ತಬ್ಲೀಗ್ ಜಮಾತ್ ತನ್ನ ನಿಲುವು ಸ್ಪಷ್ಟಪಡಿಸಬೇಕು: ರೋಷನ್ ಬೇಗ್

Update: 2020-04-05 12:44 GMT

ಬೆಂಗಳೂರು, ಎ.5: ತಬ್ಲೀಗ್ ಜಮಾತ್ ವಿಷಯ ಭಯಾನಕವಾದ ಆಯಾಮವನ್ನು ಪಡೆದುಕೊಳ್ಳುತ್ತಿದೆ. ಜಮಾತ್ ಹಾಗೂ ಅದರ ಚಟುವಟಿಕೆಗಳ ಬಗ್ಗೆ ಮುಸ್ಲಿಮರನ್ನು ಹೊರತುಪಡಿಸಿ ಬೇರೆ ಯಾರಿಗೂ ಈ ಕುರಿತು ಅಷ್ಟೊಂದು ಮಾಹಿತಿ ಇರುವುದಿಲ್ಲ. ರಾಷ್ಟ್ರೀಯ ಶಾಂತಿ ಹಾಗೂ ಸಹಬಾಳ್ವೆಯ ಕಾರಣಕ್ಕಾಗಿ ಮುಸ್ಲಿಮರು ಈ ವಿಚಾರದ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕಾಗಿದೆ ಎಂದು ಮಾಜಿ ಸಚಿವ ಆರ್.ರೋಷನ್ ಬೇಗ್ ತಿಳಿಸಿದ್ದಾರೆ.

ಮಾಧ್ಯಮಗಳಲ್ಲಿ ಇಡೀ ಸಮುದಾಯವನ್ನು ಗುರಿಯನ್ನಾಗಿಸಿಕೊಂಡು ಟೀಕೆಗಳನ್ನು ಮಾಡುತ್ತಿದ್ದು, ಜಮಾತ್ ವತಿಯಿಂದ ಅಧಿಕೃತವಾದ ಯಾವ ಪ್ರತಿಕ್ರಿಯೆಯು ಬಂದಿಲ್ಲ. ದೇಶದಲ್ಲಿ ಈ ಸಾಂಕ್ರಾಮಿಕ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಜಮಾತ್ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳು ಯಾವುವು ಎಂದು ಬಹಿರಂಗಪಡಿಸಿದರೆ ಉತ್ತಮ. ಒಂದು ವೇಳೆ ಯಾವುದೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೆ ಇದ್ದಲ್ಲಿ ಈ ಘಟನೆಗೆ ತಾನೆ ಹೊಣೆ ಹೊರಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಜಮಾತ್‍ನ ಅಂತರಾರಾಷ್ಟ್ರೀಯ ಮಟ್ಟದ ಕೇಂದ್ರವಾಗಿದ್ದುಕೊಂಡು ಆಯೋಜಕರು ಹೆಚ್ಚಿನ ಕಾಳಜಿಯನ್ನು ಹೊಂದಿರಬೇಕಿತ್ತು. ಈಗ ಕೇಳಿ ಬರುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಜಮಾತ್‍ನ ಸದಸ್ಯರು ದೇಶಕ್ಕೆ ತಾವು ಕೈಗೊಂಡಿದ್ದ ಕ್ರಮಗಳು ಅಥವಾ ದಿಲ್ಲಿಯ ಪೊಲೀಸ್ ಸೇರಿದಂತೆ ಅಲ್ಲಿನ ಆಡಳಿತ ಯಾವ ಕಾರಣಕ್ಕಾಗಿ ಜನ ಸಮೂಹ ಸೇರುವುದನ್ನು ತಡೆಯುವಲ್ಲಿ ವಿಫಲವಾಯಿತು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಮುಸ್ಲಿಮರಲ್ಲಿ ಮನವಿ: ಎಪ್ರಿಲ್ 9ರಂದು ಮುಸ್ಲಿಮರು ಶ್ರದ್ಧಾ ಭಕ್ತಿಯಿಂದ ಶಬೇ ಬರಾತ್ ಆಚರಣೆ ಮಾಡುತ್ತಾರೆ. ಸಾಂಪ್ರದಾಯಿಕವಾಗಿ ಎಲ್ಲರೂ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಿ ರಾತಿ ಜಾಗರಣೆ ಮಾಡಿ, ಬೆಳಗ್ಗೆ ಕಬರಸ್ಥಾನಗಳಿಗೆ ಭೇಟಿ ನೀಡಿ ತಮ್ಮನ್ನು ಅಗಲಿರುವ ಬಂಧುಗಳಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಆದರೆ, ಈಗಿನ ಪರಿಸ್ಥಿತಿಯಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುವುದು ಕಷ್ಟಸಾಧ್ಯ. ಆದುದರಿಂದ, ಎಲ್ಲ ಮುಸ್ಲಿಮ್ ಸಹೋದರರಲ್ಲಿ ನನ್ನ ಮನವಿ, ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಲ್ಲಿಯೆ ಶಬೇ ಬರಾತ್ ಸಂದರ್ಭದಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಬೇಕು. ಈ ಸಂಬಂಧ ಗೃಹ ಸಚಿವರು ಹಾಗೂ ಧಾರ್ಮಿಕ ಮುಖಂಡರು ಮುಸ್ಲಿಮರ ಮನವೊಲಿಸಬೇಕು ಎಂದು ರೋಷನ್ ಬೇಗ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಮಾಧ್ಯಮಗಳ ಅಸಹ್ಯದಾಟ

ಮುಸ್ಲಿಮರು ಕೇವಲ ಸರಕಾರದ ಸೂಚನೆಗಳನ್ನಷ್ಟೆ ಪಾಲನೆ ಮಾಡುತ್ತಿಲ್ಲ. ತಮ್ಮ ಕೈಲಾದಷ್ಟು ಅಗತ್ಯ ಇರುವವರಿಗೆ ನೆರವಿನ ಹಸ್ತವನ್ನು ಚಾಚುತ್ತಿದ್ದಾರೆ. ಆದರೂ, ಮಾಧ್ಯಮಗಳು ಎಂದಿನಂತೆ ದೊಡ್ಡಮಟ್ಟದಲ್ಲಿ ತಮ್ಮ ಅಸಹ್ಯ ಆಟವನ್ನು ಆಡುತ್ತಿವೆ.

-ಆರ್.ರೋಷನ್ ಬೇಗ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News