಮ್ಮ ಕಾರ್ಯಕರ್ತರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಜನಸಂದಣಿ ಉಂಟಾಗುವುದನ್ನು ತಡೆಯಲು ಪಾಲಿಕೆ ಸದಸ್ಯರ ನೇತೃತ್ವದಲ್ಲಿ ಪ್ರತಿಯೊಂದು ವಾರ್ಡ್‍ನಲ್ಲಿಯೂ ಬಡವರ ಮನೆ ಬಾಗಿಲಿಗೆ ಈ ಆಹಾರ ಧಾನ್ಯಗಳನ್ನು ವಿತರಿಸಲಿದ್ದಾರೆ ಎಂದು ಬಸವರಾಜ ಹೇಳಿದರು.

ಈ ಸಂದರ್ಭದಲ್ಲಿ ವಸತಿ ಸಚಿವ ವಿ.ಸೋಮಣ್ಣ, ಬಿಬಿಎಂಪಿ ಸದಸ್ಯರಾದ ಎಂ.ಎನ್.ಶ್ರೀಕಾಂತ್, ಜಯಪ್ರಕಾಶ್, ಅಂತೋಣಿ ಸ್ವಾಮಿ, ಮುಖಂಡರಾದ ಚಂದ್ರಣ್ಣ, ಶಿವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ದೀಪ ಹಚ್ಚುವುದು ಭಾರತೀಯರ ಸಂಪ್ರದಾಯ

ಕೊರೋನ ಮಹಾಮಾರಿಯಿಂದಾಗಿ ಎಲ್ಲರೂ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಈ ವೈರಾಣು ವಿರುದ್ಧ ಎಲ್ಲರೂ ಒಂದಾಗಿ ಹೋರಾಡಲು ಪ್ರೇರೇಪಿಸುವಂತೆ ಪ್ರಧಾನಿ ದೀಪ ಹಚ್ಚಲು ಕರೆ ನೀಡಿದ್ದಾರೆ. ಭಾರತೀಯ ಸಂಪ್ರದಾಯದಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತರು ಸೇರಿದಂತೆ ಎಲ್ಲರೂ ದೀಪ ಹಚ್ಚುತ್ತಾರೆ. ಇದರಲ್ಲಿ ರಾಜಕೀಯ ಹುಡುಕುವುದು ಬೇಡ. ಎಚ್.ಡಿ.ಕುಮಾರಸ್ವಾಮಿ ಸಾವಿರಾರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೀಪ ಹಚ್ಚಿರುತ್ತಾರೆ. ಅವರಿಗೆ ದೀಪ ಬೇಡವಾದರೆ, ಕ್ಯಾಂಡಲ್ ಅಥವಾ ಮೊಬೈಲ್ ಟಾರ್ಚ್ ಬಳಸಿಕೊಳ್ಳಲಿ. ಆದರೆ, ಮನುಷ್ಯನ ಜೀವ ಮುಖ್ಯ. ಅದರಲ್ಲಿ ಚೆಲ್ಲಾಟವಾಡುವುದು ಬೇಡ.

-ಆರ್.ಅಶೋಕ್, ಕಂದಾಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News