ಇಂದಿರಾ ಕ್ಯಾಂಟೀನ್‍ಗಳಿಗೆ ಸಿದ್ದರಾಮಯ್ಯ ಭೇಟಿ: ಉಚಿತ ಊಟದ ವ್ಯವಸ್ಥೆಗೆ ಮನವಿ

Update: 2020-04-07 12:00 GMT

ಬೆಂಗಳೂರು, ಎ.7: ರಾಜ್ಯಾದ್ಯಂತ ಜಾರಿಯಲ್ಲಿರುವ ಲಾಕ್‍ಡೌನ್ ಮುಗಿಯುವವರಿಗಾದರೂ ಇಂದಿರಾ ಕ್ಯಾಂಟೀನ್‍ನಲ್ಲಿ ಉಚಿತ ಊಟದ ವ್ಯವಸ್ಥೆ ಕಲ್ಪಿಸಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪರಲ್ಲಿ ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತಿದ್ದೇನೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಂಗಳವಾರ ನಗರದ ವಿವಿಧ ಬಡಾವಣೆಯಲ್ಲಿರುವ ಇಂದಿರಾ ಕ್ಯಾಂಟೀನ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್ ಸಂದರ್ಭದಲ್ಲಿ ಬಡಜನತೆ, ನಿರ್ಗತಿಕರು, ಬಿಕ್ಷುಕರು ಊಟವಿಲ್ಲದೆ ಪರದಾಡುತ್ತಿರುವುದರ ಕುರಿತು ಸಾರ್ವಜನಿಕರೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಚಿತ ಊಟದ ವ್ಯವಸ್ಥೆಯನ್ನು ತಾತ್ಕಾಲಿಕವಾಗಿಯಾದರು ಮುಂದುವರೆಸಬೇಕೆಂದು ಒತ್ತಾಯಿಸಿದ್ದಾರೆ.

ಉಚಿತ ಊಟ ನೀಡುವುದರಿಂದ ದುರುಪಯೋಗ ಆಗುತ್ತಿದೆ. ಅದಕ್ಕಾಗಿ ದರ ನಿಗದಿ ಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸಮಜಾಯಿಷಿ ನೀಡಿದ್ದಾರೆ. ಆದರೆ, ಉಚಿತವಾಗಿ ಊಟ ನೀಡುತ್ತಿದ್ದ ಸಂದರ್ಭದಲ್ಲಿ 700ಕ್ಕೂ ಹೆಚ್ಚು ಮಂದಿ ಊಟ ಮಾಡಿ ಹೋಗುತ್ತಿದ್ದರು.

ದರ ನಿಗದಿಯಾದ ನಂತರ ನೂರು ಮಂದಿ ಮಾತ್ರ ಹಣ ನೀಡಿ ಊಟದ ಪೊಟ್ಟಣವನ್ನು ಖರೀದಿ ಮಾಡುತ್ತಿದ್ದಾರೆ. ಹಣ ಇಲ್ಲದ ಬಡವರ ಗತಿಯೇನು. ಇವೆಲ್ಲವನ್ನು ಮುಖ್ಯಮಂತ್ರಿ ಪರಾಮರ್ಶಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News