ರೈತರಿಗೆ ಕಳಪೆ ಬೀಜ ಪೂರೈಸಿದರೆ ಕಠಿಣ ಕ್ರಮ: ಬಿ.ಸಿ.ಪಾಟೀಲ್

Update: 2020-04-08 07:45 GMT

ಯಾದಗಿರಿ : ರೈತರಿಗೆ ಕಳಪೆ ಬೀಜ, ಕಳಪೆ ಕ್ರಿಮಿನಾಶಕ ಪೂರೈಕೆಗೆ ಅವಕಾಶವಿಲ್ಲ. ಯಾವುದೇ ಕಾರಣಕ್ಕೂ ಕಂಪೆನಿಗಳು ಗುಣಮಟ್ಟವಿಲ್ಲದ ಕಳಪೆ ಬೀಜ ಗೊಬ್ಬರ, ಕ್ರಿಮಿನಾಶಕ ಪೂರೈಸಬಾರದು. ಈ ಬಗ್ಗೆ ಕಂಪೆನಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದ್ದು, ಇಂತಹ ತಪ್ಪನ್ನು ಯಾರೇ ಎಸಗಿದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ ಪ್ರವಾಸದ ಮೂರನೇ ದಿನವಾದ ಇಂದು ಕೃಷಿ ಸಚಿವರು ಯಾದಗಿರಿಗೆ ಭೇಟಿ ಕೊಟ್ಟು ಜಿಲ್ಲಾ ಕೃಷಿ, ತೋಟಗಾರಿಕಾ, ಆರೋಗ್ಯ, ಪೊಲೀಸ್ ಸೇರಿದಂತೆ ಇತರೆ ಇಲಾಖೆಗಳ ಜೊತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೊರೋನ ಲಾಕ್‌ಡೌನ್‌ನಿಂದ ಕೃಷಿ ಮತ್ತು ರೈತರ ಸ್ಥಿತಿಗತಿ ಕುರಿತು ಚರ್ಚೆ ನಡೆಸಿದರು.

ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೃಷಿ ಚಟುವಟಿಕೆಗಳು ಯಾವುದೇ ಕಾರಣಕ್ಕೂ ನಿಲ್ಲುವ ಹಾಗಿಲ್ಲ. ಎಪಿಎಂಸಿಯಲ್ಲಿ ರೈತರ ಉತ್ಪನ್ನಗಳನ್ನು ಕೊಂಡೊಯ್ಯಲಾಗಲೀ ಮಾರಾಟಕ್ಕಾಗಲೀ ಯಾವುದೇ‌ ನಿರ್ಬಂಧವಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಗ್ರೀನ್ ಪಾಸ್ ಗಳನ್ನು ಪಡೆದು ಸಾಗಾಣಿಕೆ ಮಾಡಬಹುದು. ಅನಾವಶ್ಯಕವಾಗಿ ಯಾವುದೇ ಪೊಲೀಸರಾಗಲೀ ಬೇರೆ ಯಾರೇ ಆಗಲೀ ರೈತರ ಪರಿಕರ ಮಾರಾಟಕ್ಕಾಗಲೀ, ಯಂತ್ರೋಪಕರಣಗಳ ಸಾಗಾಣಿಕೆಗಾಗಲೀ ತೊಂದರೆ ಮಾಡಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಸಿದರು.

ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಿದ್ದರೆ ಕೊರೋನದಂತಹ ವೈರಸ್‌ನಿಂದ ಆರೋಗ್ಯ ಹದಗೆಡುತ್ತದೆ. ಅದೇ ರೋಗನಿರೋಧಕ ಶಕ್ತಿ ಹೆಚ್ಚಿದ್ದರೆ ದೇಹದಲ್ಲಿ ಆರೋಗ್ಯವಿರುತ್ತದೆ. ಇಂತಹ ರೋಗನಿರೋಧಕ ಶಕ್ತಿ ವಿಟಮಿನ್ 'ಸಿ'ಸತ್ವವುಳ್ಳ ನಿಂಬೇಹಣ್ಣಿನಲ್ಲಿದೆ. ಜನರು ಹೆಚ್ಚೆಚ್ಚು ನಿಂಬೆಹಣ್ಣು ಉಪಯೋಗಿಸಿ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ರೈತರಿಗೂ ಸಹಕರಿಸಿದಂತಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಸೌತೆಕಾಯಿ, ನಿಂಬೆಹಣ್ಣು, ಅನಾನಸ್, ಕಲ್ಲಂಗಡಿ ತಿಂದರೆ ಕೊರೋನ ಬರುತ್ತದೆ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದರು. ಇಂತಹದ್ದೇ ಸುಳ್ಳು ಸುದ್ದಿ ಕೋಳಿ ಮೊಟ್ಟೆ ಮಾರಾಟಕ್ಕೂ ಬಾಧಕವಾಗಿತ್ತು. ಈ ಎಲ್ಲವು ಆರೋಗ್ಯಕ್ಕೆ ಒಳ್ಳೆಯ ಪದಾರ್ಥಗಳೆ. ಇಂತಹ ಸುಳ್ಳು ಸುದ್ದಿಗೆ ಯಾರೂ ಕಿವಿಗೊಡಬಾರದು ಎಂದು ತಿಳಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News