ಕೋಮು ದ್ವೇಷ ಹರಡುತ್ತಿರುವ ಮಾಧ್ಯಮ, ಸಂಘಪರಿವಾರ ಕಾರ್ಯಕರ್ತರ ನಡೆ ಖಂಡನೀಯ: ಎನ್‌ಡಬ್ಲ್ಯೂಎಫ್

Update: 2020-04-07 11:03 GMT

ಬೆಂಗಳೂರು : ಸಾವಿರಾರು ಜನರ ಸಾವು-ನೋವಿಗೆ ಕಾರಣವಾಗಿರುವ  ಕೋವಿಡ್-19 ಕೊರೋನ ವೈರಸ್ ನ್ನು  ತಡೆಗಟ್ಟಲು ಭಾರತವು ಸೇರಿದಂತೆ ಇಡೀ ಜಗತ್ತೇ ಹೆಣಗಾಡುತ್ತಿದೆ. ಆದರೆ ಭಾರತದಲ್ಲಿ ಕೋಮು ಮನೋಸ್ಥಿತಿಯ ಮಾಧ್ಯಮಗಳು ಮತ್ತು ಸಂಘಪರಿವಾರದ ಕಾರ್ಯಕರ್ತರು ಮುಸ್ಲಿಮರನ್ನು  ದೂಷಿಸುತ್ತಾ ದ್ವೇಷ ರಾಜಕೀಯದಲ್ಲಿ ತೊಡಗಿರುವುದು ಖಂಡನೀಯ ಎಂದು ನ್ಯಾಷನಲ್ ವುಮೆನ್ಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿ ತಿಳಿಸಿದೆ.

ಜವಾಬ್ದಾರಿಯುತ ಸ್ಥಾನದಲ್ಲಿರುವಂತಹ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಬಿಜೆಪಿಯ ಇನ್ನಿತರ ಶಾಸಕರು ಹಾಗೂ ನಾಯಕರುಗಳು, ಭಾರತದಲ್ಲಿ ಈ ವೈರಸ್ ಹರಡಲು ಮುಸ್ಲಿಮರೇ ನೇರ ಕಾರಣ ಎಂಬ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಮೂಲಕ ಅವರು ಮುಗ್ಧ ಹಿಂದುಗಳ ಮನಸ್ಸಿನಲ್ಲಿ ಕೋಮು ವಿಷಬೀಜ ಬಿತ್ತಿ ಸಮಾಜವನ್ನು ಒಡೆಯುವ ಕೆಲಸದಲ್ಲಿ ತೊಡಗಿರುವುದು ಖಂಡನೀಯ.

ತಬ್ಲೀಗ್ ಜಮಾಅತ್‌ನ ಘಟನೆಯನ್ನು ಹಿಡಿದುಕೊಂಡು ನಿರ್ದಿಷ್ಟ ಸಮುದಾಯವೊಂದರ ಮೇಲೆ ಆರೋಪ ಹೊರಿಸುತ್ತಿರುವುದು ಅಕ್ಷಮ್ಯ. 
ತಬ್ಲೀಗ್ ಜಮಾಅತ್ ನ ಸಭೆಯ ನಂತರ ಇತರ ಸಮುದಾಯದ ಸಾವಿರಾರು ಮಂದಿ ಸೇರಿದ ಹಲವಾರು ಕಾರ್ಯಕ್ರಮಗಳು ಲಾಕ್‌ಡೌನ್ ಮಧ್ಯೆ ನಡೆದಿರುವ ವಿಚಾರ ಈಗಾಗಲೇ ಬಹಿರಂಗಗೊಂಡಿದೆ. ದುರದೃಷ್ಟವಶಾತ್, ಪೂರ್ವಗ್ರಹಪೀಡಿತ ಮಾಧ್ಯಮಗಳು ಇವುಗಳನ್ನು ತೆರೆಮರೆಗೆ ಸರಿಸಿ, ಕೇವಲ ಮುಸ್ಲಿಮ್ ಸಮುದಾಯವನ್ನು ಗುರಿಪಡಿಸಿ ನಿರಂತರ ಚರ್ಚೆ ನಡೆಸುತ್ತಿವೆ. ಲಾಕ್‌ಡೌನ್ ನಿಂದಾಗಿ ಒಂದೆಡೆ ಲಕ್ಷಾಂತರ ಮಂದಿ ನಿರಾಶ್ರಿತರು ತಿನ್ನಲು ಅನ್ನಾಹಾರವಿಲ್ಲದೇ ಹಸಿವಿನಿಂದ ಸಾಯುತ್ತಿದ್ದಾರೆ. ಮತ್ತೊಂದೆಡೆ, ಮಾಧ್ಯಮಗಳು ಸರ್ಕಾರದ ವೈಫಲ್ಯಗಳನ್ನು ಮರೆಮಾಚುತ್ತಾ ಕೇವಲ ತಬ್ಲೀಗ್ ಜಮಾಅತ್‌ನ ಸಭೆಯನ್ನು ವೈಭವೀಕರಿಸಿಕೊಂಡು ಮುಸ್ಲಿಂ ಸಮುದಾಯದ ವಿರುದ್ಧವಾಗಿ ವರದಿ ಪ್ರಸಾರ ಮಾಡುತ್ತಿವೆ‌. ಇದರ ಬಗ್ಗೆ ಜನರು ಜಾಗೃತರಾಗಬೇಕು ಮತ್ತು ಮಾಧ್ಯಮಗಳ ಹಾಗೂ ಬಿಜೆಪಿ ನಾಯಕರು ಹಬ್ಬಿಸುವ ಸುಳ್ಳು ಸುದ್ದಿಗಳಿಗೆ ಬಲಿಯಾಗಬಾರದು.

ದೇಶವೀಡಿ ಈ ಮಹಾ ಮಾರಿಯಿಂದ ತತ್ತರಿಸಿರುವ ಪ್ರಸಕ್ತ ಸನ್ನಿವೇಶ ಕೋವಿಡ್ ಆರೋಗ್ಯ ಇಲಾಖೆಗಳು ಹೊರಡಿಸಿರುವ ಎಲ್ಲಾ ಸೂಚನೆಗಳನ್ನು ಪಾಲಿಸುತ್ತಾ  ಕೋವಿದ್ 19 ವೈರಸ್‌ ಅನ್ನು ಎದುರಿಸಲು ದೇಶದ ಪ್ರತಿಯೊಬ್ಬ ಪ್ರಜೆಯೂ ಸಹಕರಿಸಬೇಕೆಂದು ನ್ಯಾಷನಲ್ ವುಮೆನ್ಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News