ಭಾರತದಲ್ಲಿ ನೂರರ ಗಡಿ ದಾಟಿದ ಕೊರೋನ ಸಾವಿನ ಸಂಖ್ಯೆ

Update: 2020-04-06 03:44 GMT

ಹೊಸದಿಲ್ಲಿ, ಎ.6: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 27 ಮಂದಿ ಕೊರೋನ ಸೋಂಕಿಗೆ ಬಲಿಯಾಗಿದ್ದು, ಇಡೀ ವಿಶ್ವವನ್ನು ಅಕ್ಷರಶಃ ಬೆಚ್ಚಿ ಬೀಳಿಸಿರುವ ಸಾಂಕ್ರಾಮಿಕದಿಂದ ಭಾರತದಲ್ಲಿ ಮೃತಪಟ್ಟವರ ಸಂಖ್ಯೆ ನೂರರ ಗಡಿ ದಾಟಿದೆ. ರಾಜ್ಯಗಳಿಂದ ಬಂದ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಕೊರೋನ ವೈರಸ್ ಸೋಂಕಿನಿಂದ ಜೀವ ಕಳೆದುಕೊಂಡವರ ಸಂಖ್ಯೆ 124. ಮಹಾರಾಷ್ಟ್ರದಲ್ಲಿ ರವಿವಾರ ಒಂದೇ ದಿನ 13 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ರವಿವಾರ ದೇಶದ ವಿವಿಧೆಡೆಗಳಲ್ಲಿ 541 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 4,000ಕ್ಕಿಂತ ಅಧಿಕವಾಗಿದೆ. ಸತತ ನಾಲ್ಕನೇ ದಿನ 500ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಎಪ್ರಿಲ್ 1ರಂದು 2,000 ಸೋಂಕಿತರಿದ್ದರೆ ರವಿವಾರ ಮಧ್ಯರಾತ್ರಿ ವೇಳೆಗೆ ಸೋಂಕಿತರ ಸಂಖ್ಯೆ 4,200ಕ್ಕೇರಿದೆ.

ಆರೋಗ್ಯ ಇಲಾಖೆ ಅಂಕಿಅಂಶಗಳ ಪ್ರಕಾರ ರವಿವಾರದವರೆಗೆ ಪಾಸಿಟಿವ್ ಪ್ರಕರಣಗಳು 3,374 ಹಾಗೂ ಸೋಂಕಿನಿಂದ ಮೃತಪಟ್ಟವರು 79 ಮಂದಿ. ಕಳೆದ 24 ಗಂಟೆಗಳಲ್ಲಿ 472 ಹೊಸ ಪ್ರಕರಣಗಳು ದೃಢಪಟ್ಟಿದ್ದು, 11 ಸಾವು ಸಂಭವಿಸಿದೆ. ಕೇಂದ್ರ ಹಾಗೂ ರಾಜ್ಯಗಳು ಮಾಹಿತಿ ಸಂಗ್ರಹಿಸುವ ಕಾಲಾವಧಿಯಲ್ಲಿ ಭಿನ್ನತೆ ಇರುವುದರಿಂದ ಈ ಅಂಕಿಅಂಶದಲ್ಲಿ ವ್ಯತ್ಯಾಸ ಕಂಡುಬರುತ್ತದೆ.

ದೇಶದ 274 ಜಿಲ್ಲೆಗಳಲ್ಲಿ ಇದುವರೆಗೆ ಕೊರೋನ ಸೋಂಕು ಪ್ರಕರಣಗಳು ಕಾಣಿಸಿಕೊಂಡಿವೆ. ಇದು ಮತ್ತಷ್ಟು ಹೆಚ್ಚು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಅಧಿಕ ಪ್ರಕರಣಗಳು ವರದಿಯಾಗಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳು ತಮ್ಮ ಅನುಭವವನ್ನು ಇತರ ಜಿಲ್ಲೆಗಳ ಜತೆ ಹಂಚಿಕೊಳ್ಳಬೇಕು ಎಂದು ಸಂಪುಟ ಕಾರ್ಯದರ್ಶಿ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News