ಲಾಕ್‍ಡೌನ್ ಉಲ್ಲಂಘನೆ ಆರೋಪ: ಬರೋಬ್ಬರಿ 17 ಸಾವಿರ ವಾಹನ ಜಪ್ತಿ

Update: 2020-04-07 13:31 GMT

ಬೆಂಗಳೂರು, ಎ.7: ಲಾಕ್‍ಡೌನ್ ಉಲ್ಲಂಘಿಸಿ ನಗರದಲ್ಲಿ ಹೆಚ್ಚುತ್ತಿರುವ ವಾಹನ ಸಂಚಾರವನ್ನು ತಡೆಯಲು ನಗರ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಇಲ್ಲಿಯವರೆಗೆ 17,384 ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಲಾಕ್‍ಡೌನ್ ಉಲ್ಲಂಘಿಸಿ ಅನಗತ್ಯವಾಗಿ ನಗರದ ವಿವಿಧೆಡೆ ಸಂಚರಿಸುತ್ತಿದ್ದ 16,187 ಬೈಕ್‍ಗಳು, 554 ಆಟೊ, 646 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಲಾಕ್‍ಡೌನ್ ಮುಗಿಯುವವರೆಗೆ ಅವುಗಳನ್ನು ವಾಪಸ್ ನೀಡುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ತಿಳಿಸಿದ್ದಾರೆ.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಅನಗತ್ಯ ವಾಹನ ಸಂಚಾರವನ್ನು ತಡೆಯಲು ನಗರದ ಬಹುತೇಕ ರಸ್ತೆಗಳಲ್ಲಿ ಬ್ಯಾರಿಕೇಡ್‍ಗಳನ್ನು ಅಡ್ಡ ಹಾಕಲಾಗಿದೆ. ಮನೆಯ ಸುತ್ತಮುತ್ತ ಅಗತ್ಯ ವಸ್ತುಗಳಿಗೆ ವಾಹನ ತೆಗೆದುಕೊಂಡು ಹೋಗುವವರನ್ನು ಬಿಟ್ಟು ಅನಗತ್ಯವಾಗಿ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗುವ ವಾಹನ ಸವಾರರನ್ನು ತಡೆದು ಮುಲಾಜಿಲ್ಲದೆ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ನಗರದ ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣ, ಕೇಂದ್ರ-ಆಗ್ನೇಯ, ಈಶಾನ್ಯ ಹಾಗೂ ವೈಟ್‍ಫೀಲ್ಡ್ ಉಪ ವಿಭಾಗಗಳಲ್ಲಿ ವಾಹನ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ. ಯಾರೂ ಅನಗತ್ಯವಾಗಿ ವಾಹನಗಳನ್ನು ರಸ್ತೆಗೆ ತರದಂತೆ ಎಚ್ಚರ ವಹಿಸಲಾಗಿದೆ. ಅಗತ್ಯ ಸೇವೆಗಳಿಗೆ ಪಾಸ್ ಪಡೆದಿರುವವರು, ವೈದ್ಯಕೀಯ, ಅರೆವೈದ್ಯಕೀಯ ಸಿಬ್ಬಂದಿ ಸೇರಿ ಎಲ್ಲರೂ ಕಡ್ಡಾಯವಾಗಿ ಪಾಸ್‍ನ್ನು ತಪಾಸಣೆ ನಡೆಸುವ ಪೊಲೀಸರಿಗೆ ತೋರಿಸಬೇಕು ಎಂದು ತಿಳಿಸಿದ್ದಾರೆ.

ನಕಲಿ ಪಾಸ್ ಕ್ರಮ: ನಕಲಿ ಪಾಸ್‍ಗಳನ್ನು ಇಟ್ಟುಕೊಂಡು ಸಂಚರಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು, ಯಾರು ನಕಲಿ ಪಾಸ್ ತಯಾರು ಮಾಡುವುದಾಗಲಿ ಅದನ್ನು ಬಳಸಿ ಓಡಾಡುವುದಾಗಲಿ ಮಾಡಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಭಾಸ್ಕರ್ ರಾವ್ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News