ಕರ್ನಾಟಕದ ಐಪಿಎಸ್ ಅಧಿಕಾರಿಯ ಮೊಬೈಲ್ ನಂಬರ್ ಬಿಹಾರ, ಕೇರಳ ಕಾರ್ಮಿಕರಿಗೆ ಹೆಲ್ಪ್ ಲೈನ್ !

Update: 2020-04-07 14:16 GMT
ಸೀಮಂತ್ ಕುಮಾರ್ ಸಿಂಗ್

ಬೆಂಗಳೂರು, ಎ. 7 : ಬಿಹಾರದ ಪ್ರಾದೇಶಿಕ ಮಾಧ್ಯಮವೊಂದರ ಎಡವಟ್ಟಿನಿಂದಾಗಿ ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ವೈಯಕ್ತಿಕ ಮೊಬೈಲ್ ನಂಬರ್ ವಲಸಿಗರ ಹೆಲ್ಪ್ ಲೈನ್ ಆಗಿ ಬದಲಾದ ವಿಚಿತ್ರ ಘಟನೆ ನಡೆದಿದೆ. 

ವಲಸಿಗ ಕಾರ್ಮಿಕರಿಗೆ ಆಹಾರ ಮತ್ತು ದಿನಸಿ ಒದಗಿಸುವ ಹೆಲ್ಪ್ ಲೈನ್ ನಂಬರ್ ಎಂದು ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಮೊಬೈಲ್ ನಂಬರ್ ಅನ್ನು ಅಲ್ಲಿನ ಪ್ರಾದೇಶಿಕ ಮಾಧ್ಯಮವೊಂದು ಪ್ರಕಟಿಸಿತ್ತು.  ಈಗ ಈ ಹಿರಿಯ ಅಧಿಕಾರಿಗೆ ಪ್ರತಿದಿನ ಸಹಾಯ ಯಾಚಿಸಿ ನೂರಾರು ಕರೆಗಳು ಬರುತ್ತಿವೆ.

ಐಜಿಪಿ ( ಆಡಳಿತ) ಸೀಮಂತ್ ಕುಮಾರ್ ಸಿಂಗ್ ಅವರೇ ಆ ಹಿರಿಯ ಐಪಿಎಸ್ ಅಧಿಕಾರಿ. ಕೆಲವು ದಿನಗಳ ಹಿಂದೆ ಅವರಿಗೆ ಬಿಹಾರದ ಪರಿಚಿತರೊಬ್ಬರು ಕಾಲ್ ಮಾಡಿ ಬೆಂಗಳೂರಿನಲ್ಲಿ 400 ಕಾರ್ಮಿಕರು ಸಿಲುಕಿದ್ದಾರೆ, ಅವರಿಗೆ ಸಹಾಯ ಮಾಡಿ ಎಂದು ವಿನಂತಿಸಿದ್ದರು. ಅದನ್ನು ಪರಿಶೀಲಿಸಿ ಖಚಿತಪಡಿಸಿಕೊಂಡ ಸೀಮಂತ್ ಸಿಂಗ್ ಅವರು ಹಿರಿಯ ಸಹೋದ್ಯೋಗಿ ಎಡಿಜಿಪಿ ದಯಾನಂದ್ ಅವರ ಸಹಕಾರದಿಂದ ಆ 400 ಮಂದಿಗೆ ಆಹಾರದ ಪೊಟ್ಟಣ ತಲುಪಿಸಿದ್ದರು. 

ಇದನ್ನು ತಿಳಿದ ಬಿಹಾರದ ಪ್ರಾದೇಶಿಕ ಮಾಧ್ಯಮವೊಂದು ಸೀಮಂತ್ ಸಿಂಗ್ ಅವರ ಸಹಾಯದ ಬಗ್ಗೆ ಬರೆದಿದ್ದು ಮಾತ್ರವಲ್ಲದೆ ಅವರ ವೈಯಕ್ತಿಕ ಮೊಬೈಲ್ ನಂಬರ್ ಅನ್ನೂ ಪ್ರಕಟಿಸಿಬಿಟ್ಟಿದೆ. ತಕ್ಷಣ ಈ ನಂಬರ್ ಬಿಹಾರದೆಲ್ಲೆಡೆ ಮಾತ್ರವಲ್ಲದೆ ಜಾರ್ಖಂಡ್, ಕೇರಳ   ಹಾಗು ಕರ್ನಾಟಕದ ಉದ್ದಗಲಗಳಲ್ಲಿ ಆಹಾರ, ದಿನಸಿ ಸಾಮಾನುಗಳ ಹೆಲ್ಪ್ ಲೈನ್ ನಂಬರ್ ಎಂದೇ ವೈರಲ್ ಆಗಿದೆ.

ಈಗ ಸೀಮಂತ್ ಸಿಂಗ್ ಅವರಿಗೆ ಸಹಾಯ ಯಾಚಿಸಿ  ಪ್ರತಿದಿನ ನೂರಾರು ಕರೆಗಳು ಬರುತ್ತಿವೆ. " ಮೊದಲ ಎರಡು ದಿನ ನನಗೆ ಆಶ್ಚರ್ಯವಾಯಿತು. ಫೋನ್ ಕಾಲ್ ಗಳು ಬರುತ್ತಲೇ ಇದ್ದವು, ಆಹಾರ ಒದಗಿಸಿ ಎಂದು ವಿನಂತಿಸುತ್ತಿದ್ದರು. ಅವರು ಅದನ್ನು ಸರಕಾರದ ಹೆಲ್ಪ್ ಲೈನ್ ಎಂದೇ ತಿಳಿದುಕೊಂಡಿದ್ದರು " ಎಂದು ಸೀಮಂತ್ ಸಿಂಗ್ ಅವರು ಇಂಡಿಯಾ ಟುಡೇಗೆ ಹೇಳಿದ್ದಾರೆ.

ಸೀಮಂತ್ ಸಿಂಗ್ ಅವರು ಕಿರಿಕಿರಿಯೇ ಬೇಡ ಎಂದು ಫೋನ್ ಆಫ್ ಮಾಡಿ ಕುಳಿತುಕೊಳ್ಳಲಿಲ್ಲ. ಬದಲಿಗೆ  ತನಗೆ ಬಂದ ಪ್ರತಿಯೊಂದು ಕಾಲ್ ಬಗ್ಗೆ  ಸಂಬಂಧಪಟ್ಟ ಪೊಲೀಸ್ ಠಾಣೆಗೆ ತಿಳಿಸಿ ಅವರು ಸಮಾಜಸೇವಾ ಸಂಘಟನೆಗಳ ನೆರವಿನೊಂದಿಗೆ ಆಹಾರ ಒದಗಿಸುವಂತೆ ಮಾಡುತ್ತಿದ್ದಾರೆ. ಅವರು ನೀಡಿದ ಮಾಹಿತಿ ಪ್ರಕಾರ ಈವರೆಗೆ ಹೀಗೆ ಸುಮಾರು 4000 ಕಾರ್ಮಿಕರ ಮಾಹಿತಿಯನ್ನು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿ ಅವರಿಗೆ  ಆಹಾರ ಒದಗಿಸಲಾಗಿದೆ. 

ಸಹಾಯ ಕೇಳಿದ  ನೂರಾರು ಕರೆಗಳಿಗೆ ಸ್ಪಂದಿಸಿದ ಬಳಿಕ ಈಗ ಸಹಾಯ ಮಾಡಲು ಆಸಕ್ತ ದಾನಿಗಳ ಕರೆಗಳು ತನಗೆ ಬರುತ್ತಿವೆ ಎಂದು ಹೇಳಿದ್ದಾರೆ ಸೀಮಂತ್ ಕುಮಾರ್ ಸಿಂಗ್. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News